ವೇದ ಧರ್ಮ ೪೯
📗🌾📙 ವೇದ-ಧರ್ಮ 📗🌾📙 ಭಾಗ-೪೯
_ಫಲವನ್ನು ಉದ್ದೇಶವಾಗಿಸಿಕೊಂಡ ಎಲ್ಲಾ ಕರ್ಮಗಳು ಕಾಮ್ಯಕರ್ಮಗಳು. ಸ್ವರ್ಗ ಬೇಕೆಂದರೆ ಜ್ಯೋತಿಷ್ಟೋಮ ಯಾಗ ಮಾಡುವುದೇ ಮುಂತಾದ ಎಲ್ಲಾ ಕರ್ಮಗಳು. ಇವುಗಳನ್ನು ಯಾಕೆ ಬಿಡಬೇಕೆಂದರೆ ಇಂತಹ ಕರ್ಮಗಳು ಜನ್ಮಮರಣ ಚಕ್ರದಿಂದ ಬಿಡುಗಡೆ ಕೊಡಿಸದೆ ಮತ್ತೆ ಮತ್ತೆ ಅದರಲ್ಲೇ ತಿರುಗಿಸುತ್ತವೆ. ಯಯಾತಿಯ ಕಥೆಯಲ್ಲಿ ಅನೇಕ ಕಾಮ್ಯಕರ್ಮಗಳ ಪುಣ್ಯದಿಂದ ಹೊಂದಿದ್ದ ಪುಣ್ಯ ಯಾವಾಗ ಕ್ಷೀಣವಾಯಿತೋ ಆಗಲೇ ಅವನು ಸ್ವರ್ಗದಿಂದ ಜಾರಲಾರಂಭಿಸಿದನು. ಕೆಲವು ಕಾಲದ ಸುಖಕ್ಕೆ ಇವುಗಳೆಲ್ಲವೂ ಹೇತುಗಳಾಗಿವೆ._
_ನಿಷಿದ್ಧ ಕರ್ಮಗಳು - ಪರರಿಗೆ ತೊಂದರೆ ಉಂಟು ಮಾಡುವ ಎಲ್ಲಾ ಕರ್ಮಗಳೂ ನಿಷಿದ್ಧವೇ ಆಗಿವೆ. ಮಾತಿನಲ್ಲಿ ಆಗಲಿ, ದೈಹಿಕವಾಗಿ ಇರಲಿ, ಮಾನಸಿಕವಾಗಿ ಇರಲಿ ನೋಯಿಸುವ ಕರ್ಮಗಳೆಲ್ಲವೂ ಇವುಗಳಲ್ಲೇ ಸೇರುತ್ತವೆ. ಇವಲ್ಲದೆ ಲೋಕ ನಿಂದ್ಯವಾದ ತನ್ನ ಮೇಲೆ ಹತೋಟಿ ಕಳೆದುಕೊಳ್ಳುವ ಮದ್ಯಪಾನ, ಜೂಜು, ವೇಶ್ಯೆಯರ ಅಥವಾ ವಿಟರ ಸಂಗ, ಸಿಕ್ಕಿದ್ದೆಲ್ಲವನ್ನೂ ಕಂಡ ಕಂಡಲ್ಲಿ ತಿನ್ನುವ ಸ್ವಭಾವ, ಅಹಂಕಾರ, ಗರ್ವದಿಂದ ಮೆರೆಯುವುದು ಇತ್ಯಾದಿ. ಇವೆಲ್ಲವೂ ನರಕ ಕಾರಣ._
_ನಿತ್ಯ ಕರ್ಮಗಳನ್ನು ಹಿಂದೆಯೇ ನೋಡಿದ್ದೇವೆ. ನೈಮಿತ್ತಿಕ ಕರ್ಮಗಳು ಹಲವು ಬಗೆ. ಮಕ್ಕಳು ಜನಿಸಿದಾಗ ಮಾಡುವ ನಾಮಕರಣ, ಚೌಲ , ಗ್ರಹಣ ಕಾಲದ ಸ್ನಾನ, ವಿಶೇಷ ದಿನಗಳ ಸಮುದ್ರ ಅಥವಾ ತೀರ್ಥಸ್ನಾನ, ಗೃಹ ಪ್ರವೇಶದ ವಿಧಿ ಮುಂತಾದವುಗಳೆಲ್ಲ ನೈಮಿತ್ತಿಕ ಕರ್ಮಗಳೇ ಆಗಿವೆ. ಒಂದು ನಿಮಿತ್ತ ಇಟ್ಟುಕೊಂಡು ಮಾಡುವ ಕರ್ಮಗಳು._
_ಪ್ರಾಯಶ್ಚಿತ್ತ ಕರ್ಮಗಳು. ಮಾಡಬಾರದ್ದನ್ನು ಮಾಡಿದಾಗ ಅದರ ಪಾಪದ ಪರಿಮಾರ್ಜನೆಗೆ ಮಾಡುವ ಕರ್ಮಗಳು ಇವು. *ಪ್ರಾಯಃ ಪಾಪಂ ವಿಜಾನೀಯಾತ್ ಚಿತ್ತಂ ತಸ್ಯೈವ ಶೋಧನಮ್* ಎಂಬಂತೆ ತಾನು ಮಾಡಿದ್ದು ತಪ್ಪೆಂದು ಮನಃಪೂರ್ವಕವಾಗಿ ಅರಿತು ಮನವನ್ನು ಶೋಧಿಸಿಕೊಂಡು ಮುಂದೆ ಅಂತಹ ಕರ್ಮ ಮಾಡದಿರುವಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ವಿಧಾನ. ಅದು ಬಿಟ್ಟು ತಪ್ಪು ಮತ್ತೆ ಮತ್ತೆ ಮಾಡುತ್ತಾ ಪ್ರಾಯಶ್ಚಿತ್ತ ಮಾಡಿದರೆ ಅದು ಅರ್ಥಹೀನ ಎನಿಸುವುದು. ಕ್ರೈಸ್ತರಲ್ಲಿ ದೇವರಲ್ಲಿ ಕ್ಷಮೆ ಕೇಳುವ ಪದ್ಧತಿ ಇದೆ. ಇದೂ ಪ್ರಾಯಶ್ಚಿತ್ತವೇ ಆಗಿದೆ. ಕಷ್ಟದಲ್ಲಿರುವವರ, ಅನಾಥರ, ದುರ್ಬಲರ ಸೇವೆಯೂ ಒಂದು ಬಗೆಯ ಪ್ರಾಯಶ್ಚಿತ್ತವೇ ಆಗಿದೆ. ಕೇವಲ ದೇಹವನ್ನು ಶೋಷಣೆ ಮಾಡುವುದರ ಬದಲು ಮನದ ಶೋಧನೆ ಇಲ್ಲಿ ಪ್ರಮುಖವಾದಾಗ ಅದು ನಿಜವಾದ ಪ್ರಾಯಶ್ಚಿತ್ತವೆನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ವ್ರತ ಕಾಲದಲ್ಲಿ ಸ್ವಲ್ಪ ಮಾತ್ರ ತಿನ್ನುವ ವ್ಯಕ್ತಿ ಮುಗಿದ ಮೇಲೆ ಹಂಡೆಗಟ್ಟಲೆ ತಿನ್ನುವಂತೆ ಅದು ಆಭಾಸವಾಗುತ್ತದೆ._
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ