ವೇದ ಧರ್ಮ ೪೬
📗🌾📙 ವೇದ-ಧರ್ಮ 📗🌾📙 ಭಾಗ-೪೬
_ನಾಸ್ತಿಕರಲ್ಲಿ ಚಾರ್ವಾಕನು ಪ್ರಮುಖ. ಅವನ ಮತದಂತೆ ಈಶ್ವರನು ಕಲ್ಪನೆ ಅಷ್ಟೇ. ನಿಜವಾಗಿ ಇಲ್ಲವೇ ಇಲ್ಲ. ಮಾತಿನ ಆಡಂಬರದ ರೂಪದಲ್ಲಿ ಈಶ್ವರನಿರುವನು. ಜಗದ ಸೃಷ್ಟಿ ಬ್ರಹ್ಮನಿಂದಾದುದಲ್ಲ. ಜಗದ ಒಳಗಿನ ವಸ್ತುಗಳೇ ಈ ಜಗತ್ತನ್ನು ಸೃಷ್ಟಿಸಿವೆ ಎಂಬುದು ಅವನ ವಾದ. ವಿಶ್ವದ ಸ್ವಭಾವವೇ ಹೀಗಿದೆ. ನಿರಂತರ ಸೃಷ್ಟಿ, ನಿರಂತರ ನಾಶ ಎಂಬುದು ಅವನ ಮತ. ವೇದವಾಕ್ಯಗಳೆಲ್ಲ ಅರ್ಥಶೂನ್ಯ. ಅವುಗಳು ಬದುಕು ನಡೆಸಲು ಹುಟ್ಟು ಹಾಕಿದ ಶಬ್ದಗಳು ಎಂದೆಲ್ಲಾ ಆಧುನಿಕ ಸ( ಮಜಾ)ಮಾಜವಾದಿಗಳಂತೆ ಚಾರ್ವಾಕನ ಮತ. ಅನುಮಾನದಿಂದ ದೇವರಿದ್ದಾನೆನ್ನುವುದು ವ್ಯರ್ಥ ಪ್ರಯತ್ನ._
_ಜೈನರೂ ಇವನಂತೆಯೇ ದೇವರ ಅಸ್ತಿತ್ವ ಒಪ್ಪಲಾರರು. ಅವನ ಗುಣಗಳನ್ನು, ರೂಪಗಳನ್ನು ಎಲ್ಲವನ್ನೂ ನಿರಾಕರಿಸುತ್ತಾರೆ. ಆದರೀಗ ಧರ್ಮದ ಉಳಿವಿಗಾಗಿ ಹೆಚ್ಚಿನ ಹಿಂದೂ ದೇವ ದೇವತೆಗಳು ಹಬ್ಬ ಹರಿದಿನಗಳು ರಥೋತ್ಸವ ಹೋಮಾದಿಗಳು ಎಲ್ಲವನ್ನೂ ಸಾರಾಸಗಟಾಗಿ ಅಂಗೀಕರಿಸಿದ್ದಾರೆ. ಹಾಗಾಗಿ ಜಿನನ ಮತ ಈಗ ಸಿದ್ಧಾಂತ ರೂಪದಲ್ಲಿ ಇದೆಯೇ ಹೊರತು ವ್ಯಾವಹಾರಿಕವಾಗಿ ಅಲ್ಲ. ಇವರು ಈಶ್ವರನ ಬದಲಿಗೆ ತೀರ್ಥಂಕರರನ್ನು ಅಂಗೀಕರಿಸಿದ್ದಾರೆ. ತೀರ್ಥಂಕರರೆಲ್ಲ ಮುಕ್ತರು. ಸನಕ ಜನಕ ಮುಂತಾದವರು ಹೇಗೆ ಮುಕ್ತರೋ ಹಾಗೆಯೇ ತೀರ್ಥಂಕರರೆನ್ನುವುದು ಅವರ ಅಭಿಪ್ರಾಯ. ಅನಂತ ಜ್ಞಾನ, ಅನಂತ ದರ್ಶನ, ಅನಂತ ಶಕ್ತಿ, ಅನಂತಸುಖ ಇತ್ಯಾದಿ ಕಲ್ಪನೆ ಇವರಲ್ಲಿದೆ._
_ಬೌದ್ಧರೂ ಕೂಡ ಬ್ರಹ್ಮನನ್ನು ಒಪ್ಪುವುದಿಲ್ಲ. ವಿಶ್ವದ ಸೃಷ್ಟಿಯೆಲ್ಲವೂ ಕಾರ್ಯಕಾರಣ ಭಾವದಿಂದ ನಡೆಯುತ್ತದೆ. ವಿಶ್ವದ ಪ್ರತಿಯೊಂದು ವಸ್ತುವೂ ಕಾರ್ಯಕಾರಣವೆಂಬ ಸಂಕೋಲೆಯೊಳಗೆ ಬಂಧಿಯಾಗಿದೆ. ಅಕಾರಣವಾದ ವಸ್ತು ಇಲ್ಲವೇ ಇಲ್ಲ. ಕಾರ್ಯಕಾರಣ ಸೃಷ್ಟಿಸಿದ್ದು ಈಶ್ವರನೆಂದಾದಲ್ಲಿ ಅವನೇ ಕಾರಣದೊಳಗೆ ಸೇರಿ ಅಪೂರ್ಣನಾಗುವನು ಎಂಬುದು ಸಿದ್ಧಾಂತ. ಹಾಗಾಗಿ ದೇವನೆನ್ನುವುದು ಒಂದು ಭ್ರಮೆ ಎನ್ನುವರು ಬೌದ್ಧರು. ಕಾಲಾಂತರದಲ್ಲಿ ಬುದ್ಧನ ತತ್ವವನ್ನು ಬದಿಗಿರಿಸಿ ಅವನನ್ನೇ ದೇವರೆಂದರು ಅನುಯಾಯಿಗಳು. ಹಾಗಾಗಿ ಅಲ್ಪವಾದರೂ ಅಸ್ತಿತ್ವವನ್ನು ಉಳಿಸಿಕೊಂಡಿತೆನ್ನಬಹುದು._
_ಮೀಮಾಂಸಕರೂ ಕೂಡ ದೇವನನ್ನು ಒಪ್ಪುವುದಿಲ್ಲ. ಅವರ ಮತದಂತೆ ಜಗದ ಸೃಷ್ಟಿ, ಧರ್ಮಾಧರ್ಮ, ಪಾಪ-ಪುಣ್ಯ, ಕರ್ಮಕ್ಕನುಗುಣವಾಗಿ ಫಲ ನೀಡುವುದು ಇತ್ಯಾದಿ ವಿಷಯಗಳಿಗಾಗಿ ಈಶ್ವರನ ಕಲ್ಪನೆ ಭ್ರಾಂತಿಯೇ ಆಗಿದೆ. ಅವರ ಮತದಂತೆ ಈಶ್ವರನ ಅಸ್ತಿತ್ವ ವೇದಗಳಿಂದ ಸಾಧಿತವಾಗುವುದು. ನಿಜವಾಗಿ ಇರುವಂತಹದಲ್ಲ ಇತ್ಯಾದಿ. ಆದರೆ ವೇದವನ್ನು ಪರಮ ಪ್ರಮಾಣ ಎನ್ನುವುದು ಅವರೇ. ಹಾಗಾಗಿ ಅವರ ನಿರಾಕರಣೆ ಹೆಚ್ಚು ನಿಖರವಾದುದಲ್ಲ._
ಮುಂದುವರೆಯುತ್ತದೆ...
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ