ರಾಮಾಯಣ ೭೩
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೩
*ಗೃಹೀತೋ ವಾ ನ ವಿಜ್ಞಾತೋ ಭಾರೋ ಜ್ಞಾನಸ್ಯ ವೋಹ್ಯತೇ*
_ರಾವಣ ತನ್ನ ಮಂತ್ರಿಗಳಾದ ಶುಕ ಸಾರಣರಿಗೆ ನುಡಿಯುವ ಮಾತು. ರಾಜನೀತಿಶಾಸ್ತ್ರ ಅಧ್ಯಯನ ಮಾಡಿರುವಿರಿ. ಆದರೆ ಅದರ ರಹಸ್ಯವನ್ನು ತಿಳಿದುಕೊಂಡಿಲ್ಲ. ನಿಷ್ಫಲವಾಗಿ ವಿದ್ಯೆಯ ಹೊರೆಯನ್ನು ಹೊತ್ತಿದ್ದೀರಿ. ಇಂತಹ ಮೂರ್ಖರೊಡನೆ ಬಾಳುತ್ತ ನಾನು ಬದುಕಿರುವುದು ದೈವಯೋಗವೇ ಸರಿ. ಎಷ್ಟು ಸ್ವಾರಸ್ಯಕರ ಮಾತು. ನಮ್ಮಲ್ಲೂ ಅನೇಕರು ವಿದ್ಯೆಯನ್ನು ಧಾರಾಳವಾಗಿ ಹೊತ್ತಿದ್ದಾರೆ. ಆದರೆ ಅದರ ನಿಜವಾದ ಅರಿವು ಸ್ವಲ್ಪವೂ ಇಲ್ಲ. ಸುಮ್ಮನೆ ಜ್ಞಾನದ ಭಾರದಿಂದ ಒದ್ದಾಡುತ್ತಿದ್ದಾರಷ್ಟೇ. ಅನೇಕ ಪದವಿಗಳು, ಡಾಕ್ಟರೇಟ್ ಎಲ್ಲವನ್ನೂ ಪಡೆದು ಎಲ್ಲರೊಡನೆ ಹೇಗೆ ವ್ಯವಹರಿಸಬೇಕು, ಬದುಕುವ ಕಲೆ ಏನು ಎಂಬುದನ್ನು ಅರಿಯದೇ ಜ್ಞಾನ ಎಂಬ ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ. ಜ್ಞಾನ ಸಮಾಜಕ್ಕೆ ಉಪಯೋಗಿಯಾದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುವುದೇ ಹೊರತು ಸುಮ್ಮನೆ ತಲೆಯಲ್ಲಿ ತುಂಬಿಕೊಂಡಾಗ ಅಲ್ಲ.ರಾವಣ ಅವನ ಮಂತ್ರಿಗಳ ವಿಷಯದಲ್ಲಿ ನುಡಿದದ್ದು ಸುಳ್ಳಾದರೂ ಉಳಿದ ಅನೇಕ ಜ್ಞಾನಿಗಳ ವಿಷಯದಲ್ಲಿ ಸತ್ಯವನ್ನೇ ನುಡಿದಿದ್ದಾನೆ._
*ಚಾರೇಣ ವಿದಿತಃ ಶತ್ರುಃ ಪಂಡಿತೈರ್ವಸುಧಾಧಿಪೈಃ ಯುದ್ಧೇ ಸ್ವಲ್ಪೇನ ಯತ್ನೇನ ಸಮಾಸಾದ್ಯ ನಿರಸ್ಯತೇ*
_ರಾವಣನ ಮತ್ತೊಂದು ಮಾತು ಚಾರರ ಮಹತ್ವವನ್ನು ಸಾರುತ್ತದೆ. ಚಾರರನ್ನು ಕರೆದ ಅವನು ರಾಮನ ನಿದ್ರೆ ಎಚ್ಚರ ವ್ಯವಹಾರ ಹೀಗೆ ಪ್ರತಿಯೊಂದು ಕ್ಷಣಗಳ ಬಗೆಗೂ ವರದಿ ಮಾಡಿ ಎನ್ನುತ್ತಾ ಹೀಗೆ ಹೇಳುವನು. ಬುದ್ಧಿವಂತರಾದ ರಾಜರು ಒಳ್ಳೆಯ ಗುಪ್ತಚರರಿಂದ ಶತ್ರುವಿನ ಸ್ವರೂಪವನ್ನು ಕೂಲಂಕಷವಾಗಿ ಅರಿತು ಅಲ್ಪ ಪ್ರಯತ್ನದಿಂದಲೇ ಯಶಸ್ಸು ಪಡೆಯುವನು. ರಾಜನು ಬರೀ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡರೆ ಪ್ರಯೋಜನವಿಲ್ಲ. ಶತ್ರುಗಳ ಶಕ್ತಿ ದೌರ್ಬಲ್ಯಗಳ ಬಗೆಗೆ ಸರಿಯಾದ ತಿಳುವಳಿಕೆ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಯುದ್ದದಲ್ಲಿ ಯಶಸ್ಸು ಪಡೆಯುವನು. ಈಗಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಂತೂ ಚಾರರು ಬಹು ಮುಖ್ಯರು. ಶತ್ರುದೇಶದ ಚಲನ ವಲನಗಳು, ವ್ಯಾಪಾರ ವ್ಯವಹಾರಗಳು ಇವೆಲ್ಲವನ್ನೂ ಕ್ಷಣಕ್ಷಣಕ್ಕೂ ಗಮನಿಸುತ್ತಾ ಮುಂದಡಿ ಇಡಬೇಕು. ಹೀಗಿಲ್ಲದಿದ್ದರೆ ಕಾರ್ಗಿಲ್ ಯುದ್ಧದಂತಹ ಕೆಟ್ಟ ಪರಿಣಾಮಗಳು ನಮ್ಮನ್ನು ಬಹುಕಾಲ ಬಾಧಿಸುತ್ತವೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ