ಮಹಾಭಾರತ ೨೭
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೭
*ಜಾತಪಕ್ಷಾಃ ವಿದೇಶಸ್ಥಾ ವಿವೃದ್ಧಾಃ ಸರ್ವಶೋದ್ಯ ತೇ ನೋಪಾಯಸಾಧ್ಯಾಃ ಕೌಂತೇಯಾ ಮಮೈಷಾ ಮತಿರಚ್ಯುತ*
_ಕರ್ಣನ ಸಮಯೋಚಿತ ಮಾತು. ಅಪ್ಪಾ, ದುರ್ಯೋಧನ ಇನ್ನೂ ರೆಕ್ಕೆ ಹುಟ್ಟದೆ ಸಮೀಪದಲ್ಲಿ ಶಿಶುಗಳಂತಿದ್ದಾಗಲೇ ಪಾಂಡವರನ್ನು ಏನೂ ಮಾಡಲು ಸಾಧ್ಯವಾಗಲಿಲ್ಲ ನಿನಗೆ. ಈಗವರು ರೆಕ್ಕೆ ಹುಟ್ಟಿದವರಾಗಿ ಅಂದರೆ ಬಲಿಷ್ಠರಾಗಿ ವಿದೇಶದಲ್ಲಿ ಇದ್ದಾರೆ, ಸರ್ವವಿಧದಿಂದಲೂ ಸಮೃದ್ಧಿ ಹೊಂದಿದ್ದಾರೆ. ಈಗ ಯಾವ ಉಪಾಯದಿಂದಲೂ ನಿಗ್ರಹಿಸುವುದು ಸುಲಭವಲ್ಲ.ನಮ್ಮ ಶತ್ರುಗಳು ದುರ್ಗುಣಗಳು ಬೆಳೆಯುವ ಕಾಲದಲ್ಲೇ ಚಿವುಟಿ ಹಾಕಬೇಕು. ಹಾಗಿಲ್ಲದಿದ್ದಲ್ಲಿ ಮುಂದೆ ಅವುಗಳೇ ನಮ್ಮನ್ನು ಚಿವುಟಬಹುದೆಂಬ ಸತ್ಯ ಕರ್ಣನ ಮಾತಿನಲ್ಲಿದೆ._
*ನ ಚ ತೇ ವ್ಯಸನೈರ್ಯೋಕ್ತುಂ ಶಕ್ಯಾ ದಿಷ್ಟಕೃತಾ ಹಿ ತೇ*
_ಪಾಂಡವರ ಬಗೆಗೆ ಸರಿಯಾದ ಅರಿವಿದ್ದದ್ದು ಕರ್ಣನೊಬ್ಬನಿಗೇ ಸರಿ. ಸುಯೋಧನ, ಅವರು ಯಾವ ವ್ಯಸನಕ್ಕೂ ಬಲಿಯಾಗಲಾರರು, ರಾಜ್ಯ ಪದವಿ ಪಡೆಯಲು ಹಂಬಲಿಸಿ ಜಾಗರೂಕರಾಗಿದ್ದಾರೆ, ಒಬ್ಬ ಪತ್ನಿಯಲ್ಲೇ ಅನುರಕ್ತರಾಗಿರುವ ಅವರು ಕಬ್ಬಿಣವನ್ನು ಅಯಸ್ಕಾಂತ ಸೆಳೆದಂತೆ ಅವಳಲ್ಲೇ ಆಕರ್ಷಿತರಾಗಿದ್ದಾರೆ, ಹಾಗಾಗಿ ಬೇರ್ಪಡಿಸುವುದು ಕಷ್ಟ. ಅವಳಂತೂ ಕೆಟ್ಟ ದಶೆಯಲ್ಲಿದ್ದ ಪಾಂಡವರ ಕೈಯನ್ನೇ ಹಿಡಿದಳು, ಈಗ ಉತ್ಕರ್ಷ ಹೊಂದುವ ಕಾಲದಲ್ಲಿ ಬಿಡುವಳೇನು! ಎಷ್ಟು ಸತ್ಯ ಮಾತುಗಳು. ನಮ್ಮನ್ನು ವ್ಯಸನಗಳು ಪೀಡಿಸದಿದ್ದಾಗ ಏನನ್ನು ಬೇಕಾದರೂ ಸಾಧಿಸಬಲ್ಲೆವು ಪಾಂಡವರಂತೆ. ಗುರಿಯೆಡೆಗೆ ಗಟ್ಟಿ ಮನಸ್ಸಿದ್ದಾಗ ಬೇರಾವ ಆಕರ್ಷಣೆಗಳೂ ಮನವನ್ನು ಕೆಡಿಸಲಾರವು. ಇನ್ನು ಯಾರು ನಮ್ಮ ಆಪತ್ತಿನಲ್ಲಿ ಜೊತೆಗಿರುವರೋ ಅವರು ಜೀವಮಾನವಿಡೀ ಜೊತೆಗಿರುವುದು ನಿಶ್ಚಿತ. ಇದನ್ನೇ ಕರ್ಣ ಪಾಂಡವರ ಬಗೆಗೆ ನುಡಿದದ್ದು. ಪಾಂಡವರ ನಡೆ ನಮಗೆ ಹೆಜ್ಜೆ ಹೆಜ್ಜೆಗೂ ಕತ್ತಲು ಕಳೆತುವಂತಹ ದೀಪದ ಬೆಳಕೇ ಸರಿ_
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ