ರಾಮಾಯಣ ೧೮೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೧🏝📖 

*ತಮೇವ ಹತ್ವಾ ಸಬಲಂ ಸಬಾಂಧವಂ ವಿರಾವಣಂ ರಾವಣಮುಗ್ರಪೌರುಷಮ್ | ಸ್ವರ್ಲೋಕಮಾಗಚ್ಛ ಗತಜ್ವರಶ್ಚಿರಂ ಸುರೇಂದ್ರಗುಪ್ತಂ ಗತದೋಷಕಲ್ಮಷಮ್ ||*

_ದೇವತೆಗಳ ಪ್ರಾರ್ಥನೆ ಮಹಾವಿಷ್ಣುವನ್ನು ಕುರಿತು- ಹೇ ದೇವದೇವ, ಸೈನ್ಯ ಹಾಗೂ ಬಂಧುಸಮೇತನಾದ, ಅತ್ಯುಗ್ರಪರಾಕ್ರಮಿಯಾದ, ಸರ್ವಜನರಿಗೂ ದುಃಖದಾಯಕನಾದ, ರಾವಣನ ವಧೆ ಮಾಡಿ ದೇವತೆಗಳ ಚಿರಕಾಲದ  ಜ್ವರವನ್ನು ನಿವಾರಿಸಿ ಇಂದ್ರನ ಆಳ್ವಿಕೆಯಲ್ಲಿ ರಕ್ಷಿತವಾದ ಈ ಸ್ವರ್ಗಕ್ಕೆ ಆಗಮಿಸು. ರಾವಣನ ಪರಾಕ್ರಮದ ಬಗೆಗೆ ದೇವತೆಗಳಿಗೆ ಪೂರ್ಣ ಅರಿವಿದೆ. ಉಗ್ರಪೌರುಷ ಎಂದು ಕರೆಯುತ್ತಾರೆ. ಅವನ ಪರಾಕ್ರಮ ಸಹಿಸಲು ಅಸಾಧ್ಯ. ಹಾಗಾಗಿಯೇ ಅವನಿಂದ ದೇವತೆಗಳಿಗೆ ಚಿರಕಾಲದ ಜ್ವರ ಅಥವಾ ಬಾಧೆ. ಬಹುಕಾಲ ಒಂದೇ ಸ್ಥಾನದಲ್ಲಿ ನೆಲೆನಿಂತ ಬಾಧಾಗ್ರಹದಂತಿರುವನು ಇ ದುಷ್ಟ. ಅವನನ್ನು ಬಲ ಹಾಗೂ ಬಂಧು ಎರಡರ ಸಹಿತ ಮುಗಿಸು ಎನ್ನುತ್ತಾರೆ. ಬಲ ಉಳಿದರೆ ಇನ್ನೊಬ್ಬ ಬಂದು ಪೀಡಿಸಿಯಾನು. ಬಂಧುಗಳು ಉಳಿದರೆ ಅದೇ ಮನಸ್ಥಿತಿ ಲೋಕಕ್ಕೆ ತೊಂದರೆ ಕೊಟ್ಟೀತು. ಹಾಗಾಗಿ ದುಷ್ಟತನಕ್ಕೆ ಬೆಂಗಾವಲಾದ ಬಲವನ್ನೂ-ಬಂಧವನ್ನೂ ಕಳಚಿಬಿಡಬೇಕು. ಯುದ್ಧದ ಪೂರ್ವದಲ್ಲಿ ಹನುಮಂತ ಸುಮಾರಾಗಿ ಈ ಕೆಲಸ ಮಾಡುತ್ತಾನೆ. ಇಷ್ಟೆಲ್ಲಾ ಮಾಡಿ ನೀನು ಅಲ್ಲೇ ವಾಸಮಾಡದಿರು. ಹರಿಯ ನೆಲೆ ಇಲ್ಲದಿರೆ ನಮ್ಮ ಅಧಿಕಾರ-ಸುಖಗಳು ಹರಿದುಹಂಚಿಹೋದೀತು. ಹಾಗಾಗಿ ಆದಷ್ಟು ಶೀಘ್ರ ಸುರಲೋಕಕ್ಕೆ ಬಂದುಬಿಡು ಎನ್ನುವರು ಅಮರರು. ಅಮರರಿಗೇ ಈ ಭಯವಿರಬೇಕಾದರೆ ಮರಣಭಯದಲ್ಲಿ ದಿನವೂ ಬದುಕುವ ನಮಗೆಷ್ಟು ಚಿಂತೆ! ಹರಿಯ ಸ್ಮರಣೆಯಲ್ಲಾದರೂ ನಮ್ಮ ಮನ ನೆಲೆಸಿರಬೇಕು‌._

*ಉತ್ಸಾದಯತಿ ಲೋಕಾಂಸ್ತ್ರೀನ್ ಸ್ತ್ರಿಯಶ್ಚಾಪ್ಯಪಕರ್ಷತಿ| ತಸ್ಮಾತ್ತಸ್ಯ ವಧೋ ದೃಷ್ಟೋ ಮಾನುಷೇಭ್ಯಃ ಪರಂತಪ||*

_ವಿಷ್ಣುವು ತನಗೆ ದುಷ್ಟರ ವಧೆಯ ಮಾರ್ಗ ಗೊತ್ತಿದ್ದರೂ ದೇವತೆಗಳ ಬಳಿ ಪ್ರಶ್ನಿಸಿದಾಗ ದೇವತೆಗಳು ಆಡುವ ಮಾತು- ಲೋಕಕಂಟಕನೆನಿಸಿದ ಅವನನ್ನು ಸಂಹರಿಸು. ಬ್ರಹ್ಮವರದರ್ಪದಿಂದ ಮೆರೆಯುತ್ತಿರುವ ಅವನು ಅಲ್ಪರಾದ ಮಾನವರು ನನ್ನನ್ನು ಕೊಲ್ಲಲಾರರೆಂದು ಭಾವಿಸಿರುವನು. ಹಾಗಾಗಿ ಮನುಜನಾಗಿ ಜನಿಸು. ರಾವಣನು ತಪ್ಪು ಮಾಡಿದ್ದರೂ ವಿಚಾರಣೆ ಮೊದಲಾದವನ್ನು ಮಾಡದೇ ದೈತ್ಯರೆಂಬ ಕಾರಣಕ್ಕೆ ಹೇಗೆ ವಧಾರ್ಹ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಅತಿಗರ್ವಿತನಾಗಿ ಮೂರು ಲೋಕಗಳನ್ನು ಪೀಡಿಸುತ್ತಿದ್ದಾನೆ. ನಮ್ಮ ಶಕ್ತಿ-ಬುದ್ಧಿಗಳು ನಮ್ಮ ಬೆಳವಣಿಗೆಗೆ ಪೂರಕ ಆಗಬೇಕೇ ಹೊರತು ಮತ್ತೊಬ್ಬರ ಪೀಡೆಗೆ-ಹಿಂಸೆಗಲ್ಲ. ಸುಂದರರಾದ ಸ್ತ್ರೀಯರೆಲ್ಲರನ್ನೂ ಅಪಹರಿಸುತ್ತಿದ್ದಾನೆ. ರಾಜನಾದವನು ಬಹುವಲ್ಲಭನಾದರೂ ಆ ವರಣಕ್ಕೆ ಒಂದು ರೀತಿನೀತಿಯಿದೆ. ಕಂಡ ಕಂಡ ಹೆಣ್ಣಿಗೆ ಆಸೆ ಪಡುವುದು ರಾಜನ ರೀತಿಯಲ್ಲ. ಸೀತೆಯ ಅಪಹಾರದ ಪೂರ್ವದಲ್ಲಿ ರಾವಣ ಅಪಹರಿಸಿದ, ಬಲಾತ್ಕರಿಸಿದ ಸ್ತ್ರೀಯರು ನೂರಾರು‌. ಹಾಗಾಗಿ ಅದೊಂದೇ ಅವನ ಕುಕೃತ್ಯವಲ್ಲ. ಇವೆರಡೇ ಕಾರಣ ಸಾಕು ರಾವಣನನ್ನು ಕಂಡಕಂಡಲ್ಲಿ ಕೊಲ್ಲಲು. ಹೇಗೆ ಜನಸಮೂಹಕ್ಕೆ ಭಯ ಉಂಟುಮಾಡುವ ಕ್ರಿಮಿಗಳನ್ನು ಶರಣಾಗದಿದ್ದರೆ ಹೊಡೆದು ಕೊಲ್ಲುವರೋ ರಾವಣನಂತಹ ದುಷ್ಟರಿಗೂ ಅದೇ ಸರಿಯಾದ ರೀತಿ. ಅರ್ವಾಚೀನ ಕವಿಗಳ ರಾಮಾಯಣ ಆಧಾರಿತ ಕೃತಿಗಳಿಂದ ರಾವಣನ ಬಗೆಗೆ ಮರುಕ-ಕರುಣೆ ಹುಟ್ಟಬಹುದು. ಆದರೆ ವಾಲ್ಮೀಕಿಗಳು ಸತ್ಯ ಹೇಳುವಲ್ಲಿ ಹಿಂದೆ ಬೀಳಲಿಲ್ಲ. ಹಾಗಾಗಿಯೇ ಲೋಕವಂದ್ಯರಾದರು._

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩