ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ವಸಿಷ್ಠರ ದಯೆಯಿಂದ ಸೌದಾಸನಿಗೆ ಅಶ್ಮಕನೆಂಬ ಮಗನು ಹುಟ್ಟಿದ ಕಥೆ ಕೇಳಿದೆವು.ಅವನು ಪೋತನ ಎಂಬ ಬೃಹತ್ ನಗರವನ್ನು ಸ್ಥಾಪಿಸಿದನು. ಅದೇ ಮುಂದೆ *ಪಟ್ಟಣವೆಂದು* ಸಾಮಾನ್ಯ ನಗರಗಳಿಗೆ ರೂಢಿ ಬಂತು. ಈ ಕಡೆ ಅದೃಶ್ಯಂತಿಗೆ ಶಕ್ತಿಯ ಮಗನಾಗಿ ಪರಾಶರರು ಜನಿಸಿದರು. ಬಾಲ್ಯದಿಂದಲೇ ವಸಿಷ್ಠರ ಜೊತೆಗೆ ಬೆಳೆದ ಕಾರಣ ಅವರನ್ನು ಅಪ್ಪನೆಂದೇ ಭಾವಿಸಿತು ಆ ಮಗು. ಒಂದು ದಿನ ಅಮ್ಮನ ಎದುರಲ್ಲೇ ಸಹಜವಾಗಿ ಅಪ್ಪ ಎಂದಾಗ ಅದೃಶ್ಯಂತಿಗೆ ಕಣ್ಣೀರು ಬಂದು ಮಗುವನ್ನು ಕರೆದು ಹೀಗೆ ಹೇಳುವಳು. " ಮಗು, ಇವರು ನಿನ್ನ ಅಪ್ಪನಲ್ಲ, ನಿನ್ನ ಅಪ್ಪನ ಅಪ್ಪ ಇವರು. ನಿನ್ನ ಅಪ್ಪನನ್ನು ರಾಕ್ಷಸನೊಬ್ಬ ತಿಂದನು. " ಇದನ್ನು ತಿಳಿದ ಆ ಬಾಲಕನು ತುಂಬಾ ವ್ಯಥೆ ಪಟ್ಟನು. ಸ್ವಲ್ಪ ವರ್ಷಗಳಾದ ನಂತರ ತನ್ನ ತಪಶ್ಶಕ್ತಿಯಿಂದ ಸಮಸ್ತಲೋಕಗಳನ್ನು ನಾಶಮಾಡಲು ಮನಸ್ಸು ಮಾಡಿದನು. ತನ್ನ ತಂದೆಯನ್ನು ಬದುಕಿಸದ ಲೋಕಗಳು ಬದುಕಿದ್ದು ಏನು ಪ್ರಯೋಜನ ಎಂದು ಭಾವಿಸಿದ ಅವನು ನಾಶಮಾಡಲು ಸಿದ್ಧನಾದನು. ಇದನ್ನರಿತ ವಸಿಷ್ಠರು ಮತ್ತೆ ತನ್ನ ಮೊಮ್ಮಗನನ್ನು ತಡೆದರು. ಅದಕ್ಕೊಂದು ಕಾರಣವಿತ್ತು._

_ಹಿಂದೆ ಕೃತವೀರ್ಯನೆಂಬ ರಾಜ ಪ್ರಸಿದ್ಧನಾಗಿದ್ದನು. ಅವನೊಮ್ಮೆ ವೇದಜ್ಞರಾದ ಭೃಗು ಮಹರ್ಷಿಗಳ ನೇತೃತ್ವದಲ್ಲಿ ಅನೇಕ ಯಾಗಗಳನ್ನು ನಡೆಸಿದನು.ಅದರಲ್ಲಿ ಕೊನೆಯದಾದ ಸೋಮಯಾಗದ ಕೊನೆಯಲ್ಲಿ ಮಹಿಮಾನ್ವಿತರಾದ ಭಾರ್ಗವರಿಗೆ ತನ್ನ ಸಂಪತ್ತನ್ನೆಲ್ಲ ಧಾರೆ ಎರೆದನು. ಮುಂದೆ ಅವನು ಕಾಲವಾಗಲು ಕೆಲವು ಸಮಯದ ನಂತರ ಅವನ ವಂಶದ ಕ್ಷತ್ರಿಯರಿಗೆ ಧನದ ಅವಶ್ಯಕತೆ ಉಂಟಾಯಿತು. ಆಗ ಆ ರಾಜರು ಭೃಗುವಂಶದ ಬ್ರಾಹ್ಮಣರ ಬಳಿ ಧನವಿರುವುದನ್ನು ಕಂಡು ಅವರ ಬಳಿ ಯಾಚಿಸುತ್ತಾರೆ. ಆಗ ಕೆಲವು ಭೃಗುವಂಶಜರು ಸಂಪತ್ತು ಕಂಡರೆ ಕ್ಷತ್ರಿಯರ ಭಯ ಉಂಟಾಗುವುದೆಂದು ಭಾವಿಸಿ ಭೂಮಿಯಲ್ಲಿ ತಮ್ಮಲ್ಲಿದ್ದ ಅಪಾರ ಧನವನ್ನು ಹೂತಿಟ್ಟರು. ಕೆಲವರು ಉಳಿದ ಬ್ರಾಹ್ಮಣರಿಗೆ ದಾನ ಮಾಡಿದರು. ಕೆಲವರು ಮಾತ್ರ ಯಾವುದಾವುದೋ ಕಾರಣಗಳಿಂದ ಕೇಳಿದ ಕ್ಷತ್ರಿಯರಿಗೆ ಯಥೇಚ್ಛವಾಗಿದ್ದ ಆ ಸಂಪತ್ತನ್ನು ನೀಡಿದರು. ಅನಂತರ ಒಂದು ಸಲ ಒಬ್ಬ ಕ್ಷತ್ರಿಯನು ಭೂಮಿ ಅಗೆಯುತ್ತಿದ್ದಾಗ ಭೃಗುವಂಶದವನ ಆಸ್ತಿಯಲ್ಲಿ ಅಪಾರ ಧನ ದೊರಕಿತು. ಕ್ಷತ್ರಿಯಶ್ರೇಷ್ಠರೆಲ್ಲರಿಗೂ ಈ ವಿಷಯ ತಿಳಿಯಿತು. ತರುವಾಯ ಈ ಬ್ರಾಹ್ಮಣರನ್ನು ಕೊಂದರೆ ತಮಗೆ ಧನ ಸಿಗಬಹುದೆಂಬ ಆಸೆಯಿಂದ ಮಹಾಪರಾಕ್ರಮಿಗಳಾದ ಆ ಕ್ಷತ್ರಿಯರು ಭೃಗುಗಳು ಶರಣಾದರೂ ಕೋಪದಿಂದ ತಿರಸ್ಕರಿಸಿ ತೀಕ್ಷ್ಣವಾದ ಬಾಣಗಳಿಂದ ಅವರನ್ನೆಲ್ಲ ಕೊಂದರು. ಗರ್ಭಸ್ಥಶಿಶುವಿನಿಂದ ಹಿಡಿದು ಕಂಡ ಕಂಡ ಭಾರ್ಗವರನ್ನು ಕತ್ತರಿಸಿಹಾಕುತ್ತಾ ಭೂಮಿಯಲ್ಲೆಲ್ಲೆಡೆ ಅಟ್ಟಹಾಸ ಮೆರೆದರು. ಅವರ ಕ್ರೌರ್ಯಕ್ಕೆ ಎಣೆ ಇಲ್ಲದಾಯಿತು. ಆಗ ಹೀಗೆ ಸಾವು ಬರುತ್ತಿರುವುದನ್ನು ಕಂಡ ಭೃಗುಪತ್ನಿಯರು ಭಯದಿಂದ ಹಿಮಾಲಯವನ್ನು ಸೇರಿದರು. ಮುಂದೆ ಏನಾಗುವುದೆಂದು ನೋಡೋಣ. *ದಾನಂ ಭೋಗೋ ನಾಶ* ಎಂದು ಹಣಕ್ಕೆ ಮೂರು ಗತಿಗಳನ್ನು ಸುಭಾಷಿತದಲ್ಲಿ ಹೇಳಿದ್ದಾರೆ. ಕೃತವೀರ್ಯ ದಾನ ಮಾಡಿ ಪುಣ್ಯ ಹೊಂದಿದ. ಸ್ವೀಕರಿಸಿದ ಭಾರ್ಗವರು ದಾನವೂ ಮಾಡದೇ, ಭೋಗಿಸದೇ ಭೂಮಿಯಲ್ಲಿ ಹೂತಿಟ್ಟು ತಾವೂ ಅದರೊಡನೆ ಹೂತು ಹೋದರು. ಈ ಹಣವೆಂಬುದು ಮನೆಯಲ್ಲಿ ಉರಿಯುವ ಬೆಂಕಿ ಇದ್ದಂತೆ. ಯಾವಾಗ ಮನೆಯನ್ನೇ ಸುಡುವುದೋ ಅರಿಯುವುದು ಕಷ್ಟ. ಹಣದ ಮೇಲಿನ ಅತಿಯಾದ ಮೋಹವು ಆ ಭೃಗುವಂಶದ ಸಾರ್ವತ್ರಿಕ ಹನನಕ್ಕೆ ಮಾರಣಹೋಮಕ್ಕೆ ಹೇತುವಾಯಿತು. ಹಾಗಾಗಿ ಹಣವನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವ ಬುದ್ಧಿ ನಮಗೆ ಬರದಿರಲಿ. ಇದ್ದರೂ ಭೋಗದಿಂದಲೋ ತ್ಯಾಗದಿಂದಲೋ ವಿನಿಯೋಗಿಸೋಣ. ಇಲ್ಲದಿದ್ದರೆ ಅದೇ ನಮ್ಮ ನಾಶಕ್ಕೆ ಹೇತುವಾದೀತು. ವಸಿಷ್ಠರ ಮಹಿಮೆಯ ಕಥೆ ಇನ್ನೂ ಮುಂದುವರೆಯುತ್ತದೆ..._

📗 ಆಕರ - ಉದ್ಯೋಗಪರ್ವ ೧೬೯ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩