ರಾಮಾಯಣ ೪೩
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-43
*ಯದಾ ತು ರಾಮಸ್ಯ ಸಲಕ್ಷ್ಮಣಸ್ಯ ಪ್ರಸಹ್ಯ ಸೀತಾ ಖಲು ಸಾ ಇಹಾಹೃತಾ ಸಕೃತ್ಸಮೀಕ್ಷ್ಯೈವ ಸುನಿಶ್ಚಿತಂ ತದಾ ಭಜೇತ ಚಿತ್ತಂ ಯಮುನೇವ ಯಾಮುನಮ್*
_ಕುಂಭಕರ್ಣನ ಕಠಿಣ ಮಾತು ರಾವಣನಿಗೆ. ಮಂತ್ರಿಗಳನ್ನು ಪ್ರಮುಖರನ್ನು ಕರೆದು ಸೀತೆಯ ಬಗೆಗೆ ತಮ್ಮ ಅಭಿಪ್ರಾಯ ಹೇಳಿ ಎಂದಾಗ ಕುಂಭಕರ್ಣನ ನಿಷ್ಠುರವಾದ ಮಾತು. ಮಹಾರಾಜ! ನೀನು ರಾಮ- ಲಕ್ಷ್ಮಣರಿಗೆ ಸಂಬಂಧಿಸಿದ ಸೀತೆಯನ್ನು ಬಲಾತ್ಕಾರವಾಗಿ ಯಾವಾಗ ತಂದೆಯೋ ಆಗಲೇ ಮುಂದಾಗುವ ಅನಾಹುತಗಳ ಬಗೆಗೆ ಯೋಚಿಸಬೇಕಿತ್ತು. ಯಮುನೋತ್ರಿಯಿಂದ ಇಳಿದು ಕುಂಡ ಸೇರಿ ಮುಂದೆ ಹೋಗುವ ಯಮುನೆಯು ಮತ್ತೆ ಕುಂಡಕ್ಕೆ ಹಿಂತಿರುಗಿ ಬರುವಂತೆ ಮಾಡಲು ಸಾಧ್ಯವಿಲ್ಲ. ಒಂದು ಸಲ ಹರಿದ ನೀರು ಹಿಂತಿರುಗುವುದು ಅಸಾಧ್ಯ. ಪ್ರಕೃತ ನೀನು ಯಮುನೆಯಂತೆ ಪವಿತ್ರಳಾದ ನಿನಗೆ ಸಂಬಂಧಿಸದ ಸೀತೆಯನ್ನು ಕರೆತಂದಿದ್ದಿ. ಇದನ್ನು ಮಾಡುವ ಮೊದಲೇ ನಮ್ಮೊಡನೆ ವಿಚಾರ ಮಾಡಬೇಕಿತ್ತು. ಕಾಲವು ಕಳೆದು ಪರಿಸ್ಥಿತಿ ವಿಷಮತೆಯನ್ನು ಪ್ರವೇಶಿಸುತ್ತಿರುವಾಗ ಇಂತಹ ಮಂತ್ರಾಲೋಚನೆ ಯಾವ ಸಾರ್ಥಕ್ಯವನ್ನು ಉಂಟುಮಾಡೀತು? ಕಾರ್ಯ ಮಾಡುವ ಮುನ್ನ ಅದರ ಪರಿಣಾಮವನ್ನು ವಿವೇಚಿಸಿ ಮುಂದಡಿ ಇಡಬೇಕು. ಅದೇನೂ ಮಾಡದೇ ಅವಿವೇಕಿಯಂತೆ ರಾಮನ ಪತ್ನಿಯನ್ನು ಕದ್ದು ತಂದು ಈಗ ಅವನು ದಾಳಿ ಮಾಡುವನೆಂದಾಗ ನಮ್ಮ ನೆನಪಾಯಿತೇ ನಿನಗೆ? ಎಂತಹ ಕಠಿಣ ಮಾತು. ಸ್ವಂತ ಅಣ್ಣನೆಂದೂ ಕನಿಕರಿಸದೇ ಕುಂಭಕರ್ಣನಾಡುವ ಮಾತು ಚಿಂತನೀಯ._
*ಸರ್ವಮೇತನ್ಮಹಾರಾಜ ಕೃತಮಪ್ರತಿಮಂ ತವ ವಿಧೀಯೇತ ಸಹಾಸ್ಮಾಭಿರಾದಾವೇವಾಸ್ಯ ಕರ್ಮಣಃ*
_ರಾಜನೇ, ಈ ಸೀತಾಪಹರಣ ಕಾರ್ಯದ ಹಿತಾಹಿತಗಳನ್ನು ಕುರಿತು ಮೊದಲೇ ನಮ್ಮೊಡನೆ ಸಮಾಲೋಚಿಸಿದ್ದರೆ ಈ ನಿನ್ನ ಕಾರ್ಯಕ್ಕೊಂದು ಮೆರುಗು ಬರುತ್ತಿತ್ತು. ಅದು ಸತ್ಕರ್ಮವಿರಲಿ ದುಷ್ಕರ್ಮವಿರಲಿ ಆಪ್ತರೊಡನೆ ಮೊದಲೇ ಸಮಾಲೋಚಿಸಿದ್ದರೆ ಯೋಗ್ಯವೆನಿಸುತ್ತಿತ್ತು. ಆದರೀಗ ಕಾಲ ಮೀರಿದೆ. ಈಗ ವಿಚಾರ ಮಾಡಿ ಏನು ಪ್ರಯೋಜನ. ಬೆಂಕಿ ಬಿದ್ದ ಮೇಲೆ ನೀರಿಗಾಗಿ ಬಾವಿ ತೋಡುವುದೇ? ನಿನ್ನ ಸ್ಥಿತಿಯೂ ಹಾಗೇ ಆಗಿದೆ._
*ನ್ಯಾಯೇನ ರಾಜಾ ಕಾರ್ಯಾಣಿ ಯಃ ಕರೋತಿ ದಶಾನನ ನ ಸ ಸಂತಪ್ಯತೇ ಪಶ್ಚಾನ್ನಿಶ್ಚಿತಾರ್ಥಮತಿರ್ನೃಪಃ*
_ಇನ್ನೊಂದು ಒಳ್ಳೆಯ ಮಾತು. ರಾಜನೇ, ಯಾವ ಪ್ರಭುವು ತನ್ನ ಎಲ್ಲಾ ರಾಜಕಾರ್ಯಗಳನ್ನೂ ನ್ಯಾಯಪೂರ್ವಕವಾಗಿಯೇ ಮಾಡುವನೋ ಅಂತಹವನ ಬುದ್ಧಿ 'ತಾನು ಮಾಡಿದ್ದು ಸರಿ' ಎಂಬ ನಿಶ್ಚಿತವಾದ ಅಭಿಪ್ರಾಯದಿಂದ ಕೂಡಿ ಅವನು ಮತ್ತೆ ಪಶ್ಚಾತ್ತಾಪ ಪಡುವ ಸನ್ನಿವೇಶ ಉಂಟುಮಾಡಲಾರದು. ನ್ಯಾಯ ಎಲ್ಲಿರುವುದೋ ಅಲ್ಲಿ ಪಾಪ ಭೀತಿ ಇರಲಾರದು. ಅನ್ಯಾಯದ ಮಾರ್ಗ ಹಿಡಿದಾಗ ಮಾತ್ರ ಭೀತಿ, ಯಾಕಾದರೂ ಹೀಗೆ ಮಾಡಿದನೋ ಎಂಬ ಪಶ್ಚಾತ್ತಾಪ ಎಲ್ಲವೂ ಬರುವುದು. ನೀನೀಗ ರಾಮನಿಗೆ ಅನ್ಯಾಯ ಮಾಡಿರುವಿ. ಹಾಗಾಗಿ ನಿನಗೆ ಭೀತಿ ಉಂಟಾಗಿದೆ. ನ್ಯಾಯದ ಕೆಲಸ ಮಾಡಿದ್ದರೆ ಈ ಭೀತಿ ಇರುತ್ತಿತ್ತೇ? ಎಂತಹ ಸತ್ಯವಾದ ಮಾತು. ನಮ್ಮ ಕೆಲಸಗಳಲ್ಲಿ ಅನ್ಯಾಯ ನುಸುಳಿದಾಗ ಪಾಪಭೀತಿ ಶುರುವಾಗುವುದು ಅಲ್ಲವೇ!_
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ