ಚಾರುದತ್ತ೨೨

👳‍♀ಚಾರುದತ್ತ ಬೆಳಕು- ೨೨👳‍♀

*त्वत्स्नेहबद्धहृदयो हि करोम्यकार्यं सन्तुष्टपूर्वपुरुषे$पि कुले प्रसूतः । रक्षामि मन्मथगृहीतमिदं शरीरं मित्रं च मां व्यपदिशस्यपरं च यासि ।।*

_ವಸಂತಸೇನೆಯನ್ನು ಪ್ರೀತಿಸುವ ಸಜ್ಜಲಕನೆಂಬ ವಿಟನ ಮಾತು. ಪ್ರಿಯೆಯ ಪ್ರೀತಿಯನ್ನು ಸಂಪಾದಿಸಲು ಚಾರುದತ್ತನ ಮನೆಗೆ ಕನ್ನ ಹಾಕಿ ಆಭರಣಗಳನ್ನು ತಂದಿದ್ದಾನೆ. ಬರುವಾಗ ಯಾರನ್ನೋ ಕೊಂದೋ ಹೊಡೆದೋ ಬಂದಿಯಾ ಎಂದು ಚೇಟಿಯು ಪ್ರಶ್ನಿಸಿದಾಗ ಹಾಗೆಲ್ಲ ಮಾಡುವವನಲ್ಲ ಈ ಹೃದಯಚೋರ. ಕೇವಲ ನಿನ್ನ ಪ್ರೀತಿ ಬಯಸಿ ಈ ಭೂಷಣಗಳನ್ನು ಕದ್ದಿರುವೆನು ಎನ್ನುತ್ತಾನೆ. ಆಗ ಆ ವೇಶ್ಯೆಯು ತುಂಬಾ ಒಳ್ಳೆಯ ವಿಷಯ, ಇದು ನನಗೆ ಪ್ರಿಯ ಎನ್ನುವಳು. ಆಗ ಅವನಾಡುವ ಮಾತು- ನನ್ನ ಪೂರ್ವಜರು ತುಂಬಾ ಸಂತೋಷದಿಂದಿರುವ ಕಾರಣ ನನ್ನ ಜನ್ಮ ಶ್ರೇಷ್ಠವಾದ ವಂಶದಲ್ಲಿ ಉಂಟಾಯಿತು. ಪಿತೃಗಳು ದುಃಖತಪ್ತರಾಗಿದ್ದರೆ ಮಕ್ಕಳು ನಾನಾ ಕಾರಣಗಳಿಂದ ದುಃಖಿಸಬೇಕಾಗುತ್ತದೆ. ಆದರೆ ನನಗೆ ದುಃಖಕಾರಣ ಯಾವುದೂ ಇಲ್ಲ. ಉತ್ತಮ ವಂಶದಲ್ಲಿ ಜನನ, ಪಾಲನೆ ಪೋಷಣೆಗಳು ಸುಖಮಯವಾಗಿ ನಡೆದವು. ಆದರೂ ನಿನ್ನಂತಹ ಸುರಸುಂದರಿಯ ಬಯಸಿ ನಿನ್ನ ಪ್ರೀತಿಯಿಂದ ಬಂಧಿತನಾಗಿ ಈ ಅಕಾರ್ಯವನ್ನೆಲ್ಲಾ ಎಸಗುತ್ತಿರುವೆ. ಕಳ್ಳತನ ನಿಂದಿತಕರ್ಮವೆಂದು ಗೊತ್ತಿದ್ದರೂ ಪ್ರೇಮವೊಂದೇ ನನ್ನನ್ನು ಈ ಕಾರ್ಯದಲ್ಲಿ ತೊಡಗಿಸುತ್ತಿದೆ. ಕಾಮದಿಂದ ಸುಟ್ಟುಹೋಗುತ್ತಿರುವ ಈ ನನ್ನ ತನುವನ್ನು ಹೇಗೊ ರಕ್ಷಿಸಿಕೊಂಡಿದ್ದೇನೆ. ನರನಿಗೆ ಯಾವ ಭಾವವಾದರೂ ಹೆಚ್ಚಾದಾಗ ಶರೀರದ ಉಷ್ಣತೆ ಹೆಚ್ಚಾಗಿ ದೇಹ ಸುಡುತ್ತದೆ. ತಂಪು ಎನ್ನುವುದು ಸಮಾಧಾನದ ಸಂಕೇತ. ಉಷ್ಣತೆಯು ಚಡಪಡಿಕೆ, ಹಪಾಹಪಿ, ಬಯಕೆಯ ಸಂಕೇತ. ಆದರೆ ನೀನು ಮಾಡುತ್ತಿರುವುದಾದರೂ ಏನು? ನನ್ನನ್ನು ಪ್ರಿಯನೆಂದು ಮಾತಿನಲ್ಲಿ ಕರೆದು ಸಂತೋಷಪಡಿಸುತ್ತಿ, ಮನಃಪೂರ್ವಕವಾಗಿ ಇನ್ನೊಬ್ಬನನ್ನು ಪ್ರಿಯನೆಂದು ಅಂಗೀಕರಿಸಿರುವೆ. ನನ್ನ ಬಗೆಗೆ ನಿನ್ನ ಪ್ರೀತಿಯನ್ನು ಕೇವಲ ಮಾತಿನಲ್ಲಿ ಮಾತ್ರ ತೋರುತ್ತಿರುವೆ‌. ಹೃದಯದಿಂದ ಮತ್ತಾರನ್ನೋ ( ಚಾರುದತ್ತ) ನನ್ನು ನೆನೆಯುತ್ತಿರುವೆ. ಕುಲೀನನಾದ ನನ್ನ ಪರಿಶ್ರಮ ಹಾಗೂ ನಿನಗಾಗಿ ತಹತಹಿಸುತ್ತಿರುವ ಈ ನನ್ನ ತನುವನ್ನು ನೋಡಿಯೂ ನೀನೇಕೆ ನನ್ನ ಬಗೆಗೆ ಕರುಣೆ ತೋರಲೊಲ್ಲೆ ಎಂಬ ಪ್ರೀತಿಪೂರ್ವಕ ಆಕ್ಷೇಪ._

📝ಸಂಗ್ರಹ ಲೇಖನ. ಶ್ರೀನಿಧಿ ಅಭ್ಯಂಕರ್. 

ಎಲ್ಲಾ ಲೇಖನಗಳಿಗೆ ಇಣುಕಿ
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩