ವೇದ-ಧರ್ಮ ೨೮
📗🌾📙 ವೇದ-ಧರ್ಮ 📗🌾📙 ಭಾಗ-28
*ಋಷಿ ಛಂದಸ್ಸು ದೇವತೆ*
*ವಜ್ರಹಸ್ತಃ ಪುರಂದರಃ,ತೇನೇಂದ್ರೋ ವಜ್ರಮುದಯಚ್ಛತ್*
_ದೇವತೆಗಳಿಗೆ ಆಕಾರ ಹೇಗೆ ಕಲ್ಪಿಸುವುದು ಎಂಬ ಬಗೆಗೆ ಚರ್ಚಿಸಿದೆವು. ವೇದವೇ ಆಕಾರವನ್ನು ನಿರೂಪಿಸಿದೆ. ಮೇಲಿನ ಶ್ರುತಿವಾಕ್ಯಗಳಿಗೆ ಯಾವ ತೆರನಾದ ಬಾಧವೂ ಬರದ ಕಾರಣ ಇಂದ್ರನನ್ನು ವಜ್ರಾಯುಧವನ್ನು ಧರಿಸಿದವನು ಎಂದು ಹೇಳಬಹುದು. ಧರ್ಮಶಾಸ್ತ್ರ, ಇತಿಹಾಸ ಮೊದಲಾದವು ಬ್ರಹ್ಮನೇ ಮೊದಲಾದ ದೇವತೆಗಳಿಗೆ , ರಾಕ್ಷಸರಿಗೂ ಕೂಡ ದೇಹ-ಇಂದ್ರಿಯ-ಸ್ವಭಾವ- ಸ್ಥಾನ- ಕಾರ್ಯ ಎಲ್ಲವನ್ನೂ ಹೇಳಿವೆ. ಕರ್ಮಗಳಲ್ಲಿ ಆಯಾ ದೇವತೆಯ ಸಾಮರ್ಥ್ಯಕ್ಕನುಗುಣವಾಗಿ ಹೇಳಿದ ಫಲವನ್ನು ನೀಡುತ್ತಾರೆ ದೇವತೆಗಳು. ( ಆಧಾರ- ರಾಮಾನುಜಭಾಷ್ಯ)_
*ವೇದಪ್ರಮಾಣಾದೇವ ದೇವತಾತದ್ದೇಹದೇಶಭೇದಸಂವೇದನಸ್ಯ ಸೌಲಭ್ಯ ಸಂಪಾದನಾತ್*
_ಅನೇಕ ದೇವತೆಗಳೂ, ಅವರಿಗೆ ಭಿನ್ನ ಭಿನ್ನ ದೇಹಗಳಿವೆಯೆಂದೂ, ಸ್ಥಾನಗಳೂ ಬೇರೆ ಬೇರೆ ಇವೆಯೆಂದು ವೇದಗಳ ಸರಿಯಾದ ಅಧ್ಯಯನದಿಂದ ತಿಳಿಯುವುದು. ( ಆಧಾರ: ತತ್ವದೀಪಿಕಾ- ಮಧ್ವರ ಬ್ರಹ್ಮಸೂತ್ರದ ಭಾಷ್ಯದ ತ್ರಿವಿಕ್ರಮ ಪಂಡಿತರ ಟೀಕೆ)ಅನೇಕರ ಆರಾಧನೆಗಳಲ್ಲಿ ಏಕಕಾಲದಲ್ಲಿ ಹೇಗೆ ಒಂದೇ ಶರೀರ ಪೂಜೆಯನ್ನು ಸ್ವೀಕರಿಸಲು ಸಾಧ್ಯ ಎಂದರೆ ಅದಕ್ಕೆ ಹೀಗೆ ಹೇಳುತ್ತಾರೆ. ಸೌಭರಿಯೇ ಮೊದಲಾದ ಋಷಿಗಳು ತಮ್ಮ ಕರ್ಮಫಲದ ಅನುಭವಕ್ಕಾಗಿ ಅನೇಕ ಶರೀರಗಳನ್ನು ಏಕಕಾಲದಲ್ಲಿ ತಾಳಿ ಅನುಭವಿಸಿರುವುದನ್ನು ನಾವು ತಿಳಿದಿದ್ದೇವೆ. ಅಂತಹುದರಲ್ಲಿ ಋಷಿಗಳನ್ನು ಮೀರಿದ ಸಾಮರ್ಥ್ಯ ಉಳ್ಳ ದೇವತೆಗಳಿಗೆ ಇದಾವುದೂ ಅಶಕ್ಯವಲ್ಲ._
_ದೇವತೆಗಳಿಗೆ ಆಕಾರವಿರುವುದಾದರೆ ಗಿಡ, ಮರ, ಬಳ್ಳಿ, ನದಿಗಳಂತೆ ಏಕೆ ಕಾಣಲಾರವು? ಅದಕ್ಕುತ್ತರ ಬ್ಯಾಕ್ಟೀರಿಯಾ ಅಥವಾ ವೈರಸಗಳಂತೆ ಎಂದು. ಸೂಕ್ಷ್ಮ ಜೀವಿಗಳನ್ನು ನಿಮ್ಮ ದೃಷ್ಟಿ ಎಷ್ಟು ಚುರುಕಾಗಿದ್ದರೂ ಗುರುತಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸೂಕ್ಷ್ಮ ದರ್ಶಕಗಳನ್ನು ಬಳಸಬೇಕು. ಅದರಂತೆ ದೇವರು ಎಲ್ಲೆಡೆ ಇದ್ದರೂ ನಮ್ಮ ದೃಷ್ಟಿ ಸೂಕ್ಷ್ಮವಾಗದೆ ಕಾಣಲಾರನು. ಸತತ ಅಧ್ಯಯನ, ತಪಸ್ಸು ಮುಂತಾದವು ಅಂತಹ ದೃಷ್ಟಿಯನ್ನು ತಂದುಕೊಡುತ್ತವೆ. ಒಂದು ವಿಷಯದ ಸಂಶೋಧನೆಯು ಹೇಗೆ ಅದರ ಅನೇಕ ಆಯಾಮಗಳನ್ನು ತೋರಿಸಿಕೊಡುವುದೋ ಅದರಂತೆ ದೇವರ ಸ್ವರೂಪದ ಬಗೆಗಿನ ಆಸಕ್ತಿ ಹಾಗೂ ಪೂರಕ ಪ್ರಯತ್ನಗಳಾದಾಗ ಎಲ್ಲೆಲ್ಲೂ ದೇವರೇ ಕಾಣಸಿಗುವರು. ರಾಮಕೃಷ್ಣ ಪರಮಹಂಸರಿಗೆ, ಶಂಕರರೇ ಮೊದಲಾದ ಸಾಧಕರಿಗೆ ಎಲ್ಲೆಡೆ ದೇವರೇ ಕಾಣುತ್ತಿದ್ದುದು ಅವರ ಸರಿಯಾದ ದೃಷ್ಟಿಯಿಂದ ಹೊರತು ದೇವರು ತಾನೇ ಬಂದು ಅವರೆದುರು ಮಂಡಿ ಊರಿದ್ದಲ್ಲ._
*ಪ್ರತ್ಯಕ್ಷಾದಿ ಮೂಲಮಪಿ ಸಂಭವತಿ*
_ಜ್ಞಾನಿಗಳ ಪ್ರತ್ಯಕ್ಷವೂ ದೇವತೆಗಳ ಇರುವಿಕೆಗೆ ಪ್ರಮಾಣ. (ಆಧಾರ - ಶಾಂಕರ ಭಾಷ್ಯ)ಸತ್ಯದೃಷ್ಟಿ, ದೂರದೃಷ್ಟಿ, ಶುದ್ಧದೃಷ್ಟಿ, ಅನುಭವ ದೃಷ್ಟಿಯುಳ್ಳ ಪ್ರತಿಯೊಬ್ಬರಿಗೂ ದೇವರು ಕಾಣಸಿಗುವನು. ಇನ್ನು ಇಂದ್ರ, ವರುಣ ಇತ್ಯಾದಿಗಳೆಲ್ಲಾ ಒಂದೊಂದು ಅಧಿಕಾರ ಸ್ಥಾನಗಳು ಅಥವಾ ಪದವಿಗಳು. ತಪಸ್ಸಿನಿಂದ ಆ ಪದವಿಗಳನ್ನು ಯಾರು ಬೇಕಾದರೂ ಅನೇಕ ವರ್ಷಗಳ ನಂತರ ಹೊಂದಬಹುದು. ಆದರೆ ಆ ಪದವಿಗೆ ಬಂದ ವ್ಯಕ್ತಿಯ ರೂಪವು ಭಿನ್ನವಾಗಲಾರದು. ಹೇಗೆ ರಾಜಪೋಷಾಕು ಧರಿಸಿದ ಸಾಮಾನ್ಯರೂ ರಾಜರಂತೆ ತೋರುವರೋ ಹಾಗೆಯೇ ಇಲ್ಲೂ ಕೂಡ. ಆದರೆ ಇಲ್ಲಿ ಪೋಷಾಕು ಇರದೆ ನೈಜ ಅರ್ಹತೆಯೊಂದೇ ಸಂಪಾದನೆಗೆ ಕಾರಣವಾಗಿರುತ್ತದೆ. ಆದುದರಿಂದ ದೇವತೆಗಳು ಶಕ್ತಿಗಳೇ ಹೊರತು ಸಾಮಾನ್ಯ ವ್ಯಕ್ತಿಗಳಲ್ಲ. ಹಾಗಾದರೆ ಪಂಚಭೂತಗಳು ದೇವತೆಗಳೇ ಎಂದರೆ ಅಲ್ಲ. ಅವುಗಳನ್ನು ನಿಯಂತ್ರಿಸುವ ವಿಭೂತಿಗಳು ದೇವತೆಗಳು._
ಮುಂದುವರೆಯುತ್ತದೆ....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ