ಮಹಾಭಾರತ ೨೩
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೩
*ಅದ್ಯ ಪೌಷ್ಯಂ ಯೋಗಮುಪೈತಿ ಚಂದ್ರಮಾಃ*
_ವಿವಾಹಕ್ಕೆ ಶ್ರೇಷ್ಠವಾದುದು ಪುಷ್ಯ ನಕ್ಷತ್ರ. ಚಂದ್ರನು ಇಂದು ಪುಷ್ಯದಲ್ಲಿ ಇದ್ದಾನೆ. ಹಾಗಾಗಿ ಪಾಂಡುಪುತ್ರನೇ ಇಂದೇ ಅವಳನ್ನು ವರಿಸು ಎನ್ನುವನು ದ್ರುಪದ. ವಿವಾಹಕ್ಕೆ ಯೋಗ್ಯ ದಿನದ ಬಗ್ಗೆ ಇಂತಹ ಪ್ರಸಂಗಗಳು ಉಪಯುಕ್ತ ಮಾಹಿತಿ ನೀಡುತ್ತವೆ._
*ಪ್ರದಕ್ಷಿಣಂ ತೌ ಪ್ರಗೃಹೀತಪಾಣೀ ಸಮಾನಯಾಮಾಸ ಸ ವೇದಪಾರಗಃ*
_ಧೌಮ್ಯನು ಅಗ್ನಿಯನ್ನು ಪ್ರಜ್ವಲಿಸಿ ಮಂತ್ರಪೂರ್ವಕವಾಗಿ ಹೋಮಿಸಿ ಪಾಣಿಗ್ರಹಣ ಮಾಡಿಕೊಂಡ ಅವರನ್ನು ಅಗ್ನಿಗೆ ಪ್ರದಕ್ಷಿಣೆ ಮಾಡಿಸಿದನು. ಅಗ್ನಿಸಾಕ್ಷಿಯಾಗಿ ಪ್ರದಕ್ಷಿಣೆ ಬಂದು ಸ್ವೀಕರಿಸುವ ಪದ್ಧತಿ ಕೆಲವರ ಮತದಂತೆ ಆಧುನಿಕ ವೈದಿಕರದ್ದಲ್ಲ. ಮಹಾಭಾರತದ ಪೂರ್ವದ್ದು. ಹಾಗಾಗಿ ಶಾಸ್ತ್ರ ವಿಹಿತವಾದ ಪ್ರಕ್ರಿಯೆಯೇ ಆಗಿದೆ ಅದು._
*ಅಹನ್ಯಹನ್ಯುತ್ತಮರೂಪಧಾರಿಣೋಮಹಾರಥಾಃ ಕೌರವವಂಶವರ್ಧನಾಃ*
_ಹೀಗೆ ಒಂದೊಂದು ದಿನ ಒಬ್ಬೊಬ್ಬ ಪಾಂಡವರು ಪ್ರತ್ಯೇಕವಾಗಿ ಅವಳ ಕೈ ಹಿಡಿದು ವರಿಸಿದರು. ಒಂದೇ ದಿನ ಪಾಂಡವರೈವರ ಮದುವೆ ನಡೆದದ್ದಲ್ಲ. ಏಕೆಂದರೆ ಹುಡುಗಿ ಒಬ್ಬಳೇ ಇದ್ದವಳು. ಹಾಗಾಗಿ ಶಾಸ್ತ್ರ ಪ್ರಕ್ರಿಯೆಯನ್ನು ಪ್ರತಿಯೊಬ್ಬರಿಗೂ ಸಂಪೂರ್ಣ ನಡೆಸಲು ಸಮಯವೂ, ಅವರವರ ನಕ್ಷತ್ರಕ್ಕನುಗುಣವಾದ ಮುಹೂರ್ತಗಳೂ ಅವಶ್ಯಕವಾದುದರಿಂದ ಬೇರೆ ಬೇರೆ ದಿನಗಳಲ್ಲಿ ವಿವಾಹವಾದರು. ಪ್ರಕ್ರಿಯೆ ಒಂದೇ ತೆರನಾಗಿದ್ದರೂ ಶ್ರದ್ಧೆ ಧಾರಾಳವಾಗಿತ್ತು.ಈಗಿನ ಜನರಲ್ಲಿ ಮುಖ್ಯವಾದವನು ಮಾಡಿದ ಮೇಲೆ ನಾವು ಹೇಗೆ ಮಾಡಿದರೂ ನಡೆಯುತ್ತದೆಂಬ ಅಶ್ರದ್ಧೆಯ ಭಾವ ಧಾರಾಳವಾಗಿದೆ. ಹಾಗಾಗಿಯೇ ಫಲವೂ ಕೆಲವೊಮ್ಮೆ ಕೆಲವರನ್ನು ಮಾತ್ರ ಆಶ್ರಯಿಸುತ್ತದೆ._
*ನಾಮ ಸಂಕೀರ್ತಯಂತ್ಯಸ್ತಾಃ ಪಾದೌ ಜಗ್ಮುಃ ಸ್ವಮೂರ್ಧಭಿಃ*
_ಪಾಂಡವರು ಸ್ವಲ್ಪ ಕಾಲ ಅಲ್ಲೇ ಸುಖವಾಗಿ ವಿವರಿಸಿದರು. ಈ ಸಮಯದಲ್ಲಿ ದ್ರುಪದನ ಪತ್ನಿಯರು ಕುಂತಿಯ ಬಳಿ ಹೋಗಿ ತಲೆಬಾಗಿ ಪಾದ ಮುಟ್ಟಿ ನಮಸ್ಕರಿಸಿದರು. ಯೋಗ್ಯತೆಯನ್ನು ಅನುಸರಿಸಿ ಗೌರವ ಕೊಡುವ ಆದರ್ಶ ಇಲ್ಲಿ ಸ್ಪಷ್ಟವಾಗಿದೆ. ಕುಂತಿ ಪ್ರಕೃತ ಯಾವ ರಾಣಿಯ ಅಥವಾ ಎತ್ತರದ ಸ್ಥಾನವನ್ನು ಆಶ್ರಯಿಸದಿದ್ದರೂ ಪಾಂಡವರಂತಹ ವೀರರಿಗೆ ಜನ್ಮ ನೀಡಿದ ವೀರಸೂ. ಹಾಗಾಗಿ ಸಹಜವಾದ ಹೆಚ್ಚಿನ ಗೌರವ ಅವಳಿಗೆ ತೋರಿಸಿದ್ದು.ರಾಣಿಯರೂ ಯೋಗ್ಯರನ್ನು ಗೌರವಿಸುತ್ತಿದ್ದದು ಅವರ ವಿನಯತೆಗೆ ಉತ್ತಮ ನಡವಳಿಕೆಗೆ ಸಾಕ್ಷಿ. ಈಗಿನ ಜನರಲ್ಲಿ ಅಲ್ಪ ಐಶ್ವರ್ಯ ಬಂದರೂ ಎಲ್ಲರೂ ತಮ್ಮನ್ನೇ ಗೌರವಿಸಬೇಕೆಂದು ಬಯಸುವರೇ ಹೊರತು ನಾವಾಗಿ ಗೌರವಿಸುವ ಉದಾರತೆ ತೋರುವೆವೇ!_
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ