ರಾಮಾಯಣ ೪೨
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೨
*ಅಯಶಸ್ಯಮನಾಯುಷ್ಯಂ ಪರದಾರಾಭಿಮರ್ಶನಮ್ ಅರ್ಥಕ್ಷಯಕರಂ ಘೋರಂ ಪಾಪಸ್ಯ ಚ ಪುನರ್ಭವಮ್*
_ವಿಭೀಷಣ ರಾವಣನಿಗೆ ಮತ್ತೆ ತಿಳಿ ಹೇಳುತ್ತಿದ್ದಾನೆ. ಪರಸ್ತ್ರೀಯರ ಸ್ಪರ್ಶವೂ ಪಾಪಕರ,( ಉದ್ದೇಶ ಪೂರ್ವಕವಾದ ಕಾಮಾಸಕ್ತಿಯ ಸ್ಪರ್ಶ) ಅದು ನಮ್ಮ ಯಶಸ್ಸನ್ನು ಕಸಿಯುವಂತಹದು, ( ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಒಬ್ಬ ಮುಖಂಡನ ಹಸ್ತ ಸ್ಪರ್ಶವೇ ಅಪಯಶಸ್ಸಿಗೆ ಕಾರಣವಾದ ಕಥೆ ನೋಡಿರಬಹುದು) ಅದು ನಮ್ಮ ಆಯುಷ್ಯವನ್ನು ಕಸಿಯುವುದು. ಪಾಪ ಹೆಚ್ಚಾಗುತ್ತಿದ್ದಂತೆ ಬದುಕುವ ಸಾಧ್ಯತೆ ಕಡಿಮೆ. ನಮ್ಮ ಸಂಪತ್ತನ್ನೂ ಅದು ಅಪಹರಿಸುವುದು. ನಾನಾ ಕಾರಣಗಳಿಂದ ಸಂಪತ್ತನ್ನು ಸೂರೆಗೊಳ್ಳುವುದು. ಮಾನ ಉಳಿಸಿಕೊಳ್ಳಲು ಪರದಾಡಬೇಕಾಗುವುದು. ಅದು ಅತ್ಯಂತ ಭಯಂಕರ, ಹಾಗೂ ಮಹಾಪಾಪಕ್ಕೆ ಕಾರಣ. ಹಾಗಾಗಿ ಅನರ್ಥಗಳ ಸರಮಾಲೆಯೇ ತರುವ ಈ ಪರಸ್ತ್ರೀಯೆಂಬ ಮಾಲೆ ನಿನಗೇಕೆ ರಾವಣ? ಅದನ್ನು ಕಿತ್ತೊಗೆ._
*ತ್ಯಜಸ್ವ ಕೋಪಂ ಸುಖಧರ್ಮನಾಶನಂ ಭಜಸ್ವ ಧರ್ಮಂ ರತಿಕೀರ್ತಿವರ್ಧನಮ್ ಪ್ರಸೀದ ಜೀವೇಮ ಸಪುತ್ರಬಾಂಧವಾಃ ಪ್ರದೀಯತಾಂ ದಾಶರಥಾಯ ಮೈಥಿಲೀ*
_ಅಣ್ಣ, ಸುಮ್ಮನೆ ದುಡುಕಬೇಡ. ರಾಮನು ತನ್ನ ಕಪಿಸೈನ್ಯದೊಡನೆ ಬಂದು ಈ ಲಂಕೆಯನ್ನು ನಾಶ ಮಾಡುವ ಮುನ್ನ ಸೀತೆಯನ್ನು ಹಿಂತಿರುಗಿಸು. ಅವನು ಹೀಗೆ ಮಾಡಿದರೆ ಕ್ಷಮಿಸಿಯಾನು. ಖರಾದಿ ನಿನ್ನ ತಮ್ಮಂದಿರನ್ನು ಏಕಾಂಗಿಯಾಗಿ ಕೊಂದಿರುವ ಅವನಿಗೆ ನಾವು ಯಾವ ಲೆಕ್ಕ? ಆಪತ್ತು ಬರುವ ಮುನ್ನವೇ ಉಪಾಯ ಮಾಡಬೇಕೇ ಹೊರತು ಬಂದ ಮೇಲಲ್ಲ. ರಾಮನ ಬಾಣವೆಂಬ ಸುನಾಮಿ ನಮ್ಮನ್ನು ಆಕ್ರಮಿಸುವ ಮುನ್ನ ಸೀತೆಯೆಂಬ ಹೂವನ್ನು ಅರ್ಪಿಸಿಬಿಡೋಣ. ನೀನು ಎಲ್ಲಾ ಅನರ್ಥಗಳಿಗೆ ಮೂಲ ಕಾರಣವಾದ ಈ ಕೋಪವನ್ನು ಬಿಡು. ಕೋಪವು ಸುಖವನ್ನೂ, ಧರ್ಮವನ್ನೂ ನಾಶಮಾಡಬಲ್ಲದು. ಧರ್ಮವನ್ನೇ ಸೇವಿಸು, ಧರ್ಮಮಾರ್ಗದಲ್ಲೇ ನಡೆ. ಏಕೆಂದರೆ ಧರ್ಮವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸೀತು. ಧರ್ಮದ ಮೇಲಿನ ಅವಲಂಬನೆಯು ಸಕಲ ವಿಧದ ಸುಖವನ್ನೂ ಕೀರ್ತಿಯನ್ನೂ ಹೆಚ್ಚಿಸುವುದು. ಪ್ರಸನ್ನನಾಗು. ಪುತ್ರ ಕಲತ್ರರೊಡನೆ ಬಹುಕಾಲ ಜೀವಿಸೋಣ. ಮೈಥಿಲಿಯನ್ನು ಅಮಿತ್ರನ ಬಳಿ ಕಳುಹಿಸಿಕೊಡು._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ