ಮಹಾಭಾರತ ೨೬
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೬
*ನಿತ್ಯಂ ಭವತು ತೇ ಬುದ್ಧಿರೇಷಾ ರಾಜನ್ಶತಂ ಸಮಾಃ*
_ವಿದುರನು ಪ್ರಜ್ಞಾಚಕ್ಷುವನ್ನು ಕುರಿತಾಡುವ ಮಾತು. ಧೃತರಾಷ್ಟ್ರನು ಪಾಂಡವರ ಏಳಿಗೆಯ ವಿಷಯ ಕೇಳಿ ಸಂತೋಷ ವ್ಯಕ್ತಪಡಿಸಿದಾಗ ಹೇಳಿದ ಮಾತು. ರಾಜನೇ, ಎಂದೆಂದಿಗೂ ನೀನು ಅವರ ಏಳಿಗೆ ಕಂಡು ಕರುಬದಿರು. ನೂರಾರು ವರ್ಷ ಹೀಗೆ ಒಳ್ಳೆಯದಾಗಿಯೇ ಯೋಚಿಸು. ಒಬ್ಬರ ಉನ್ನತಿಯನ್ನು ಕಂಡು ಕರುಬುವ ಮಂದಿಗೆಲ್ಲಾ ವಿದುರನ ಉಪದೇಶವಿದು.ಈ ಬುದ್ಧಿಯೇ ನಿನಗೆ ಸ್ಥಿರವಾಗಿರಲಿ ಎಂದೂ ನುಡಿಯುವನು._
*ಸಂನಿಧೌ ವಿದುರಸ್ಯ ತ್ವಾಂ ವಕ್ತುಂ ನೃಪ ನ ಶಕ್ನುವಃ*
_ದುರ್ಯೋಧನನ ಮಾತು. ರಾಜನೇ, ವಿದುರನು ಸಮೀಪದಲ್ಲಿ ಇರುವಾಗ ನಾವು ನಿನ್ನೊಡನೆ ಏನನ್ನೂ ಮಾತನಾಡಲಾರೆವು. ಏಕೆಂದರೆ ನಮ್ಮ ದುಷ್ಟ ಹಂಚಿಕೆಗಳನ್ನೆಲ್ಲಾ ಅವನು ನಿಷ್ಫಲಗೊಳಿಸುವನು. ಉತ್ತಮರ ಸಂಗ ಬಯಸಿದರೂ ಸಿಗುವುದು ಕಷ್ಟ. ಅಂತಹುದರಲ್ಲಿ ವಿದುರನಂತಹ ಜ್ಞಾನಿ ಲೋಕೋಪಕಾರಿ ವ್ಯಕ್ತಿಯ ಬಗ್ಗೆಯೇ ಅಸಡ್ಡೆ ತೋರುವ ಇವರು ಹೇಗೆ ತಾನೆ ಸಜ್ಜನಿಕೆ ಪಡೆಯುವರು? ಕನ್ನಡದ ಅಥವಾ ಬೇರೆ ಭಾಷೆಗಳ ಕೆಲವು ಕಾವ್ಯಗಳಲ್ಲಿ ದುಷ್ಟತನ ಮರೆಮಾಚಿ ಅಲ್ಪಸ್ವಲ್ಪ ಒಳ್ಳೆಯ ಅಂಶಗಳನ್ನು ಆರೋಪಿಸಿದರೂ ಮಹಾಭಾರತ ಎಂದಿಗೂ ಸತ್ಯವನ್ನು ಮರೆತಿಲ್ಲ._
*ಅಹಮಪ್ಯೇವಮೇವೈತಚ್ಚಿಂತಯಾಮಿ ಯಥಾ ಯುವಾಮ್ ವಿವೇಕ್ತುಂ ನಾಹಮಿಚ್ಛಾಮಿ ತ್ವಾಕಾರಂ ವಿದುರಂ ಪ್ರತಿ*
_ಅಪ್ಪನ ಬಳಿ ಶತ್ರುವನ್ನು ಹೊಗಳಿದ ಬಗೆಗೆ ಆಕ್ಷೇಪಿಸಿದಾಗ ಕುರುಡ ಆಡುವ ಮಾತು.ಮಗನೇ, ನಾನೂ ನಿನ್ನಂತೆಯೇ ಯೋಚಿಸುತ್ತಿರುವೆನು. ಆದರೆ ವಿದುರನ ಬಳಿ ಈ ಅಭಿಪ್ರಾಯ ಹೇಳಲು ನನಗೆ ಇಷ್ಟವಿರಲಿಲ್ಲ. ಇದನ್ನೇ ದ್ವಂದ್ವ ಎನ್ನುವುದು. ಒಬ್ಬನ ಬಳಿ ಒಂದು ರೀತಿ ಇನ್ನೊಬ್ಬರ ಬಳಿ ಇನ್ನೊಂದು ರೀತಿ ಮಾತನಾಡಿ ಮಗುಮ್ಮಾಗಿ ಏನೂ ಅರಿಯದವನಂತೆ ವರ್ತಿಸುವುದು. ಧೃತರಾಷ್ಟ್ರನನ್ನು ಈಗಿನ ಅನೇಕ ಆಧುನಿಕರು ಅನುಸರಿಸುತ್ತಿದ್ದಾರೆ. ಒಬ್ಬರು ಸತ್ತರೆ ಒಂದು ರೀತಿ, ಮತ್ತೊಬ್ಬ ಸತ್ತರೆ ಒಂದು ರೀತಿ, ಒಂದೊಂದು ವಿಷಯದಲ್ಲಿ ಒಂದೊಂದು ರೀತಿಯ ಅಭಿಪ್ರಾಯ, ಯಾವುದರಲ್ಲೂ ಗಟ್ಟಿ ನಿಲುವು ತಾಳಲಾರದ ನೀತಿಗಳು._
*ಅದ್ಯ ತಾನ್ಕುಶಲೈರ್ವಿಪ್ರೈಃ ಸುಕೃತೈರಾಪ್ತಕಾರಿಭಿಃ ಕುಂತೀಪುತ್ರಾನ್ಭೇದಯಾಮೋ ಮಾದ್ರೀಪುತ್ರೌ ಚ ಪಾಂಡವೌ*
_ದುರ್ಯೋಧನ ಅಪ್ಪನ ಬಳಿ ಉಪಾಯಗಳನ್ನು ಹೇಳುತ್ತಿದ್ದಾನೆ. ನಿಪುಣರೂ,ಕಾರ್ಯಸಮರ್ಥರೂ ನಮಗೆ ಆಪ್ತರಾಗಿದ್ದು ಕೆಲಸವನ್ನು ಮಾಡುವವರೂ ಆದ ಬ್ರಾಹ್ಮಣರ ಮೂಲಕ ಕುಂತೀಪುತ್ರರಿಗೂ ಮಾದ್ರೀಪುತ್ರರಿಗೂ ಭೇದ ತರೋಣ, ಅಥವಾ ದ್ರುಪದನು ಧರ್ಮಜನ ಗೆಳೆತನ ತ್ಯಜಿಸುವಂತೆ ಪ್ರಲೋಭನೆ ಒಡ್ಡೋಣ, ಅಥವಾ ಅಲ್ಲಿಯೇ ವಾಸವಾಗಿರುವುದು ಪಾಂಡವರಿಗೆ ಇಷ್ಟವಾಗುವಂತೆ ಮಾಡೋಣ, ಅಥವಾ ಕುಂತೀಪುತ್ರರಲ್ಲಿ ಪರಸ್ಪರ ಒಡಕನ್ನು ತಂದುಹಾಕೋಣ, ದ್ರೌಪದಿಯನ್ನು ಎತ್ತಿಕಟ್ಟಿ ಅವರಲ್ಲಿ ಒಡಕನ್ನುಂಟುಮಾಡೋಣ, ಅಥವಾ ಭೀಮನನ್ನು ಹೇಗಾದರೂ ಮಾಡಿ ವಧಿಸೋಣ, ಅವನು ಸತ್ತರೆ ತಾನಾಗಿಯೇ ನಿರುತ್ಸಾಹ ಉಂಟಾಗುವುದು, ಅಥವಾ ಇಲ್ಲಿಗೆ ಕರೆಸಿ ಉಪಾಯದಿಂದ ಕೊಲೆ ಮಾಡಿಸೋಣ, ಇವುಗಳಲ್ಲಿ ನಿನಗೆ ಯಾವುದು ಯೋಗ್ಯವೆನಿಸುವುದೋ ಅದನ್ನು ಆಚರಿಸು. ಹಿಂದೆಯೂ ದುಡ್ಡಿಗಾಗಿ ಅನರ್ಥ ಆಚರಿಸುವ ಬ್ರಾಹ್ಮಣರು ಇದ್ದುದು ಇಲ್ಲಿ ಕಂಡುಬರುತ್ತದೆ. ದುರ್ಯೋಧನನು ತನ್ನ ಉಪಾಯಗಳನ್ನು ಜಾರಿಗೆ ತರಲು ಅವರನ್ನು ಉಪಯೋಗಿಸುವುದು ನೋಡಿದರೆ ಅವನ ಚಾಲಾಕಿತನದ ಅರಿವಾಗುತ್ತದೆ. ದುಡ್ಡಿನ ಆಸೆ ತೋರಿಸಿ ಕೆಲವರನ್ನು ಛೂ ಬಿಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುವುದು ಅವನ ಜಾಯಮಾನ. ಈಗ ಅದೇ ರೀತಿ ಪ್ರಶಸ್ತಿ, ಅಧ್ಯಕ್ಷ ಸ್ಥಾನ, ಅಕಾಡೆಮಿ ಪ್ರಶಸ್ತಿ ಇತ್ಯಾದಿಗಳ ಮೂಲಕ ಒಲೈಸಿ ತಮ್ಮ ಕಾರ್ಯ ಮಾಡಿಸಿಕೊಳ್ಳುತ್ತಿರುವರು. ಅವನ ಪಾಂಡವದ್ವೇಷ ಎಷ್ಟಿತ್ತೆನ್ನುವುದು ಈ ಎಲ್ಲಾ ಮಾತುಗಳಿಂದ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ._
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ