ರಾಮಾಯಣ ೪೧
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೪೧
*ಪ್ರಮತ್ತೇಷ್ವಭಿಯುಕ್ತೇಷು ದೈವೇನ ಪ್ರಹತೇಷು ಚ ವಿಕ್ರಮಾಸ್ತಾತ ಸಿಧ್ಯಂತಿ ಪರೀಕ್ಷ್ಯ ವಿಧಿನಾ ಕೃತಃ*
_ಯಾವ ಶತ್ರುವು ಅಜಾಗರೂಕನಾಗಿರುವನೋ , ಇತರ ಶತ್ರುಗಳಿಂದ ಆಕ್ರಮಿಸಲ್ಪಟ್ಟಿರುವನೋ, ದೈವಿಕವಾದ ಆಪತ್ತುಗಳಿಗೂ ಒಳಗಾಗಿರುವನೋ, ಅಂತಹವನ ಮೇಲೆ ಉತ್ತಮವಾಗಿ ವಿಚಾರ ಮಾಡಿ ನೀತಿಶಾಸ್ತ್ರದ ರೀತಿಯಂತೆ ಪರಾಕ್ರಮ ತೋರುವುದು ಸಫಲವಾಗುವುದು. ವಿಭೀಷಣನು ರಾವಣನಿಗೆ ಹೇಳುವ ಮಾತು. ರಾಮನ ಮೇಲೆ ಆಕ್ರಮಣ ಮಾಡೋಣವೆಂದು ನಿನ್ನ ಸಹಾಯರು ಹೇಳುತ್ತಿರುವರು. ಆದರೆ ಸಮಯ ಅನುಕೂಲಕರವಾಗಿಲ್ಲ. ಶತ್ರುವು ಜಾಗೃತೆಯಲ್ಲಿ ಇಲ್ಲದಾಗ ಆಕ್ರಮಣ ಮಾಡಿದರೆ ಅಕಸ್ಮಾತ್ ಆದ ದಾಳಿಯಿಂದ ತಬ್ಬಿಬ್ಬಾಗಿ ಸೋಲುವನು. ಇತರ ಶತ್ರುಗಳೊಡನೆ ಯುದ್ಧ ಮಾಡುವ ಸಂದರ್ಭದಲ್ಲಿ ದಾಳಿ ಮಾಡಿದರೆ ಬಲ ಹಂಚಿ ಹೋಗಿರುವ ಕಾರಣ ಜಯ ಸಾಧಿಸಬಹುದು. ಇನ್ನು ಎಷ್ಟು ಪ್ರಯತ್ನ ಪಟ್ಟರೂ ದೈವದ ಬೆಂಬಲವಿಲ್ಲದೆ ಸೋಲುವವನ ಮೇಲೆ ದಾಳಿ ಮಾಡಿದರೆ ಸಫಲತೆ ಸಿಗುವುದು. ರಾಮ ಇಂತಹ ಯಾವ ಸ್ಥಿತಿಯಲ್ಲೂ ಇಲ್ಲ. ಹಾಗಾಗಿ ಈಗ ದಾಳಿಗೆ ಉತ್ತಮ ಸಮಯವಲ್ಲ. ನಮ್ಮ ರಾಜರುಗಳಿಗೆ ಇದು ಒಂದು ಪಾಠವಲ್ಲವೇ!_
*ಅಪ್ರಮತ್ತಂ ಕಥಂ ತಂ ತು ವಿಜಿಗೀಷುಂ ಬಲೇ ಸ್ಥಿತಮ್ ಜಿತರೋಷಂ ದುರಾಧರ್ಷಂ ಪ್ರಧರ್ಷಯಿತುಮಿಚ್ಛಥ*
_ಈಗ ಎದುರಿನ ಶತ್ರುವಾದ ರಾಮ ಸ್ವಲ್ಪವೂ ಅಜಾಗರೂಕನಲ್ಲ. ಮೈಯೆಲ್ಲ ಕಣ್ಣಾಗಿ ಇರುವವನು. ವಿಜಯ ಗಳಿಸುವ ಆಕಾಂಕ್ಷೆಯಲ್ಲೇ ಸೈನ್ಯದೊಡನೆ ಇಲ್ಲಿಗೆ ಬರುತ್ತಿದ್ದಾನೆ. ಕ್ರೋಧವನ್ನು ಜಯಿಸಿರುವ ಅವನನ್ನು ಜಯಿಸುವುದು ಕಷ್ಟಕರ. ಕೋಪವನ್ನು ಗೆದ್ದವನು ಎಲ್ಲರನ್ನೂ ಗೆಲ್ಲಲು ಸಮರ್ಥನು. ಅಂತಹ ಅಜೇಯನನ್ನು ನೀವು ಗೆಲ್ಲಬಹುದೆಂದು ಅಂದುಕೊಳ್ಳುತ್ತಿರುವಿರಿ. ಇದು ಕಷ್ಟ. ಯುದ್ಧತಂತ್ರಗಳನ್ನೆಲ್ಲಾ ಅರಿತು ಗೆಲ್ಲಬೇಕೆಂಬ ಒಂದೇ ಇಚ್ಛೆ ಹೊಂದಿದವನನ್ನು ಎದುರಿಸುವುದು ನಿಜಕ್ಕೂ ಕಷ್ಟಕರ. ಅಲೆಗ್ಸಾಂಡರ್ ಇದೇ ಕಾರಣದಿಂದ ಪ್ರತಿಯೊಂದು ಯುದ್ಧದಲ್ಲೂ ಗೆಲುವು ಕಂಡು ಮುಂದುವರೆದಿದ್ದು. ಕೊನೆ ಕೊನೆಗೆ ಮೈ ಮರೆತು ನಾಶವಾದದ್ದು. ಇಲ್ಲಿ ವಿಭೀಷಣನ ರಾಜನೀತಿ ಸಮಯೋಚಿತವಾಗಿದೆ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ