ರಾಮಾಯಣ ೭೨
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೨
*ಪತಿತಸ್ಯ ಕಪೇರಸ್ಯ ಹನುರೇಕಾ ಶಿಲಾತಲೇ ಕಿಂಚಿದ್ಭಿನ್ನಾ ದೃಢಹನೋರ್ಹನುಮಾನೇಷ ತೇನ ವೈ ನಾಸ್ಯ ಶಕ್ಯಂ ಬಲಂ ರೂಪಂ ಪ್ರಭಾವೋ ವಾಪಿ ಭಾಷಿತುಮ್*
_ಉದಯ ಪರ್ವತದಿಂದ ಬಿದ್ದ ಹನುಮನ ದವಡೆಯು ಬಂಡೆಯೊಂದಕ್ಕೆ ತಾಗಿ ಗಾಯಗೊಂಡು ಹನುಮಂತನೆಂದು ಪ್ರಸಿದ್ಧನಾದನು. ಇವನ ಬಲ ರೂಪ ಸಾಮರ್ಥ್ಯಗಳು ಎಷ್ಟೆಂದು ಅಂದಾಜಿಸಲು ಸಾಧ್ಯವಿಲ್ಲ. ಒಂದೊಂದು ಬಾರಿ ಒಂದೊಂದು ರೀತಿಯ ಪರಾಕ್ರಮ ತೋರುವ ಇವನ ಗತಿಯನ್ನು ಗ್ರಹಿಸುವುದೇ ಕಷ್ಟ._
*ಯಸ್ಮಿನ್ನಚಲತೇ ಧರ್ಮೋ ಯೋ ಧರ್ಮನ್ನಾತಿವರ್ತತೇ*
_ಶುಕನು ರಾವಣನಿಗೆ ಹೇಳುತ್ತಿದ್ದಾನೆ. ಆ ಹನುಮನ ಪಕ್ಕದಲ್ಲಿ ಇರುವ ವೀರನಿರುವನಲ್ಲ. ಅವನು ಎಂದಿಗೂ ಧರ್ಮವನ್ನು ಮೀರಿ ನಡೆಯುವವನಲ್ಲ. ಧರ್ಮವು ಇವನಲ್ಲಿ ಎಂದಿಗೂ ಚಲಿಸದು. ಅಂದರೆ ಅಧರ್ಮವನ್ನು ಇವನು ಆಶ್ರಯಿಸಲಾರ, ಅಥವಾ ಧರ್ಮವು ಇವನನ್ನು ಬಿಟ್ಟು ಎಂದಿಗೂ ಹೋಗದು. ರಾಕ್ಷಸರೇ ರಾಮನ ಬಗೆಗೆ ಹೊಗಳುವ ಮಾತಿದು. ಧರ್ಮನಿಷ್ಠೆ ರಾಮನಿಗೆ ಎಷ್ಟಿತ್ತೆಂಬುದು ಈ ಮಾತಿನಿಂದ ತಿಳಿದುಬರುತ್ತದೆ._
*ಯಸ್ಯೈಷಾ ಕಾಂಚನೀ ಮಾಲಾ ಶೋಭತೇ ಶತಪುಷ್ಕರಾ*
_ಸುಗ್ರೀವನ ಬಗೆಗೆ ಹೇಳುವ ಮಾತು. ಸುಗ್ರೀವನ ಕಂಠದಲ್ಲಿ ನೂರು ಕಮಲಗಳ ಚಿನ್ನದ ಮಾಲೆಯು ಯಾವಾಗಲೂ ಶೋಭಿಸುತ್ತಿತ್ತು. ದೇವ- ಮನುಷ್ಯರೂ ಇದರ ಬಗೆಗೆ ಬಹಳ ಆಸೆಯನ್ನು ಇಟ್ಟುಕೊಂಡಿದ್ದರು. ಸೌಭಾಗ್ಯಲಕ್ಷ್ಮಿ ಇದರಲ್ಲಿ ಸದಾ ನೆಲೆಸಿದ್ದಳು._
*ಶತಂ ಕೋಟಿಸಹಸ್ರಾಣಾಂ ಶಂಖ ಇತ್ಯಭಿಧೀಯತೇ ಮಹಾಶಂಖಸಹಸ್ರಾಣಾಂ ಶತಂ ಬೃಂದಮಿತಿ ಸ್ಮೃತಮ್*
_ನೂರು ಲಕ್ಷಗಳಿಗೆ ಒಂದು ಕೋಟಿಯೆಂದೂ, ಒಂದು ಲಕ್ಷ ಕೋಟಿಗಳಿಗೆ ಶಂಖವೆಂದೂ, ಒಂದು ಲಕ್ಷ ಶಂಖಗಳಿಗೆ ಮಹಾಶಂಖವೆಂದೂ, ಒಂದು ಲಕ್ಷ ಮಹಾಶಂಖಗಳಿಗೆ ಬೃಂದವೆಂದೂ, ಒಂದು ಲಕ್ಷ ಬೃಂದಗಳಿಗೆ ಮಹಾಬೃಂದವೆಂದೂ, ಒಂದು ಲಕ್ಷ ಮಹಾಬೃಂದಗಳಿಗೆ ಪದ್ಮವೆಂದೂ, ಒಂದು ಲಕ್ಷ ಪದ್ಮಗಳಿಗೆ ಮಹಾಪದ್ಮವೆಂದೂ, ಒಂದು ಲಕ್ಷ ಮಹಾಪದ್ಮಗಳಿಗೆ ಖರ್ವವೆಂದೂ, ಒಂದು ಲಕ್ಷ ಖರ್ವಗಳಿಗೆ ಮಹಾಖರ್ವವೆಂದೂ, ಒಂದು ಲಕ್ಷ ಮಹಾಖರ್ವಗಳಿಗೆ ಸಮುದ್ರವೆಂದೂ, ಒಂದು ಲಕ್ಷ ಸಮುದ್ರಗಳಿಗೆ ಓಘವೆಂದೂ, ಒಂದು ಲಕ್ಷ ಓಘಗಳಿಗೆ ಮಹೌಘವೆಂದು ಹೆಸರು. ಇಂತಹ ಒಂದು ಕೋಟಿ ಮಹೌಘದಷ್ಟು ವಾನರಯೋಧರು ಇಲ್ಲಿ ನೆರೆದಿದ್ದರು. ಇದನ್ನು ನೋಡಿದರೆ ರಾಮ ರಾವಣ ಯುದ್ಧದ ಅಗಾಧತೆ ಅಸಂಖ್ಯಾತ ಪಡೆ ಕಲ್ಪನೆಗೇ ಸಿಗದಿರುವುದೆಂಬ ಅರಿವು ಆಗುವುದು. ಸಂಖ್ಯೆಗಳ ಹೆಸರುಗಳು ಎಷ್ಟು ವಿಧವಾಗಿವೆ ಎನ್ನುವುದು ಮತ್ತೊಂದು ಅಚ್ಚರಿ. ಅನಂತರದ ಅಥವಾ ಮೊದಲಿನ ಯಾವ ಸಂಗ್ರಾಮಗಳೂ ಇದರ ಹತ್ತಿರಕ್ಕೂ ಬರಲಾರವೇನೋ!_
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ