ಚಾರುದತ್ತ ೨೩
👳♀ಚಾರುದತ್ತ ಬೆಳಕು- ೨೩👳♀
*यः कश्चिच्चकितगतिर्निरीक्षते मां सम्भ्रान्तो द्रुतमुपसर्पति स्थितो वा । सर्वांस्तांस्तुलयति दोषतो मनो मे स्वैर्दोषैरभवति हि शङ्कितो मनुष्यः ।।*
_ಚಾರುದತ್ತನ ಮನೆಯಲ್ಲಿ ತನ್ನ ಪ್ರಿಯೆಗಾಗಿ ಭೂಷಣಗಳನ್ನು ಕದ್ದು ಪ್ರಿಯೆಗೆ ಒಪ್ಪಿಸಿದಾಗ ಅವಳ ಇಂಗಿತದಂತೆ ಮತ್ತೆ ಚಾರುದತ್ತನ ಬಳಿ ಹೋಗಲು ಹಿಂಜರಿದು ಅವನ ಪ್ರಿಯಳಾದ ವಸಂತಸೇನೆಯ ಬಳಿ ಬಂದಾಗ ಸಜ್ಜಲಕನಾಡುವ ಮಾತು._
_ನಮ್ಮ ಕುಕೃತ್ಯದ ಬಗೆಗಿನ ಹೆದರಿಕೆ ನಿಜಕ್ಕೂ ಕಷ್ಟ.ಏನೋ ಒಂದು ತಪ್ಪು ಮಾಡಿದಾಗ ನಮ್ಮ ಮನಸ್ಸು ಅದರ ಬಗ್ಗೆಯೇ ಚಿಂತಿಸಿ ಸದಾ ಹೆದರಿಕೆಯಿಂದ ನರಳಿಸುತ್ತದೆ. ಅದನ್ನು ಯಾರ ಬಳಿಯಲ್ಲಾದರೂ ನಿವೇದಿಸಿದರೆ ತಕ್ಕಮಟ್ಟಿಗೆ ಆ ಕಾಲದಲ್ಲಿ ದೂರವಾದೀತು. ಅದನ್ನೇ ಇವನು ಈ ಶ್ಲೋಕದಲ್ಲಿ ಮುಂದುವರೆಸುತ್ತಿದ್ದಾನೆ. ಯಾರಾದರೂ ಸಂಶಯದ ದೃಷ್ಟಿಯಿಂದ ನನ್ನನ್ನು ನೋಡಿದರೆ, ಚಂಚಲಕಣ್ಣುಗಳು ನನ್ನನ್ನೇ ಎವೆಯಿಕ್ಕದಂತೆ ನೋಡಿದರೆ, ಅವಸರದಲ್ಲಿ ನನ್ನನ್ನು ಸಮೀಪಿಸಿದರೆ ಅಂತಹವರನ್ನೆಲ್ಲ ನನ್ನ ಮನಸ್ಸು ನನ್ನ ತಪ್ಪು ತಿಳಿದು ದಂಡಿಸಲು ಬಂದವರೆಂದು ಭಾವಿಸುತ್ತದೆ. ತಪ್ಪು ಮಾಡಿದ ಸಮಯದಲ್ಲಿ ಬಂದ ಪ್ರತಿಯೊಬ್ಬರನ್ನೂ ನನ್ನ ತಪ್ಪು ವಿಚಾರಿಸಲು ಬಂದವರೆಂದೇ ಭಾವಿಸುವುದು ಮಾನವನ ಸಹಜಗುಣ. ನನ್ನ ಮನಸ್ಸೂ ಈ ಆಭರಣ ಕದ್ದ ಕಾರಣದಿಂದ ಯಾರನ್ನು ನೋಡಿದರೂ ಅವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಏಕೆಂದರೆ ಮಾನವನಾದವನು ತನ್ನ ತಪ್ಪುಗಳಿಂದ ಸದಾ ಸಂಶಯಕ್ಕೆ ಈಡಾಗುತ್ತಾನೆ. ಆರಕ್ಷಕರಿಗೆ ಮಾತ್ರ ಅಪರಾಧಿಯ ಸಂಶಯ ಬರುವುದಲ್ಲ. ಅಪರಾಧಿಯು ಯಾರನ್ನು ಕಂಡರೂ ಆರಕ್ಷಕರೆಂದೇ ಭಾವಿಸುತ್ತಾನೆ. ಅನೇಕ ಪ್ರಕರಣಗಳಲ್ಲಿ ಸಿಕ್ಕಿಬೀಳುವ ಅಪರಾಧಿಗಳು ಹೆದರಿಕೆಯಿಂದ ಅಥವಾ ಗಾಬರಿಯಿಂದ ಅಥವಾ ಇನ್ನೇನೋ ಮುಚ್ಚಿಡಹೋಗಿ ಸಿಕ್ಕಿಬೀಳುತ್ತಾರೆ. ಇಲ್ಲಿ ಆರಕ್ಷಕರ ಸೂಕ್ಷ್ಮತೆಗಿಂತ ಅವರ ಮನದ ದೋಷಗ್ರಸ್ತ ಭಾವವೇ ಅವರನ್ನು ಸಿಕ್ಕಿಹಾಕಿಸುತ್ತದೆ. ಪ್ರಕೃತ ಸಜ್ಜಲಕನೂ ಕದ್ದ ಆವರಣವನ್ನು ಹಿಂತಿರುಗಿಸಲು ಬಂದವನು ಈಕೆ ತನ್ನ ಮೇಲೆ ಕಳ್ಳತನದ ಆರೋಪ ಹೊರಿಸುವಳೋ ಎಂದು ಭಯಗೊಂಡಿದ್ದಾನೆ. ಭಾಸ ಮನೋವೈಜ್ಞಾನಿಕ ವಿಷಯವೊಂದನ್ನು ಸಹಜವಾಗಿ ತೆರೆದಿಟ್ಟಿದ್ದಾನೆ. ನಾವೂ ಕೆಲವೊಮ್ಮೆ ಸುಳ್ಳು ಹೇಳಿದಾಗ ಅಥವಾ ಏನಾದರೂ ತಪ್ಪು ಮಾಡಿದಾಗ ಕೆಲವು ಸಮಯವಾದರೂ ಮನದಲ್ಲಿ ಭಯಗೊಳ್ಳುವೆವು. ಸಣ್ಣ ಸಂಗತಿಗೇ ಆತಂಕಗೊಳ್ಳುವ ಮನವು ದೊಡ್ಡ ಅಪರಾಧಕ್ಕೆ ಮತ್ತೆಷ್ಟು ಶಂಕಿತವಾಗಬಹುದು!_
📝ಸಂಗ್ರಹ ಲೇಖನ. ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಇಣುಕಿ
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ