ರಾಮಾಯಣ ೧೭೮
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೮🏝📖
*ತತಃ ಪ್ರೀತಮನಾ ರಾಜಾ ಪ್ರಾಪ್ಯ ಯಜ್ಞಮನುತ್ತಮಮ್ | ಪಾಪಾಪಹಂ ಸ್ವರ್ನಯನಂ ದುಷ್ಕರಂ ಪಾರ್ಥಿವರ್ಷಭೈಃ ||*
_ಯಜ್ಞವನ್ನು ನೋಡಲು ಬಂದವರೆಲ್ಲರಿಗೂ ಬಯಸಿದ ವಸ್ತುಗಳನ್ನು ಧಾರಾಳವಾಗಿ ದಾನ ಮಾಡಿದನು ರಾಜಾ ದಶರಥ. ಅವರ ಆಶೀರ್ವಾದ ಬಯಸಿ ದೀರ್ಘದಂಡ ನಮಸ್ಕಾರ ಮಾಡಿದನು. ಅವರೆಲ್ಲರೂ ಸಂತೋಷದಿಂದ ಪುತ್ರವಂತನಾಗು ಎಂದು ಹರಸಿದರು. ರಾಜನ ಯಜ್ಞದ ಮುಖ್ಯ ಸಂಕಲ್ಪವೇ ಅದು. ಬರೀ ಸಂತಾನ ಮಾತ್ರವಲ್ಲ, ಈ ಯಜ್ಞ ಎಂದಿಗೂ ಪಾಪವನ್ನು ತೊಳೆಯುವಂತಹದು. ಇದಕ್ಕಿಂತ ಉತ್ತಮವಾದ ಸಾಧನ ಪಾಪ ಕಳೆಯಲು ಮತ್ತೊಂದಿಲ್ಲ. ಸರಿಯಾಗಿ ಬದುಕಿದರೆ ಹೇಗೆ ಪಾಪ ಬಂದೀತು ಎಂದರೆ ಹುಲ್ಲಾಗಲಿ ಮಾಂಸವಾಗಲಿ ತಿಂದರೆ ಪ್ರಾಣಹಾನಿ ಮಾಡಿದ ಪಾಪ. ತಿನ್ನದಿದ್ದರೆ ಆತ್ಮಹತ್ಯೆಯ ಪಾಪ. ಹಾಗಾಗಿ ಕ್ಷಣ ಜೀವಿಸಿದರೂ ಆಗುವ ಪಾಪದ ರಾಶಿ ಸಾವಿರಾರು ಜನ್ಮಗಳಲ್ಲಿ ಕಳೆಯಲು ಆಗದಷ್ಟು. ತನು-ಮನ-ಧನಗಳ ಪೂರ್ಣತ್ಯಾಗವೇ ಪಾಪನಿವಾರಕ. ಅದು ಯಜ್ಞದಲ್ಲಿ ಸಾಕಾರಗೊಳ್ಳುತ್ತದೆ. ಸ್ವರ್ಗಸಾಧನವಾದುದೂ ಹೌದು ಈ ಅಶ್ವಮೇಧ. ಉಳಿದ ರಾಜರಿಂದ ಆಚರಿಸಲು ಅಸಾಧ್ಯವೆನಿಸಿದ ಅದ್ಭುತವಾದ ಈ ಯಜ್ಞದ ಮೂಲಕ ದಶರಥನು ಸಂತಾನಕ್ಕೆ ಪ್ರತಿಬಂಧಕವಾದ ಅನೇಕ ಪಾಪಗಳನ್ನು ಪರಿಹರಿಸಿಕೊಂಡನು. ಸುಮಂತ್ರನ ಮಾತನ್ನು ಮತ್ತೆ ನೆನಪಿಸಿಕೊಂಡು ಸಂತಾನ ಪಡೆಯಲು ಮಾಡಬೇಕಾದ ಕಾರ್ಯದ ಬಗೆಗೆ ಚಿಂತಿಸಿದನು. ಪ್ರತಿಬಂಧಕ ದೂರವಾದರೆ ಮತ್ತೇನು ಎಂದರೆ ಕೊಳೆತದ್ದನ್ನು ದೂರ ಮಾಡಿದ ಕ್ಷಣ ಮಾವು ತಿಂದ ಹಾಗೆ ಆಗದು. ಅನಂತರ ತೊಳೆದು ಸಿಪ್ಪೆ ತೆಗೆದು ಬಾಯಿಗಿಡಬೇಕಾದ ಕೆಲಸ ಉಳಿದಿರುತ್ತದೆ. ಇಲ್ಲೂ ದೊಡ್ಡ ಅಡೆಯೊಂದು ನಿವಾರಣೆಯಾದಾಗ ಮುಂದಿನ ಎಲ್ಲಾ ಪ್ರಯತ್ನಗಳು ಸಫಲವಾಗುವವು ಎಂಬ ನಿರೀಕ್ಷೆಯಲ್ಲಿ ರಾಮನ ಪ್ರತೀಕ್ಷೆಯನ್ನು ಮಾಡತೊಡಗಿ ಋಷ್ಯಶೃಂಗರ ಬಳಿ ನಿವೇದಿಸಿಕೊಂಡನು._
*ತಥೇತಿ ಚ ಸ ರಾಜಾನಮುವಾಚ ದ್ವಿಜಸತ್ತಮಃ | ಭವಿಷ್ಯಂತಿ ಸುತಾರಾಜಂಶ್ಚತ್ವಾರಸ್ತೇ ಕುಲೋದ್ವಹಾಃ || ಇಷ್ಟಿಂ ತೇಹಂ ಕರಿಷ್ಯಾಮಿ ಪುತ್ರೀಯಾಂ ಪುತ್ರಕಾರಣಾತ್ | ಅಥರ್ವಶಿರಸಿ ಪ್ರೋಕ್ತೈರ್ಮಂತ್ರೈಃ ಸಿದ್ಧಾಂ ವಿಧಾನತಃ ||*
_ರಾಜನ ಮಾತಿಗೆ ಉತ್ತರರೂಪವಾಗಿ ಮಹರ್ಷಿಗಳಾಡಿದ ನುಡಿ-ರಾಜನೇ, ನಿನ್ನ ಅಪೇಕ್ಷೆಯಂತೆ ಆ ನಿಟ್ಟಿನಲ್ಲಿ ತೊಡಗುವೆ. ಚಿಂತಿಸದಿರು. ಕುಲವನ್ನು ಬೆಳಗಿಸುವ ನಿನಗಿಂತಲೂ ಕೀರ್ತಿಪಡೆವ ನಾಲ್ವರು ಪುತ್ರರು ಜನಿಸುವರು.ಇಲ್ಲಿ ಪುತ್ರರೆಂದರೆ ಮಕ್ಕಳು ಎಂದು ಪ್ರಧಾನ ಅರ್ಥ. ಸಂಸ್ಕೃತ ಭಾಷೆಯಲ್ಲಿ ಮಗನಿಗೂ-ಮಗಳಿಗೂ ಪುತ್ರ ಎಂದೇ ಕರೆವುದು. ಅಪ್ಪನಿಂದ ಹುಟ್ಟಿದ ಮಕ್ಕಳೆಲ್ಲರೂ ಪುತ್ರರೇ ಸರಿ. ಹಾಗಾಗಿ ಗಂಡು ಮಾತ್ರ ಹುಟ್ಟಲಿ ಎಂದಲ್ಲಾ ಅವರ ಅಭಿಪ್ರಾಯ ಹೊರತು ಮಕ್ಕಳಾಗಲಿ ಎಂದು. ನಮ್ಮ ಮಾತುಗಳೆಲ್ಲವೂ ಅನಂತರ ಕಾರ್ಯ ನಡೆದಾಗ ಸಾರ್ಥಕವಾಗುವವು. ಋಷಿಗಳ ಹಾಗೂ ಸಾಧುಗಳ ಮಾತು ಹಾಗಲ್ಲ. ಮುಂದೆ ನಡೆವ ಘಟನೆಯೇ ಅವರ ಮಾತಿನಲ್ಲಿ ಮೂಡಿಬಂದಿರುತ್ತವೆ. ಒಂದು ವೇಳೆ ಸುಮ್ಮನೆ ನುಡಿದರೂ ಅದು ಸತ್ಯವಾಗುವುದು. ರಾಜನು ಸಂತೋಷದಿಂದ ಗುರುಗಳೇ ಮಕ್ಕಳಾಗುವ ರೀತಿ ಹೇಗೆ? ಯಾವಾಗ ಆಗುವರು? ನಾನೇನು ಧಾರ್ಮಿಕ ವಿಧಿಗಳನ್ನು ಆಚರಿಸಬೇಕು? ಎಂದೆಲ್ಲಾ ಪ್ರಶ್ನಿಸಿದನು. ಕ್ಷಣಕಾಲ ಚಿಂತಿಸಿದ ಋಷಿಗಳು ಅಥರ್ವಣವೇದದ ಮಂತ್ರಗಳಿಂದ ಮಾಡುವ ಕಾಮನೆಯೇ ಪ್ರಧಾನವಾದ ಒಂದು ಸಣ್ಣ ಯಜ್ಞವನ್ನು ಮಾಡುವುದೆಂದು ನಿಶ್ಚಯಿಸಿದರು. ಅಶ್ವಮೇಧವು ಮುಖ್ಯವಾಗಿ ಲೋಕದಲ್ಲಿ ಅರಾಜಕತೆಯನ್ನು ತೊಡೆದು ವ್ಯವಸ್ಥೆಯನ್ನು ಸರಿದಾರಿಯಲ್ಲಿ ತರುವ ಲೋಕಕಲ್ಯಾಣದ ಉದ್ದೇಶದಿಂದ ಮಾಡಿದ್ದರೆ ಇದು ಅದರ ಅಂಗವಾಗಿ ಸ್ವಂತ ಕಾಮನೆಯ ಈಡೇರಿಕೆಗೆ ಮಾಡುವಂತಹದ್ದು. ಪುತ್ರಕಾಮೇಷ್ಟಿಯ ಪ್ರಧಾನ ಉದ್ದೇಶವೇ ಮಕ್ಕಳಾಗುವಂತಹದ್ದು. ಬೇರೆ ಯಾವ ಕಾಮನೆಯೂ ಇಲ್ಲ. ಬೇಕುಬೇಡಗಳ ಪ್ರಾಪ್ತಿಗೆ ಪ್ರಮುಖ ಸಾಧನ ಅಥರ್ವಣವೇದದ ಮಂತ್ರಗಳು. ಅವುಗಳಿಂದಲೇ ಈ ಯಜ್ಞ ಮಾಡಲು ಉಪಕ್ರಮಿಸಿದನು ಮಹರ್ಷಿ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ