ವೇದ-ಧರ್ಮ ೪೩

📗🌾📙 ವೇದ-ಧರ್ಮ 📗🌾📙 ಭಾಗ-೪೩

*ದರ್ಶನಗಳು*

_*ದೃಶ್ಯತೇ ಜ್ಞಾಯತೇ ಪರತತ್ವಂ ಅನೇನ* _ಎಂಬಂತೆ ಯಾವುದು ಶ್ರೇಷ್ಠವಾದ ಭಗವತ್ತತ್ವವನ್ನು ತಿಳಿಸಿಕೊಡುವುದೋ ಅಥವಾ ಯಾವುದು ಸತ್ಯವನ್ನು ತೋರಿಸಿಕೊಡುವುದೋ ಅದೇ ದರ್ಶನ. ಆಂಗ್ಲದ philosophy  ಶಬ್ದಕ್ಕೆ ಇದು ಪರ್ಯಾಯವಲ್ಲ. ಅದು ತತ್ವ ಎನ್ನುವ ಸೀಮಿತ ಅರ್ಥವನ್ನಷ್ಟೇ ಆ ಪದ ಒಳಗೊಂಡಿದೆ. ಜಗದ ಸೃಷ್ಟಿ, ಜೀವಿಗಳ ಮೂಲ ಹಾಗೂ ಜೀವನದ ರೂಪ, ಜಡಪದಾರ್ಥಗಳ ಸ್ವರೂಪ, ಆತ್ಮ- ಪರಮಾತ್ಮರ ಸ್ವರೂಪ ಚಿಂತನೆ, ದ್ರವ್ಯಗಳು, ಪ್ರಮಾಣಗಳ ಚಿಂತನೆ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ದರ್ಶನಗಳು ಬೆಳಕು ಚೆಲ್ಲುತ್ತವೆ. ಈ ವಿಷಯಗಳಲ್ಲಿ ಮುಖ್ಯವಾಗಿ ಈಶ್ವರನ ಅಸ್ತಿತ್ವವನ್ನು ಅವನ ಪ್ರಾಮುಖ್ಯತೆಯನ್ನು ಹೆಚ್ಚು ವಿಮರ್ಶಿಸಲಾಗುವುದು. ಕೆಲವು ದರ್ಶನಗಳು ಈಶ್ವರನ ಅಸ್ತಿತ್ವ ಒಪ್ಪುತ್ತವೆ, ಕೆಲವು ದರ್ಶನಗಳು ಒಪ್ಪುವುದಿಲ್ಲ. ಭಗವಂತನು ಅಸ್ತಿ ಎಂದರೆ ಇದ್ದಾನೆ ಎಂದು ಒಪ್ಪುವವರು ಆಸ್ತಿಕರೆಂದೂ, ನಾಸ್ತಿ ಅಂದರೆ ಇಲ್ಲ ಎನ್ನುವವರು ನಾಸ್ತಿಕರೆಂದು ಪ್ರಸಿದ್ಧ. ಭಗವಂತನನ್ನು ಮುಖ್ಯವಾಗಿ ಪ್ರತಿಪಾದಿಸುವ ವೇದವನ್ನು ಈ ನಾಸ್ತಿಕರು ಒಪ್ಪದೇ ಅವನನ್ನು ನಿರಾಕರಿಸುತ್ತಾರೆ. ಆಸ್ತಿಕ ದರ್ಶನಗಳಲ್ಲಿ ಮುಖ್ಯವಾಗಿ ಯೋಗ,ಸಾಂಖ್ಯ, ನೈಯಾಯಿಕ, ವೇದಾಂತ ಎಂದು ನಾಲ್ಕು ವಿಧ. ಪಾಶ್ಚಾತ್ಯ ವಿಚಾರವಾದಿಗಳಲ್ಲೂ ಎರಡು ಬಗೆ ಇದ್ದಾರೆ. ಪ್ಲೇಟೋ ಮುಂತಾದ ಆದರ್ಶವಾದಿಗಳು ದೇವರ ಅಸ್ತಿತ್ವವನ್ನು ಅಂಗೀಕರಿಸಿದ್ದರು. ಕಾರ್ಲ್ಮಾರ್ಕ್ಸ್ ಮುಂತಾದ ಕಾಲ್ಪನಿಕ ಸಾಮ್ರಾಜ್ಯ ವಾದಿಗಳು ಈಶ್ವರನನ್ನು ನಿರಾಕರಿಸಿದ್ದರು. ಚಾರ್ವಾಕ-ಬೌದ್ಧ- ಜೈನರು ನಾಸ್ತಿಕರಲ್ಲಿ ಪ್ರಮುಖರಾದವರು. ಆದರೆ ಕಾಲಾಂತರದಲ್ಲಿ ಚಾರ್ವಾಕನ ಮತ ನಶಿಸಿದಾಗ ಜೈನ ಹಾಗೂ ಬೌದ್ಧರು ತಮ್ಮ ಅಸ್ತಿತ್ವದ ಉಳಿವಿಗಾಗಿ ಮತ ಪ್ರವರ್ತಕರನ್ನೇ ದೇವರೆಂದು ನಂಬಿ ಮುಂದುವರೆದರು. ಹಾಗಾಗಿ ಆ ಮತಗಳು ಅಸ್ತಿತ್ವವನ್ನು ಉಳಿಸಿಕೊಂಡವು ಎನ್ನಬಹುದು._

_ ನ್ಯಾಯದರ್ಶನವು  ಭಗವಂತನ ಅಸ್ತಿತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಈಶ್ವರನನ್ನು ಸಾಧಿಸುವುದೇ ಈ ದರ್ಶನದ ಮುಖ್ಯ ಉದ್ದೇಶ. ಅ
ಮತದಂತೆ ಪರಮಾತ್ಮನು ನಿತ್ಯನು, ಚೈತನ್ಯ ರೂಪನೂ ಆಗಿದ್ದಾನೆ. ಇವರು ಆತ್ಮನು ಎರಡು ಬಗೆ- ಜೀವಾತ್ಮ ಪರಮಾತ್ಮ ಎನ್ನುತ್ತಾರೆ. ಸಂಪೂರ್ಣ ಐಶ್ವರ್ಯ ಯುಕ್ತನು, ವರಕೊಡುವವನು, ನಿತ್ಯಜ್ಞಾನಕ್ಕೆ ಆಶ್ರಯನೂ, ಶ್ರೇಷ್ಠನೂ ಆಗಿದ್ದಾನೆ. ಅವನೇ ವಿಶ್ವವನ್ನು ಸೃಷ್ಟಿಸುತ್ತಾನೆ, ಪಾಲಿಸುತ್ತಾನೆ, ಲಯಗೊಳಿಸುತ್ತಾನೆ. ಈಶ್ವರನ ಬಗೆಗಿನ ನ್ಯಾಯಮತದ ಇನ್ನೂ ಅನೇಕ ವಿಷಯಗಳನ್ನು ಮುಂದೆ ನೋಡೋಣ._

http://shreenidhiabhyankar.blogspot.in/

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩