ಪ್ರತಿಜ್ಞಾ ಯೌಗಂಧರಾಯಣ ೭

🔥 ಪ್ರತಿಜ್ಞಾ ಯೌಗಂಧರಾಯಣ 🔥೭

*काष्ठादग्निर्जायते मथ्यमानात् भूमिस्तोयं खन्यमाना ददाति । सोत्साहानां नास्त्यसाध्यं नराणाम् मार्गारब्धा: सर्वयत्ना: फलन्ति ।।*

_ಯೌಗಂಧರಾಯಣನು ಸೇವಕನೊಡನೆ ಆಡುವ ಮಾತು. ಉತ್ಸಾಹ ಹೆಚ್ಚಿಸುವ ಪ್ರಸಿದ್ಧ ಸಂಸ್ಕೃತ ಶ್ಲೋಕವಿದು. ಕಟ್ಟಿಗೆ ಒಂದಕ್ಕೊಂದು ಬಹುಕಾಲ ಮಥಿಸಿದರೆ ಅದರಿಂದಲೇ ಬೆಂಕಿ ಹುಟ್ಟುತ್ತದೆ. ದೊಡ್ಡ ಯಜ್ಞಗಳಲ್ಲಿ ಬನ್ನಿ ಮರದ ಕಟ್ಟಿಗೆಯನ್ನು ಕಡೆದು ಅಗ್ನಿ ಜನನ ಮಾಡುವುದನ್ನು ನಾವು ಈಗಲೂ ಕಾಣುವೆವು. ಶಿಲಾಯುಗದ ಪೂರ್ವದಲ್ಲಿ ಇಂತಹುದೇ ತಂತ್ರ ಬಳಸಲಾಗುತ್ತಿತ್ತು ಬೆಂಕಿ ಹೊತ್ತಿಸಲೆಂದು ಇತಿಹಾಸಕಾರರೂ ಹೇಳುತ್ತಾರೆ. ಅಸಾಧ್ಯವೆನಿಸಿದ ಬೆಂಕಿಯನ್ನು ಸಾಧ್ಯವಾಗಿಸುವುದು ಅವಿರತ ಪ್ರಯತ್ನ. ನೀರು ಬೇಕೆಂದಾಗ ಸಾಕಷ್ಟು ಆಳ ಭೂಮಿ ಅಗೆದರೆ ಬೇಕಾದಷ್ಟು ನೀರು ಸಿಗುತ್ತದೆ. ಅನೇಕ ದಿನ, ಅನೇಕ ಜನರ ಪ್ರಯತ್ನವು ಇದನ್ನೂ ಸಾಧ್ಯವಾಗಿಸುತ್ತದೆ. ಬರಪೀಡಿತ ಪ್ರದೇಶದಲ್ಲೂ ಸಾವಿರಾರು ಅಥವಾ ಲಕ್ಷ ಅಡಿಗಳಷ್ಟು ಆಳ ಹೋದಾಗಲೂ ನೀರಿನ ಸೆಲೆ ಖಂಡಿತ ದೊರಕುವುದು. ಹೀಗೆಯೇ ಉತ್ಸಾಹಿಗಳಿಗೆ ಲೋಕದಲ್ಲಿ ಅಸಾಧ್ಯವೆನಿಸಿದ ಕಾರ್ಯ ಯಾವುದಿದೆ! ಅವರು ಮನಸ್ಸು ಮಾಡಿದರೆ ಆಕಾಶವನ್ನೇ ಏರಿಯಾರು! ಪಾತಾಳವನ್ನೂ ಪ್ರವೇಶಿಸಿಯಾರು! ಇರುವೆಯೊಂದು ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಕಿಲೋಮೀಟರ್ ದೂರ ಕ್ರಮಿಸಬಹುದು. ಗರುಡವೊಂದು ನಿಂತಲ್ಲೇ ನಿಂತು ಸ್ವಲ್ಪ ದೂರವೂ ಹೋಗದಿರಬಹುದು. ಆದ್ದರಿಂದ ಉತ್ಸಾಹಿಗಳಿಗೆ ದೊರಕದ ವಸ್ತು ವಿಷಯ ಯಾವುದೂ ಇಲ್ಲ. ಆದರೆ ಹೊರಟ ದಾರಿ ಸರಿ ಇರಬೇಕು‌. ಸರಿ ದಾರಿಯಲ್ಲಿ ಸರಿಯಾದ ರೀತಿಯಲ್ಲಿ ಆರಂಭಿಸಿದ ಕಾರ್ಯಗಳಾವುವೂ ವಿಫಲವಾಗುವುದಿಲ್ಲ. ಅಂತಹ ಎಲ್ಲಾ ಪ್ರಯತ್ನಗಳೂ ಸಫಲವಾಗಿ ಕೀರ್ತಿಯನ್ನು ತಂದು ಕೊಡುತ್ತವೆ. ನಮ್ಮ ಆಯ್ಕೆ ಸರಿಯಾಗಿದ್ದು, ಪ್ರಯತ್ನ ಪೂರ್ಣವಾಗಿದ್ದಾಗ ಅಸಾಧ್ಯವೆನಿಸುವುದು ಯಾವುದೂ ಇಲ್ಲ. ಅರುಣಿಮಾ ಎಂಬ ಸಾಧಕಿಯೋರ್ವಳು ಎರಡು ಕಾಲಿಲ್ಲದೆಯೂ ಎವರೆಸ್ಟ್ ಏರಿದಳು. ಕೃತಕ ಕಾಲು ಅಳವಡಿಸಿದವನೊಬ್ಬ ಒಲಿಂಪಿಕ್ ಪದಕ ಗೆದ್ದ. ಅಂಗಾಂಗ ವೈಫಲ್ಯ ಹೊಂದಿದ ಸ್ಟೀಫನ್ ಹಾಕಿಂಗ್ ಎಂಬ ವಿಜ್ಞಾನಿ ಇಂದಿಗೂ ಸಂಶೋಧನೆ ನಡೆಸುತ್ತಾ ವಿಜ್ಞಾನಿಗಳಿಗೆ ಸ್ಫೂರ್ತಿ ಆಗಿದ್ದಾನೆ. ಹಾಗಿರುವಾಗ ನಾವೇಕೆ ನಿರುತ್ಸಾಹ ತಾಳಬೇಕು? ಉತ್ಸಾಹಿಗಳಾಗಿ ಅಂದುಕೊಂಡಿರುವುದೆಲ್ಲವನ್ನೂ ಸಾಧಿಸೋಣ. ಪ್ರಕೃತ ಶತ್ರುವಶದಲ್ಲಿರುವ ರಾಜನನ್ನು ಖಂಡಿತ ಬಿಡಿಸಿಕೊಂಡು ಬರುವೆನೆಂಬ ವಿಶ್ವಾಸದಲ್ಲಿ ಮಂತ್ರಿ ನುಡಿದ ಮಾತು. ನಮಗೆಲ್ಲ ಪ್ರೇರಕ ನುಡಿ ಇದು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩