ಮೇಘದೂತ
🌹 ಮೇಘದೂತದ ಒಂದು ಬಿಂದು 🌹
*एतस्मान्मां कुशलिनमभिज्ञानदानाद्विदित्वा मा कौलीनादसितनयने मय्यविश्वासिनी भू: | स्नेहानाहु: किमपि विरहे ध्वंसिनस्तेत्वभोगादिष्टेवस्तुन्युपचितरसा: प्रेमराशीभवन्ति ||*
_ಮೇಘವೇ, ಈ ನನ್ನ ಸಂದೇಶವನ್ನು ಪ್ರಿಯೆಗೆ ಅರುಹು. ಈಗಷ್ಟೇ ಹಿಂದಿನ ಒಂದು ಘಟನೆಯನ್ನು ನೆನಪಿಸಿರುವೆ. ನಿನ್ನ ನೆನಪು ನನ್ನ ಮನದಲ್ಲಿನ್ನೂ ಹಸಿರಾಗಿದೆ. ಆಕರ್ಷಕವಾದ ಕಪ್ಪು ಕಣ್ಣಿನ ಸುಂದರಿಯೇ, ಭಯಪಡದಿರು. ನನ್ನ ಪ್ರೀತಿಯ ಮೇಲಿನ ನಂಬಿಕೆ ಕಳಕೊಳ್ಳದಿರು. ಯಾರಾದರೂ ನನಗೆ ನಿನ್ನ ಮೇಲೆ ಪ್ರೀತಿ ಕಡಿಮೆಯಾಗಿದೆಯೆಂದರೆ ಅಂತಹ ಮಾತನ್ನು ನಂಬದಿರು. ಇನ್ನು ಕೆಲವರು ಹೀಗೆ ಹೇಳಬಹುದು, ಬಹಳ ದೀರ್ಘ ಕಾಲದ ವಿರಹವು ಪರಸ್ಪರ ಪ್ರೀತಿಯನ್ನು ಕಡಿಮೆ ಮಾಡುತ್ತದೆ. ಹತ್ತಿರ ಇದ್ದಾಗ ಮಾತ್ರ ಆ ಪ್ರೀತಿ ಬಲವಾಗಿರುವುದು ಇತ್ಯಾದಿ. ಹಾಗಾಗಿ ಈ ನಿನ್ನ ಪ್ರಿಯನು ನಿನ್ನನ್ನು ಮರೆತಿರಲೂ ಸಾಕು ಎಂದೆಲ್ಲಾ. ಇಂತಹ ಯಾವ ಮಾತನ್ನೂ ನೀನು ನಂಬದಿರು. ನಲ್ಲೆ, ಇದು ನಿಜವಲ್ಲ. ವಿರಹದಲಿ ಪ್ರೀತಿ ಬೆಳೆಯುವುದೇ ಹೊರತು ಅಳಿಯಲಾರದು. ನಾವು ಇಷ್ಟಪಟ್ಟದ್ದು ನಮ್ಮಿಂದ ದೂರವಿದ್ದಾಗ ಅದರ ಬಗೆಗಿನ ಸಾಕಷ್ಟು ನಿರೀಕ್ಷೆಗಳು ನಮ್ಮಲ್ಲಿ ಇನ್ನಷ್ಟು ಪ್ರೀತಿಯನ್ನು ಹುಟ್ಟಿಸುತ್ತವೆ. ಹತ್ತಿರವಿದ್ದಾಗಲೇ ದಿನವೂ ಸಿಗುವ ಕಾರಣ ಪ್ರೀತಿ ಕಡಿಮೆಯಾಗಲೂಬಹುದು. ನಾವಿಬ್ಬರೂ ಪರಸ್ಪರ ಮಿಲನವಾದ ನಂತರ ಹೀಗೆ ಹೀಗೆ ಮಾಡಬಹುದೆಂದು ಕನಸು ಕಾಣುತ್ತಿದ್ದೇವೆ. ಇಂತಹ ಸ್ಥಿತಿಯೇ ನಮ್ಮಿಬ್ಬರ ಒಲವನ್ನು ಇನ್ನೂ ಬಲಗೊಳಿಸಿದೆ. ಬಯಸಿದ್ದು ಬಳಿಯಲ್ಲಿರಲು ನೆನಪು ಕಾಣದು. ಅದೇ ದೂರದಲ್ಲಿದ್ದಾಗ ನೆನಪೇ ಕಾಡುವುದು. ಪ್ರಿಯೇ, ಶಾಪದಿಂದುಂಟಾದ ಈ ವಿಯೋಗವು ನಮ್ಮ ಪ್ರೇಮವನ್ನು ಮತ್ತಷ್ಟು ಅಂಟಾಗಿಸಿದೆ. ದುಃಖಿಸದಿರು, ನನ್ನ ಮೇಲೆ ವಿಶ್ವಾಸವಿಡು. ಆ ಬಾನಿನ ಹುಣ್ಣಿಮೆಯ ಚಂದಿರ ಗ್ರಹಣ ಕಳೆದು ಮತ್ತಷ್ಟು ಪ್ರಕಾಶಿಸುವಂತೆ ನಮ್ಮ ಪ್ರೇಮಕ್ಕೆ ಹಿಡಿದ ಶಾಪವೆಂಬ ಗ್ರಹಣ ಕಳೆದು ಪ್ರೇಮಚಂದ್ರಮ ಇನ್ನಷ್ಟು ಶೋಭಿಸುವನು. ವಸ್ತು ದೂರದಲ್ಲಿರುವಾಗ ಇದ್ದ ಕುತೂಹಲ ಹತ್ತಿರ ಬಂದಾಗ ಮರೆಯಾಗುವುದು, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ. ಇದನ್ನೇ ಕವಿ ಪ್ರೀತಿಯಲ್ಲಿ ಸಮೀಕರಿಸಿ ನುಡಿಸಿದ್ದಾನೆ ಆ ಪ್ರೀತಿಗೆ ಪೂರಕವಾದ ಮೇಘದ ಬಳಿ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ