ರಾಮಾಯಣ ೭೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೧

*ಏಷಾಂ ಕೋಟಿ ಸಹಸ್ರಾಣಿ ನವ ಪಂಚ ಚ ಸಪ್ತಾನಿ ಚ ತಥಾ  ಶಂಖಸಹಸ್ರಾಣಿ ತಥಾ ಬೃಂದಶತಾನಿ ಚ*

_ಶುಕನು ವಾನರ ಸೇನೆ ತೋರಿಸುತ್ತಾ ರಾವಣನಿಗೆ ಹೇಳುವ ಮಾತು- ಆ ಸೇನೆ ಲೆಕ್ಕಕ್ಕೆ ಸಿಗದಷ್ಟು ಅಪರಿಮಿತವಾಗಿದೆ. ಆ ಪಡೆಗಳ ಸಂಖ್ಯೆಯು ಕೋಟಿ, ಶಂಖ, ಬೃಂದಗಳ ಲೆಕ್ಕದಲ್ಲಿದೆ. ಹಿಂದೆ ಸಂಖ್ಯೆ ನಮೂದಿಸುವ ವಿಧಾನ ಬೇರೆಯೇ ರೀತಿಯಲ್ಲಿತ್ತೆನ್ನುವುದು ತಿಳಿಯುತ್ತದೆ. ಈಗ ನಾವು ಕನ್ನಡದಲ್ಲಿ ಕೋಟಿಗೆ ಕೊನೆಯಾಗಿದ್ದೇವೆ.ಸಾವಿರ ಲಕ್ಷ ಕೋಟಿ ಎಂದಷ್ಟೇ ಉಲ್ಲೇಖಿಸಲ್ಪಡುತ್ತದೆ. ಹಿಂದೆ ಕೋಟಿ ಕೋಟಿಯಾದಾಗ ಶಂಖ, ಶಂಖ ಅಷ್ಟೇ ಸಂಖ್ಯೆಯಾದಾಗ ಬೃಂದ ಹೀಗೆ ಬಹುವಿಧದಲ್ಲಿತ್ತು. ನಾವೀಗ ಅದನ್ನು ಮರೆತಿದ್ದೇವೆ. ಆಂಗ್ಲ ಪದ್ಧತಿಯಲ್ಲೂ ಬಿಲಿಯನ್ ಗೆ ಕೊನೆಯಾಗಿದ್ದಾರೆ. ಅದರ ನಂತರ ಸಂಖ್ಯೆ ನಮೂದಿಸಲು ಯಾವ ಹೆಸರೂ ಇಲ್ಲ. ನಮ್ಮಲ್ಲಿ ಪದ್ಮ, ಖರ್ವ, ಮಹಾಖರ್ವ ಹೀಗೆ ನಾನಾ ಹೆಸರುಗಳು ಉತ್ತರೋತ್ತರ ಸಂಖ್ಯೆಯನ್ನು ಹೆಸರಿಸುತ್ತಿದ್ದವು. ವಾನರರ ಸೇನೆ ಆ ಎಲ್ಲಾ ಹೆಸರುಗಳನ್ನೂ ಮೀರಿದ ವ್ಯಾಪ್ತಿ ಹೊಂದಿತ್ತು ಎನ್ನುವುದು ಶುಕನ ಭಾವ._

*ಬೃಹ್ಮಣಾ ಸಮನುಜ್ಞಾತಾವಮೃತಪ್ರಾಶಿನಾವುಭೌ ಆಶಂಸೇತೇ ಯುಧಾ ಲಂಕಾಮೇತೌ ಮರ್ದಿತುಮೋಜಸಾ*

_ಮೈಂದ ದ್ವಿವಿದರ ಬಗೆಗೆ ಶುಕನು ಹೇಳುತ್ತಿದ್ದಾನೆ. ಬ್ರಹ್ಮನ ಅನುಜ್ಞೆಯಿಂದ ಅವರಿಬ್ಬರು ಅಮೃತವನ್ನು ಪಾನ ಮಾಡಿದ್ದಾರೆ. ಅಮೃತ ಪಾನ ಮಾಡಿರುವುದು ನೋಡಿದರೆ ಇವರೂ ಅಮರರಾಗಿದ್ದರೇನೋ! ಇದೊಂದು ಶೋಧನೆಯ ವಿಷಯ. ಏಕೆಂದರೆ ರಾಹು- ಕೇತು ಅಮೃತ ಪಾನದ ದೆಸೆಯಿಂದ ಇಂದಿಗೂ ಇದ್ದಾರೆ._

*ಆದಿತ್ಯಮಾಹರಿಷ್ಯಾಮಿ ನ ಮೇ ಕ್ಷುತ್ಪ್ರತಿಯಾಸ್ಯತಿ ಇತಿ ಸಂಚಿಂತ್ಯ ಮನಸಾ ಪುರೈಷ ಬಲದರ್ಪಿತಃ*

_ಹನುಮನ ಕಥೆ ಶುಕನು ಹೇಳುತ್ತಿರುವನು. ಈ ಪರಾಕ್ರಮಿ ವಾನರ ಹಿಂದೆ 'ನನ್ನ ಹಸಿವು ಇಂಗುವುದಿಲ್ಲ ' ಎನ್ನುತ್ತಾ ಉದಿಸುತ್ತಿದ್ದ ಸೂರ್ಯನನ್ನು ಹಿಡಿಯಲು ಹೋದವನು. ಕೊನೆಗೆ ದೇವದಾನವರಿಗೂ ನಿಲುಕದ ಅವನನ್ನು ಸಮೀಪಿಸಲಾಗದೆ  ಉದಯ ಪರ್ವತದಲ್ಲಿ ಬಿದ್ದನು.ಹಾಗೆ ಬಿದ್ದಾಗ ಎಡದವಡೆಯು ಊದಿತು. ಗಾಯಗೊಂಡ ಹನುವಿನ ಅಂದರೆ ಕಪೋಲದ ಕಾರಣ ಹನುಮಂತನೆಂದೇ ಪ್ರಸಿದ್ಧನಾದನು. ಇದು ವಾಲ್ಮೀಕಿಗಳ ಕಥೆ. ಇಂದ್ರನಿಂದ ಏಟು ತಿಂದ ಕಥೆ ಪುರಾಣಾಂತರಗಳಿಂದಲೋ ಅನಂತರ ಬಂದ ರಾಮಾಯಣಗಳಿಂದಲೋ ಲೋಕದಲ್ಲಿ ಪ್ರಸಿದ್ಧವಾದದ್ದಿರಬೇಕು. ಇವನ ತಂದೆ ಕೇಸರಿಯೂ ತನ್ನ ಸೇನೆಯೊಡನೆ ಈ ಯುದ್ಧದಲ್ಲಿ ಪಾಲ್ಗೊಂಡಿದ್ದು ವಿಶೇಷ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩