ವೇದ ಧರ್ಮ ೪೭
📗🌾📙 ವೇದ-ಧರ್ಮ 📗🌾📙 ಭಾಗ-೪೭
*ಸರ್ವಸ್ಯೈವ ಹಿ ಶಾಸ್ತ್ರಸ್ಯ ಕರ್ಮಣೋ ವಾಪಿ ಕಸ್ಯಚಿತ್ ಯಾವತ್ಪ್ರಯೋಜನಂ ನೋಕ್ತಂ ತಾವತ್ತತ್ಕೇನ ಗೃಹ್ಯತೇ*
_ಕುಮಾರಿಲ ಭಟ್ಟನ ಮಾತಿದು. ಯಾವ ಶಾಸ್ತ್ರವಾಗಲಿ, ಕರ್ಮವಾಗಲಿ ಜನರು ಪ್ರವೃತ್ತಿ ಮಾಡಬೇಕಾದರೆ ಅಧ್ಯಯನದ ಅಥವಾ ಕಾರ್ಯದ ಪ್ರಯೋಜನ ಏನೆಂದು ಮೊದಲು ಹೇಳಬೇಕು. *ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ* ಎಂಬಂತೆ ದಡ್ಡನೂ ಕೂಡ ಪ್ರಯೋಜನವಿಲ್ಲದೆ ಏನನ್ನೂ ಮಾಡಲಾರ. ಪ್ರತಿಯೊಬ್ಬರ ಪ್ರವೃತ್ತಿಗೆ ಪ್ರಯೋಜನವೇ ಪ್ರಧಾನ ಕಾರಣ. ಹಾಗಾಗಿಯೇ ಶಾಸ್ತ್ರಗಳನ್ನು ಪಠಿಸಬೇಕೆಂದರೆ ಅವುಗಳಲ್ಲಿ ಈ ನಾಲ್ಕು ಅಂಶಗಳು ಇರಲೇಬೇಕಾಗುತ್ತದೆ.ವಿಷಯ,ಅಧಿಕಾರಿ, ಸಂಬಂಧ , ಪ್ರಯೋಜನ._
_ಯಾವುದೇ ಶಾಸ್ತ್ರ ತೆಗೆದುಕೊಂಡರೂ ಅದಕ್ಕೊಂದು ಮುಖ್ಯವಾದ ವಿಷಯ ಇದ್ದೇ ಇರುತ್ತದೆ. ವಿಷಯವೇ ಇಲ್ಲದ ಶಾಸ್ತ್ರ ನವ್ಯ ಕವಿತೆಗಳಂತೆ ಅಥವಾ ಬುದ್ಧಿಜೀವಿಗಳ ಮಾತಿನಂತೆ ಏನನ್ನೂ ಪ್ರತಿಪಾದಿಸಲಾರದು. ವೇದಾಂತಕ್ಕೆ ಬ್ರಹ್ಮಜ್ಞಾನವೇ ವಿಷಯ, ಮೀಮಾಂಸಕ್ಕೆ ಕರ್ಮಗಳೇ ವಿಷಯ ಹೀಗೆ ಒಂದು ವಿಷಯ ಪ್ರಮುಖವಾಗಿ ನಿರೂಪಿಸಲಾಗುತ್ತದೆ._
_ಇನ್ನು ಅಧಿಕಾರಿ ಯಾರು ಎಂದರೆ ಅದಕ್ಕೆ ಹೀಗೆ ಲಕ್ಷಣ ಹೇಳುತ್ತಾರೆ- *ಅಧಿಕಾರೀ ತು ವಿಧಿವಧೀತ ವೇದ ವೇದಾಂಗತ್ವೇನಾಪಾತತೋಧಿಗತಾಖಿಲವೇದಾರ್ಥೋಸ್ಮಿನ್ ಜನ್ಮನಿ ಜನ್ಮಾಂತರೇ ವಾ ಕಾಮ್ಯನಿಷಿದ್ಧವರ್ಜನಪುರಸ್ಸರಂ ನಿತ್ಯನೈಮಿತ್ತಿಕ ಪ್ರಾಯಶ್ಚಿತ್ತೋಪಾಸನಾನುಷ್ಠಾನೇನ ನಿರ್ಗತನಿಖಿಲಕಲ್ಮಷತಯಾ ನಿತಾಂತನಿರ್ಮಲಸ್ವಾಂತಃ ಸಾಧನಚತುಷ್ಟಯಸಂಪನ್ನಃ* ಎಂದು. ನಾಲ್ಕು ವೇದಗಳನ್ನು ಅರ್ಥ ಸಹಿತ ಅರಿತು, ವೇದಾಂಗಗಳನ್ನು ಅಧ್ಯಯನ ಮಾಡಿದವನು, ಆ ಅಧ್ಯಯನದಿಂದ ಕಾರ್ಯ- ಅಕಾರ್ಯ ವಿವೇಚನೆ ಹೊಂದಿದವನು, ಪ್ರವೃತ್ತಿ- ನಿವೃತ್ತಿಗಳನ್ನು ಅರಿತವನು, ಶಾಸ್ತ್ರೋಕ್ತ ಕರ್ಮಗಳನ್ನು ಅನುಸರಿಸುತ್ತಾ ದುಷ್ಕರ್ಮಗಳನ್ನು ತ್ಯಜಿಸಿದ, ನಿತ್ಯ ನೈಮಿತ್ತಿಕ ಪ್ರಾಯಶ್ಚಿತ್ತ ಉಪಾಸನೆಯೇ ಮೊದಲಾದ ಆಚರಣೆಗಳಿಂದ ಮನದ ಕೊಳೆಯನ್ನು ತೊಳೆದು ಶುದ್ಧನಾಗಿರುವ ವ್ಯಕ್ತಿ ಶಾಸ್ತ್ರ ಓದಲು ಅರ್ಹತೆ ಪಡೆಯುವನು. ಇಲ್ಲಿ ಯಾವುದರ ಅಧ್ಯಯನ ಹೇಗಿರಬೇಕೆಂಬುದು ಸ್ಪಷ್ಟವಾಗಿದೆ. ವೇದಾದಿಗಳನ್ನು ಅರ್ಥಪೂರ್ವಕವಾಗಿ ಓದಿದರೆ ಮಾತ್ರ ಸಾರ್ಥಕ. ಇಲ್ಲದಿದ್ದರೆ ಸುಮ್ಮನೆ ಗಿಳಿಪಾಠವಷ್ಟೇ. ಇನ್ನು ವೇದಾಂಗಗಳ ಅಧ್ಯಯನವು ನಾವು ಮಾಡುವ ಕೆಲಸಗಳಲ್ಲಿ ಸ್ಪಷ್ಟತೆಯನ್ನು ತಂದುಕೊಡಬೇಕು. ಮಾಡಬೇಕಾದ ಹಾಗೂ ಮಾಡಬಾರದ ಕಾರ್ಯಗಳ ವಿವೇಚನೆಯನ್ನು ತಂದುಕೊಡುತ್ತದೆ. ಎಲ್ಲಿ ತೊಡಗಬೇಕು, ಯಾವುದು ಬಿಡಬೇಕು ಎಂಬ ಅರಿವನ್ನೂ ಇವುಗಳ ಶಿಕ್ಷಣವು ತಂದುಕೊಡುತ್ತದೆ. ಇನ್ನು ದಿನವೂ ಮಾಡುವ ಕರ್ಮಗಳ ಫಲ ಏನು ಎಂಬುದಕ್ಕೂ ಇಲ್ಲಿ ಉತ್ತರವಿದೆ. ಚಿತ್ತಶುದ್ಧಿಯೇ ಮುಖ್ಯ ಕಾರಣ. ಸಂಕಲ್ಪದಲ್ಲಿ ಏನೇ ತೆಗೆದುಕೊಂಡರೂ ಮನದಿ ಅನುಕ್ಷಣ ಮೂಡುವ ಕೆಟ್ಟ ವಿಚಾರಗಳನ್ನು ನಿವಾರಿಸುವುದೇ ಕರ್ಮಗಳ ಉದ್ದೇಶ. ಅದು ಪೂಜೆಯಿರಲಿ, ಹೋಮಗಳಿರಲಿ, ನಮಸ್ಕಾರ ಇರಲಿ, ಸ್ನಾನ-ಜಪಾದಿಗಳಿರಲಿ, ದಾನಾದಿಗಳಿರಲಿ, ಪ್ರವಚನಗಳಿರಲಿ ಯಾವುದೇ ಕರ್ಮಗಳಿರಲಿ ಅವುಗಳೆಲ್ಲವೂ ಮನದ ಕೊಳೆಯನ್ನು ತೊಳೆಯಲೆಂದೇ ಪ್ರತಿಪಾದಿತವಾಗಿರುವವು. ಹಾಗಿಲ್ಲದಿದ್ದಾಗ ಕಾಟಾಚಾರಕ್ಕೆ ತೋರಿಕೆಗೆ ಮಾಡುವ ನಾಟಕಗಳಷ್ಟೇ ಆಗುವವು ಅವು. ಕೆಲವರಿಗೆ ತಾವು ಯಾವ ಉದ್ದೇಶದಿಂದ ಇಂತಹ ಕಾರ್ಯ ಮಾಡುತ್ತಿರುವುದೆಂಬ ಅರಿವೇ ಇರುವುದಿಲ್ಲ. ಅಂತಹವರ ಔಪಚಾರಿಕತೆ ಚಿತ್ತ ಹುತ್ತಗಟ್ಟದವನ ಆಚರಣೆಯು ಸಾರುತ್ತದೆ. ಇಂತಹ ವ್ಯಕ್ತಿ ಯಾವ ಶಾಸ್ತ್ರವನ್ನಾದರೂ ಪಠಿಸಿದರೆ ಅದು ಸಾರ್ಥಕವಾಗುವುದು. ಇಲ್ಲದಿದ್ದರೆ ಏನೋ ಕಲಿತು ಏನೋ ಮಾಡುವುದಾಗುತ್ತದೆ ಅಥವಾ ಆಚಾರ ಹೇಳಲಿಕ್ಕೆ ಮಾತ್ರ ಆಚರಣೆಗಲ್ಲ ಎಂದಾಗುತ್ತದೆ._
ಮುಂದುವರೆಯುತ್ತದೆ...
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ