ಪ್ರತಿಜ್ಞಾ ಯೌಗಂಧರಾಯಣ ೮
🔥 ಪ್ರತಿಜ್ಞಾ ಯೌಗಂಧರಾಯಣ 🔥೮
*कुलं तावच्छ्लाघ्यं प्रथममभिकाँक्षे हि मनसा तत: सानुक्रोशं मृदुरपि गुणो ह्येष बलवान् । ततो रूपे कान्तिं न खलु गुणत: स्त्रीजनभयात् ततो वीर्योदग्रं न हि न परिपाल्या युवतय: ।।*
_ಮಹಾಸೇನನ ಮಾತು. ಮಗಳನ್ನು ಕೊಡಬೇಕಾದರೆ ಏನೇನು ಗುಣಗಳು ಇರಬೇಕು ಎಂಬುದನ್ನು ಕಂಚುಕಿಯ ಬಳಿ ಹೇಳುತ್ತಿದ್ದಾನೆ. ಮೊದಲಿಗೆ ಶ್ಲಾಘ್ಯವಾದ ಕುಲ. ಇಲ್ಲಿ ನಾವು ಜಾತಿಯ ಉಲ್ಲೇಖವಿಲ್ಲದ ಕುಲ ಗಮನಿಸಬಹುದು. ಯಾವ ಘನಂದಾರಿ ಕೆಟ್ಟ ಕೆಲಸ ಮಾಡಿ ಕುಖ್ಯಾತಿ ಹೊಂದದಿರುವ ಕುಲದವನಾಗಿರಬೇಕು ಹುಡುಗ. ಏಕೆಂದರೆ ಅಪ್ಪ ಅಮ್ಮಂದಿರ ಅಥವಾ ಕುಲದ ಜನರ ಸಹವಾಸ ಅಲ್ಲಿ ಹುಟ್ಟಿದ ಮಕ್ಕಳ ಮನಸ್ಸನ್ನು ಕೆಡಿಸೀತು! ಹಾಗಾಗಿ ಮೊದಲಿಗೆ ಅದನ್ನು ಪೂರ್ಣವಾಗಿ ಗಮನಿಸುವೆ. ಆಹಾರ ಕ್ರಮ, ಜೀವನ ಪದ್ಧತಿ, ಸಂಸ್ಕಾರ ಇವೆಲ್ಲವೂ ಸತ್ಕುಲದಲ್ಲಿ ಹೆಚ್ಚಾಗಿ ಇರುತ್ತವೆ. ನಾನು ಮನಸಾರೆ ಬಯಸುವುದು ಅದನ್ನು. ಅನಂತರ ಮೃದು ಮನಸ್ಸಿನವನಾಗಿರಬೇಕು. ಸದಾ ಜಗಳ ಕಾಯುತ್ತಾ ಹಿಂಸೆಯನ್ನು ಬಯಸುತ್ತಾ ಇನ್ನೊಬ್ಬರನ್ನು ನಿಂದಿಸುತ್ತಾ ಇರುವ ಹುಡುಗ ಬೇಡವೇ ಬೇಡ. ನಟನೆಗಾಗಿ ಮೃದುವಲ್ಲದೆ ನಿಜವಾಗಿಯೂ ಮಾರ್ದವ ಇರಬೇಕು ನಡೆ- ನುಡಿಗಳಲ್ಲಿ. ಅಂತಹ ವ್ಯಕ್ತಿಗಳು ತಮ್ಮ ವರ್ತನೆಯಿಂದಲೇ ಪರರನ್ನು ವಶ ಪಡಿಸಿಕೊಳ್ಳುತ್ತಾರೆ.ಸದ್ವರ್ತನೆಗೆ ತಲೆಬಾಗದ ಜನರಿಲ್ಲ. ಇದೆರಡೂ ಇದ್ದ ಮೇಲೆ ರೂಪವಂತನೋ ಎಂಬುದರ ಕಡೆಗೆ ಗಮನ. ರೂಪವು ಒಂದು ಗುಣ ಎಂಬುದಾಗಿ ರೂಪವನ್ನು ಬಯಸಿದ್ದಲ್ಲ ನಾನು. ಹೊರತು *ಕನ್ಯಾ ವರಯತೇ ರೂಪಂ* ಎಂಬಂತೆ ಮಗಳು ಇಷ್ಟಪಡುವ ಕಾರಣ ಸ್ವಲ್ಪ ಸುಂದರನಾಗಿಯೂ ಇರಬೇಕು ಹುಡುಗ. ಕೊನೆಯದಾಗಿ ಪರಾಕ್ರಮವೂ ಇರಬೇಕು. ಏಕೆಂದರೆ ಕೈಹಿಡಿದ ಮಡದಿಯನ್ನು ಎಲ್ಲಾ ರೀತಿಯಿಂದಲೂ ರಕ್ಷಿಸುವ ಸಲುವಾಗಿ. ಶಕ್ತಿ ಸಾಮರ್ಥ್ಯ ಇದ್ದವನು ಎಂದೆಂದಿಗೂ ಕಾಪಾಡಬಲ್ಲ ಮನದೊಡತಿಯನ್ನು.ಅದಿಲ್ಲದವನು ತನ್ನನ್ನೇ ರಕ್ಷಿಸಿಕೊಳ್ಳಲು ಅಸಮರ್ಥ, ಇನ್ನು ಉಳಿದವರನ್ನು ಹೇಗೆ ತಾನೇ ರಕ್ಷಿಸಿಯಾನು! ಇಂತಹ ಗಂಡು ಸಿಕ್ಕಿದರೆ ನಾನೀಗಲೇ ವಾಸವದತ್ತೆಯನ್ನು ಕೊಡಲು ಸಿದ್ಧನಿದ್ದೇನೆ. ಇಲ್ಲಿ ಅವನ ವಿದ್ಯೆ, ಐಶ್ವರ್ಯ, ಎತ್ತರ, ಕೀರ್ತಿ, ಉದ್ಯೋಗ ಇದಾವುದನ್ನೂ ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ನಿಜಕ್ಕಾದರೆ ಅವೆಲ್ಲವೂ ಗೌಣ ಅಂಶಗಳು. ಮೇಲೆ ಹೇಳಿದ ಗುಣಗಳು ಇದ್ದಲ್ಲಿ ನಿಶ್ಚಯವಾಗಿ ಸುಖದಿಂದ ಬದುಕುವನು. ಇದು ಬಿಟ್ಟು ಈಗಿನ ಮಂದಿ ಬಯಸುವ ಉತ್ತಮ ಉದ್ಯೋಗ ಹೆಚ್ಚು ಸಂಬಳ ಕಾರು-ಬಾರು, ಅಂತಸ್ತು , ಆಸ್ತಿ ಇದ್ದೂ ಏನು ಪ್ರಯೋಜನ!_
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ