ಮಹಾಭಾರತ ೨೨

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೨

*ಆಸೀತ್ತಪೋವನೇ ಕಾಚಿದೃಷೇಃ  ಕನ್ಯಾ ಮಹಾತ್ಮನಃ ನಾಧ್ಯಗಚ್ಛತ್ಪತಿಂ ಸಾ ತು ಕನ್ಯಾ ರೂಪವತೀ ಸತೀ*

_ವ್ಯಾಸರು ದ್ರುಪದನಿಗೆ ದ್ರೌಪದಿಯ ಪೂರ್ವ ವೃತ್ತಾಂತವನ್ನು ಹೇಳುತ್ತಿದ್ದಾರೆ. ಹಿಂದೆ ಒಂದು ತಪೋವನದಲ್ಲಿ ಮಹಾತ್ಮನಾದ ಋಷಿಯೊಬ್ಬನಿಗೆ ಸುಂದರಳಾದ ಮಗಳಿದ್ದಳು. ರೂಪವತಿಯಾದರೂ ಅವಳಿಗೆ ಬಹಳ ಕಾಲ ಗಂಡು ಸಿಗಲಿಲ್ಲ. ಅವಳು ಕಠಿಣ ತಪಸ್ಸು ಆಚರಿಸಿ ಶಂಕರನನ್ನು ಮೆಚ್ಚಿಸಿದಳು. ಶಂಕರನು ವರ ಕೇಳಿದಾಗ ಸರ್ವಗುಣಸಂಪನ್ನನಾದ ಪತಿ ದೊರಕಲೆಂದು ಬಾರಿ ಬಾರಿಗೂ ಕೇಳಿಕೊಂಡಳು.ಅವಳು ಕೇಳಿದಷ್ಟು ಬಾರಿಯಂತೆ ಐದು ಜನ ಪತಿಯರು ಈ ದೇಹತ್ಯಾಗದ ನಂತರ ದೊರಕುವರು ಎಂದನು. ಈಶ್ವರನ ಅಂಶೋಪೇತನಾದ ಪತಿಯನ್ನೂ ಅವಳು ಅಪೇಕ್ಷಿಸಿದ್ದಳು. ಹಾಗೆ ಈಶ್ವರನ ಅನುಗ್ರಹದಿಂದ ನಿನ್ನಲ್ಲಿ ಯಾಗ ಕಾಲದಲ್ಲಿ ಹುಟ್ಟಿದ ಈಕೆ ಸ್ವರ್ಗಲಕ್ಷ್ಮಿಯಾಗಿರುವಳು. ಇವಳಿಗೆ ಪಂಚಪತಿತ್ವ ವಿಧಿಲಿಖಿತವೇ ಆಗಿದೆ, ಚಿಂತಿಸದಿರು ಎಂದರು ವ್ಯಾಸರು. ಈ ಕಥೆ ಕೇಳಿದಾಗ ಮಹಾಭಾರತದಲ್ಲಿ  ಈಶ್ವರನ ಪಾತ್ರವೂ ಮಹತ್ತಾಗಿರುವುದು ತೋರುತ್ತದೆ. ಐದು ಜನ ಇಂದ್ರರು ಅವನ ಶಾಪದಿಂದಲೇ ಭೂಮಿಯಲ್ಲಿ ಜನಿಸುವುದೂ, ಹಾಗೂ ಋಷಿಪುತ್ರಿಯು ದ್ರೌಪದಿಯಾಗಿ ಅವನ ಅನುಗ್ರಹದಿಂದ ಜನಿಸುವುದೂ ಒಂದು ವಿಶಿಷ್ಟ ಕಥಾನಕವಾಗಿದೆ. ರುದ್ರ ಪಕ್ಷಪಾತಿಗಳು ಇದನ್ನು ಆಧರಿಸಿ ಈಶ್ವರನಿಂದಲೇ ಮಹಾಭಾರತ ನಡೆಯಿತು ಎನ್ನುವರೇನೋ! ಕೆಲವರು ಕೆಲವು ಪಾತ್ರಗಳನ್ನು ವೈಭವೀಕರಿಸಿದಂತೆ!_

*ದಿಷ್ಟಸ್ಯ ಗ್ರಂಥಿರನಿವರ್ತನೀಯಃ ಸ್ವಕರ್ಮಣಾ ವಿಹಿತಂ ನೇಹ ಕಿಂಚಿತ್ ಕೃತಂ ನಿಮಿತ್ತಂ ಹಿ ವರೈಕಹೇತೋ ಸ್ತದೇವೇದಮುಪಪನ್ನಂ ಬಹೂನಾಮ್*

_ದ್ರುಪದನ ಮಾತು. ಸಾರ್ವಕಾಲಿಕ ಸತ್ಯ. ದ್ರೌಪದಿಯ ಹಾಗೂ ಪಾಂಡವರ ಕಥೆ ಕೇಳಿ ಉದ್ಗರಿಸುವ ಸಾಲಿದು. ದೈವದ ಗಂಟನ್ನು ಬಿಚ್ಚಲು ಯಾರಿಗೂ ಸಾಧ್ಯವಿಲ್ಲ. ಎಷ್ಟು ಸತ್ಯವಾದ ಮಾತು.ನಾವೆಲ್ಲರೂ ನಾವು ಜಗವನ್ನೇ ಬದಲಾಯಿಸುವೆವು ಎಂಬ ಭ್ರಮೆಯಲ್ಲಿರುತ್ತೇವೆ. ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳನ್ನು ಸಮರ್ಥಿಸುತ್ತಾ ಮೆರೆಯುವೆವು. ಆದರೆ ದೈವ ನಿರ್ಣಯ ಮೀರಿ ಇಂದಿಗೂ ಮುಂದಿಗೂ ಸಾಗಲಾರೆವು. ಈ ಲೋಕದಲ್ಲಿ ಜೀವಿಯು ತಾನು ನಿರ್ಣಯಿಸಿದಂತೆ ಯಾವುದೂ ನಡೆಯಲಾರದು. ನಾನು ಒಬ್ಬ ವರನಿಗಾಗಿ ಸ್ವಯಂವರ ಏರ್ಪಡಿಸಿದೆ. ಆದರೆ ವಿಧಿನಿರ್ಣಯದಂತೆ ಐವರಿಗೆ ಕೊಡಬೇಕಾಗಿದೆ.ಅದೇ ನನ್ನಿಂದ ನನಗೇ ಅರಿಯದಂತೆ ಈ ಕೆಲಸ ಮಾಡಿಸಿದೆ. ನಾವೂ ಅರಿತೋ-ಅರಿಯದೆಯೋ ಅವನೆಣಿಕೆಯಂತೆ ಬಾಳೆಂಬ ರಂಗದಲ್ಲಿ ಹೆಜ್ಜೆ ಇಡುತ್ತಾ ನಮ್ಮದೇ ಸ್ವಂತ ಹೆಜ್ಜೆ ಎಂಬ ಭ್ರಮೆಯಲ್ಲಿ ಕಾಲ ದೂಡುತ್ತಿರುತ್ತೇವೆ. ಹೆಜ್ಜೆ ನಿಂತಾಗ ನಿರ್ದೇಶಕನ ಅರಿವು ಆಗುವುದೆಂಬ ಸುಂದರ ಸತ್ಯ ದ್ರುಪದನ ಮಾತಿನಲ್ಲಿದೆ._


ಮುಂದುವರಿಯುವುದು

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩