ಮಹಾಭಾರತ ೨೫
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೫
*ಧಿಕ್ಕುರ್ವಂತಸ್ತದಾ ಭೀಷ್ಮಂ ಧೃತರಾಷ್ಟ್ರಂ ಚ ಕೌರವಮ್ ಕರ್ಮಣಾ ಸುನೃಶಂಸೇನ ಪುರೋಚನಕೃತೇನ ವೈ*
_ಪಾಂಡವರು ದ್ರೌಪದಿಯ ಕೈ ಹಿಡಿದ ಸುದ್ದಿಯು ಚಾರರ ಮೂಲಕ ಎಲ್ಲರಿಗೂ ತಿಳಿಯಿತು. ರಾಜರುಗಳೆಲ್ಲ ಪುರೋಚನನು ಮಾಡಿದ ಆ ಅರಗಿನರಮನೆಯ ದುಷ್ಟ ಕಾರ್ಯಕ್ಕಾಗಿ ಮೊದಲಿಗೆ ಭೀಷ್ಮನನ್ನು ಅನಂತರ ಕುರುವಂಶದ ಧೃತರಾಷ್ಟ್ರನನ್ನೂ ನಿಂದಿಸಿದರು. ಈ ಘಟನೆ ಭೀಷ್ಮನಿಗೆ ಪಾಠವಾಗಬೇಕಿತ್ತು. ಭೀಷ್ಮನಾಗಲಿ ಧೃತರಾಷ್ಟ್ರನಾಗಲಿ ಇದರಲ್ಲಿ ಸಾಕ್ಷಾತ್ ಪಾಲುದಾರರಲ್ಲ. ದುರ್ಯೋಧನ ಹಾಗೂ ಸಂಗಡಿಗರ ಉಪಾಯವಾಗಿತ್ತು. ಆದರೆ ಜನರ ಭಾವನೆ ಭೀಷ್ಮನ ನೇತೃತ್ವದಲ್ಲಿ ಧೃತರಾಷ್ಟ್ರನ ಆಡಳಿತ ಎಂಬುದು ಆಗಿತ್ತು. ಇಲ್ಲಿ ಭೀಷ್ಮನ ತಪ್ಪೇನೂ ಇಲ್ಲವೆಂದು ಎಷ್ಟು ಸಾರಿದರೂ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಮಾರ್ಗದರ್ಶನ ಮಾಡಬೇಕಾದವರು ತಟಸ್ಥರಾಗುಳಿದರೆ ಏನು ಅನಾಹುತ ನಡೆಯುತ್ತದೆಂಬುದಕ್ಕೆ ಇದು ಸಾಕ್ಷಿ. ಸಹವಾಸದಲ್ಲಿರುವಾಗ ತಿದ್ದಬೇಕು, ಆಗದಿದ್ದರೆ ಸಹವಾಸವನ್ನೇ ಬಿಡಬೇಕು. ಅದು ಬಿಟ್ಟು ನೋಡಿಯೂ ನೋಡದವನಂತೆ ಇದ್ದ ಪರಿಣಾಮ ರಾಜರು ಜನರೂ ಮೊದಲಿಗೆ ಭೀಷ್ಮನನ್ನು ನಿಂದಿಸಿದರು.ನಮ್ಮ ಪ್ರಧಾನಿಗಳೊಮ್ಮೆ ಇಂತಹ ವ್ಯಕ್ತಿತ್ವದ ಬಗ್ಗೆ ಹೀಗೆ ಹೇಳಿದ್ದರು- ರೈನ್ ಕೋಟ್ ಹಾಕಿ ಸ್ನಾನ ಮಾಡಿದ ಹಾಗೆ ಎಂಬಂತೆ. ಭೀಷ್ಮನದ್ದೂ ಅನೇಕ ಪ್ರಕರಣಗಳಲ್ಲಿ ಇಂತಹ ಸ್ನಾನವೇ ಆಗಿತ್ತು._
*ದೈವಂ ತು ಪರಮಂ ಮನ್ಯೇ ಪೌರುಷಂ ತು ನಿರರ್ಥಕಮ್ ಧಿಗಸ್ಮಾತ್ಪೌರುಷಂ ತಾತ ಯದ್ಧರಂತೀಹ ಪಾಂಡವಾಃ*
_ದ್ರೌಪದಿ ಸಿಗದ ನಿರಾಶೆಯಿಂದ ಹಿಂತಿರುಗುವಾಗ ಲಜ್ಜೆಯಿಂದ ದುಶ್ಶಾಸನ ಆಡುವ ಮಾತಿದು. ದೈವವೇ ದೊಡ್ಡದು. ಪೌರುಷ ವ್ಯರ್ಥವಾದುದು. ಪಾಂಡವರು ಇನ್ನೂ ಲೋಕದಲ್ಲಿ ಬದುಕಿರುವುದು ನಮ್ಮ ಪೌರುಷಕ್ಕೇ ಧಿಕ್ಕಾರ! ಅವರನ್ನು ಸಾಯಿಸಲು ಏನೆಲ್ಲಾ ಪ್ರಯತ್ನಪಟ್ಟರೂ ಅವರು ಇನ್ನಷ್ಟು ಮತ್ತಷ್ಟು ಬಲವಂತರಾಗಿ ಮೆರೆಯುತ್ತಿರುವರು. ನಮ್ಮ ಉತ್ತಮ ಎನಿಸಿದ ಯತ್ನಗಳೆಲ್ಲ ಮಣ್ಣು ಪಾಲಾಗುತ್ತಿವೆ. ಅದೃಷ್ಟವೆಂದಾದರೆನ್ನಿ, ದೈವ ನಿರ್ಣಯವೆಂದಾದರೆನ್ನಿ ಇದು ಪೌರುಷವನ್ನು ಮರೆಸುತ್ತದೆ. ನಮ್ಮ ಪ್ರಯತ್ನದೊಡನೆ ದೈವವೂ ಇದ್ದಾಗ ಕಾರ್ಯಗಳು ಯಶಸ್ಸಿನ ದಾರಿ ಹಿಡಿಯುತ್ತವೆ. ಕೇವಲ ಪ್ರಯತ್ನವಿದ್ದು ದೈವ ಅಸಹಕಾರಿ ಆಗಿದ್ದಾಗ ಸಾಮರ್ಥ್ಯ ಮೀರಿದ ಪ್ರಯತ್ನವೂ ಕೈ ಕೊಡುತ್ತದೆ. ಎಷ್ಟು ಸತ್ಯವಾದ ಮಾತು ದುಶ್ಶಾಸನನ ಬಾಯಲ್ಲಿ._
*ಅಬ್ರವೀತ್ಪರಮಪ್ರೀತೋ ದಿಷ್ಟ್ಯಾ ದಿಷ್ಟ್ಯೇತಿ ಭಾರತ*
_ದುರ್ಯೋಧನಾದಿಗಳು ಬಂದ ನಂತರ ವಿಷಯ ಅರಿತ ವಿದುರನು ಧೃತರಾಷ್ಟ್ರನ ಬಳಿ 'ಭಾಗ್ಯವಶಾತ್ ಕುರುಗಳು ಅಭಿವೃದ್ಧಿ ಹೊಂದುತ್ತಿರುವರು ' ಎಂದನು. ಆಗ ಕುರುಡ ರಾಜನ ಮಾತು. ಭಾಗ್ಯ, ನಮ್ಮದು ಭಾಗ್ಯ ಎಂದು ಹೇಳಿದನು. ನಿಜಕ್ಕಾದರೆ ಅವನು ದುರ್ಯೋಧನನೇ ದ್ರೌಪದಿಯ ಪತಿ ಎಂದು ಭಾವಿಸಿದ್ದನು. ಹಾಗಾಗಿ ಹೀಗೆ ಆನಂದಿಸಿದನು. ಅನಂತರ ನಿಧಾನಕ್ಕೆ ವಿದುರ ನಿಜವನ್ನು ನುಡಿದಾಗ ಒಳ ದುಗುಡವನ್ನು ತೋರ್ಪಡಿಸದೇ ಭಾರೀ ಒಳ್ಳೆಯದಾಯಿತೆನ್ನುವನು ಆ ಪುತ್ರಾಂಧ ರಾಜ._
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ