ಮಹಾಭಾರತ ೨೧
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೧
*ವಿವರ್ತಯೈನಂ ಚ ಮಹಾದ್ರಿರಾಜಂ ಬಲಂ ಚ ವೀರ್ಯಂ ಚ ತವಾಪ್ರಮೇಯಮ್*
_ಭಯಂಕರ ತೇಜಸ್ಸುಳ್ಳ ದೇವನ ಆ ರೂಪವು ಇಂದ್ರನಿಗೆ ಹೀಗೆಂದಿತು- ಇಂದ್ರ ಇನ್ನು ಮುಂದೆ ಯಾವತ್ತಿಗೂ ಹೀಗೆ ಅಹಂಕಾರ ತೋರದಿರು. ನಿನ್ನೆದುರಿರುವ ಈ ಪರ್ವತ ಶಿಖರ ಉರುಳಿಸಿ ಅದರ ನಡುವೆ ಪ್ರವೇಶಿಸು. ಅಲ್ಲಿ ನಿನ್ನಂತೆ ತೇಜಸ್ಸುಳ್ಳ ಅನೇಕರಿದ್ದಾರೆ. ಅವನ ಮಾತಿನಂತೆ ಇಂದ್ರನು ಒಳಗೆ ಪ್ರವೇಶಿಸಿದಾಗ ಅಲ್ಲಿ ನಾಲ್ವರು ತೇಜಸ್ವಿಗಳನ್ನು ಕಂಡನು. ಅವರಂತೆಯೇ ತಾನೂ ಆಗುವೆನೆಂದು ಹೆದರಿ ಆ ಮಹಾದೇವನನ್ನು ಪರಿ ಪರಿಯಾಗಿ ಸ್ತುತಿಸಿದನು. ಅನಂತರ ಭೂಲೋಕದಲ್ಲಿ ಜನ್ಮತಾಳಿ ಈ ಕಷ್ಟದಿಂದ ಬಿಡುಗಡೆ ಹೊಂದುವಂತೆ ಆ ಗಿರೀಶನು ಅಲ್ಲಿದ್ದ ಎಲ್ಲಾ ಇಂದ್ರರಿಗೆ ಆಜ್ಞಾಪಿಸಿದನು. ಆ ಐವರೂ ತಾವು ಜನ್ಮ ತಾಳಲು ಯಮ ,ವಾಯು, ಹೊಸ ಇಂದ್ರ, ಅಶ್ವಿನೀದೇವತೆಗಳು ಹಾಗೂ ವಾಯು ಸಹಾಯ ಮಾಡಬೇಕೆಂದು ನಿವೇದಿಸಿದರು.ಮಹಾದೇವನು ಹಾಗೆಯೇ ಆಗಲೆಂದು ವಾಯು ಮುಂತಾದವರಿಗೆ ಕುಂತಿಯ ಮೂಲಕ ಪೂರ್ವೆಂದ್ರರು ಜನ್ಮ ತಾಳಲು ಆಜ್ಞಾಪಿಸಿದನು. ಹಾಗೆ ಉತ್ತರದಿಕ್ಕಿನ ಗುಹೆಯಲ್ಲಿ ಹಿಂದೆ ಬಂಧಿತರಾಗಿದ್ದ ಆ ಇಂದ್ರರೂಪರೇ ಈಗ ಪರಾಕ್ರಮಿಗಳಾದ ಪಾಂಡವರಾಗಿದ್ದಾರೆ. ಪಾಂಡುಪುತ್ರನಾದ ಈ ಅರ್ಜುನನು ಹೆಚ್ಚು ಅಂಶವುಳ್ಳವನಾಗಿದ್ದಾನೆ ಎಂದರು ವ್ಯಾಸರು. ಹೀಗೆ ಪಾಂಡವರು ಕೇವಲ ಯಮ ವಾಯು ಮುಂತಾದವರ ಅಂಶ ಅಲ್ಲದೇ ಇಂದ್ರರ ಅಂಶವೂ ಆಗಿದ್ದರು._
*ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾಂತಾಂ ಶ್ರಿಯಂ ಭಾರ್ಯಾಂ ವ್ಯವಧಾನ್ಮಾನುಷೇಷು*
_ಅನಂತರ ಆ ಮಹಾದೇವನು ಲಕ್ಷ್ಮೀ ಸದೃಶಳಾದ ದೇವಸ್ತ್ರೀ ಓರ್ವಳನ್ನು ವಾಯು ಮುಂತಾದವರಿಗೆ ಭೂಲೋಕದಲ್ಲಿ ಈ ಪೂರ್ವೇಂದ್ರರ ಜನನಕ್ಕೆ ಸಹಕಾರಿಯಾಗಿ ನೇಮಿಸಿದನು. ತರುವಾಯ ಮಹಾದೇವನು ಅವರುಗಳ ಜೊತೆ ನಾರಾಯಣನ ಬಳಿ ಹೋಗಿ ನಿವೇದಿಸಿದನು. ಅವನೂ ಇದನ್ನೆಲ್ಲಾ ಅಂಗೀಕರಿಸಿ ತಾನೂ ಆ ಸಮಯದಲ್ಲೇ ಜನ್ಮ ತಾಳುವೆನೆಂದನು. ಆಗ ವಿಷ್ಣುವು ತನ್ನ ತಲೆಕೂದಲುಗಳನ್ನು ಎರಡನ್ನು ತೆಗೆದನು. ಆ ಎರಡು ಕೂದಲುಗಳೇ ಯದುವಂಶದಲ್ಲಿ ರೋಹಿಣಿ ಮತ್ತು ದೇವಕಿ ಎಂಬ ಸ್ತ್ರೀಯರನ್ನು ಪ್ರವೇಶಿಸಿದವು. ಅವರಿಬ್ಬರಲ್ಲಿ ಒಬ್ಬನು ಬಲರಾಮನಾಗಿಯೂ ಒಬ್ಬನು ಕೇಶವನಾಗಿಯೂ ಜನಿಸಿದರು.
ಸ್ವರ್ಗದ ಸ್ತ್ರೀಯಾಗಿ ಇವರಿಗೆ ಪತ್ನಿಯಾಗುವಂತೆ ನೇಮಿಸಲ್ಪಟ್ಟವಳು ಈಗ ದಿವ್ಯರೂಪಿಯಾದ ಈ ನಿನ್ನ ಮಗಳು ದ್ರೌಪದಿ ಎಂದರು ವ್ಯಾಸರು._
*ಕಥಂ ಹಿ ಸ್ತ್ರೀ ಕರ್ಮಣೋಂತೇ ಮಹೀತಲಾತ್ಸಮುತ್ತಿಷ್ಠೇದನ್ಯತೋ ದೈವಯೋಗಾತ್*
_ದೈವಯೋಗವಿಲ್ಲದೆ ಹೇಗೆ ಒಬ್ಬಳು ಸ್ತ್ರೀ ಯಾಗದ ಕೊನೆಯಲ್ಲಿ ಎದ್ದು ಬಂದಾಳು? ಇದನ್ನು ಆಲೋಚಿಸಿರುವೆಯಾ? ಅವಳ ರೂಪವು ಸೂರ್ಯಚಂದ್ರರಂತೆ ಬೆಳಗುತ್ತಿದೆ. ಮೈಯ ಸುಗಂಧವು ಹರಿದಾರಿಯವರೆಗೂ ಪಸರಿಸುತ್ತಿದೆ. ಹಾಗಾಗಿ ರಾಜನೇ ಅಂಜದಿರು, ಅಳುಕದಿರು. ಧೈರ್ಯದಿಂದ ಇವರಿಗೆ ವಿವಾಹ ಮಾಡಿಕೊಡು ಎನ್ನುತ್ತಾ ವ್ಯಾಸರು ಪಾಂಡವರ ಹಿಂದಿನ ರೂಪ ದ್ರುಪದನಿಗೆ ತೋರುವಂತೆ ದಿವ್ಯದೃಷ್ಟಿ ನೀಡಿದರು. ಅನಂತರ ಅದನ್ನು ಕಂಡ ದ್ರುಪದನು ಸಂತೋಷದಿಂದ ಅವರಿಗೆ ಮಗಳನ್ನು ಧಾರೆ ಎರೆದು ಕೊಟ್ಟನು._
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ