ರಾಮಾಯಣ ೪೦
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-40
*ಅಪ್ಯುಪಾಯೈಸ್ತ್ರಿಭಿಸ್ತಾತ ಯೋರ್ಥಃ ಪ್ರಾಪ್ತುಂ ನ ಶಕ್ಯತೇ ತಸ್ಯ ವಿಕ್ರಮಕಾಲಾಂಸ್ತಾನ್ಯುಕ್ತಾನಾಹುರ್ಮನೀಷಿಣಃ*
_ರಾವಣನ ನೀತಿಶಾಸ್ತ್ರ ಓದಿರದ, ಶತ್ರುಪಕ್ಷದ ಬಲ ಅರಿಯದ ಮಂತ್ರಿಗಳು ನಾವೀಗಲೇ ತೆರಳಿ ರಾಮಾದಿಗಳನ್ನು ಕೊಲ್ಲುವೆವೆಂದು ಅರಿಕೆ ಮಾಡಿಕೊಂಡಾಗ ವಿಭೀಷಣ ನುಡಿಯುವ ಮಾತು. ಅಣ್ಣ, ನಾವು ಉದ್ದೇಶಿಸಿದ ಪ್ರಯೋಜನವು ಮೂರು ಉಪಾಯಗಳಿಂದ ಯಾವಾಗ ಸಾಧ್ಯವಾಗುವುದಿಲ್ಲವೋ ಆಗ ನಾಲ್ಕನೆಯ ಪರಾಕ್ರಮವನ್ನು ಆಶ್ರಯಿಸಬೇಕೆಂದು ನೀತಿತಜ್ಞರು ಹೇಳುವರು. ಸಾಮ, ದಾನ, ಭೇದ, ದಂಡ ಎಂದು ನಾಲ್ಕು ಬಗೆಯ ಉಪಾಯಗಳು. ಸಾಮ-ದಾನ-ಭೇದಗಳನ್ನು ಮೊದಲು ಮಾಡಬೇಕೆಂದು ಕಾಮಂದಕ ನೀತಿಯಲ್ಲಿ ಹೇಳಿದ್ದಾರೆ. *ಸಾಮಾದೀನಾಮುಪಾಯಾನಾಂ ತ್ರಯಾಣಾಂ ವಿಫಲೇನಯೇ ವಿನಯೇನ್ನಸಂಪನ್ನೋ ದಂಡಂ ದಣ್ಡ್ಯೇಷು ದಂಡಭೃತ್* ದಂಡಧಾರಿಯಾದ ರಾಜನು ಈ ಮೂರು ಉಪಾಯಗಳು ವಿಫಲವಾದಾಗ ಮಾತ್ರ ನಾಲ್ಕರ ಕಡೆ ನೋಡಬೇಕು. ಇದನ್ನೇ ವಿಭೀಷಣ ಹೇಳಿದ್ದು._
_ಇನ್ನು ಯಾರೊಡನೆ ಸಾಮ ದಾನ ಭೇದಗಳು ಸಲ್ಲವೆಂದೂ ಕಾಮಂದಕನು ಹೇಳಿದ್ದಾನೆ. *ಬಾಲೋ ವೃದ್ಧೋ ದೀರ್ಘರೋಗೀ ತಥಾ ಜ್ಞಾತಿ ಬಹಿಷ್ಕೃತಃ ಭೀರುಕೋ ಭೀರುಕಜನೋ ಲುಬ್ಧೋ ಲುಬ್ಧಜನಸ್ತಥಾ ವಿರಕ್ತಪ್ರಕೃತಿಶ್ಚೈವ ವಿಷಯೇಷ್ವತಿಸಕ್ತಿಮಾನ್ ಅನೇನ ಚಿತ್ತಮಂತ್ರಶ್ಚ ದೇವಬ್ರಾಹ್ಮಣ ನಿಂದಕಃ ದೈವೋಪಹತಕಶ್ಚೈವ ದೈವಚಿಹ್ನಕ ಏವ ಚ ದುರ್ಭಿಕ್ಷವ್ಯಸನೋಪೇತೋ ಬಲವ್ಯಸನಸಂಯುತಃ ಅದೇಶಸ್ಥೋ ಬಹುರಿಪುರ್ಯುಕ್ತೋ ಕಾಲೇನ ಯಶ್ಚ ಸಃ ಸತ್ಯಧರ್ಮವ್ಯಪೇತಶ್ಚ ವಿಂಶತಿಃ ಪುರುಷಾ ಅಮೀ ಏತೈಃ ಸಂಧಿಂ ನ ಕುರ್ವೀತ ನಿಗೃಹ್ಣೀಯಾತ್ತು ಕೇವಲಮ್*_
_ಬಾಲಕ, ವೃದ್ಧ, ಬಹಳ ಕಾಲದಿಂದ ಯಾವುದಾದರೂ ರೋಗದಿಂದ ನರಳುವವನು, ಬಂಧುಗಳಿಂದ ಬಹಿಷ್ಕೃತನಾದವ, ಹೇಡಿ, ಹೇಡಿಗಳ ಜೊತೆ ತಿರುಗುವವನು, ಲೋಭಿ, ಜಿಪುಣರ ಜೊತೆ ಇರುವವನು, ವಿರಕ್ತನು, ಅತ್ಯಂತ ವಿಷಯಾಸಕ್ತನು ( ಅತೀ ಲೌಕಿಕರು), ನಾನಾವಿಧದ ಚಿಂತಕನು ಅಥವಾ ಬಹುಜನರ ಸಲಹೆ ಕೇಳುವವನು,( ಈಗ ನಮ್ಮಲ್ಲಿ ಅನಂತರ ಇನ್ನೊಬ್ಬನಲ್ಲಿ ಹೀಗೆ ಕೇಳುವುದು ) , ದೇವರು ಹಾಗೂ ಜ್ಞಾನಿಗಳನ್ನು ನಿಂದಿಸುವವನು, ( ನಿಂದಕರು ಯಾರೂ ಪೂರ್ಣ ಜ್ಞಾನಿಗಳಲ್ಲ) ಅದೃಷ್ಟ ವಂಚಿತನು, ಸದಾ ವಿಧಿಯನ್ನು ಕುರಿತು ಚಿಂತಿಸುವವನು, ದುರ್ಭಿಕ್ಷದ ತೊಂದರೆಯಲ್ಲಿರುವವನು, ಸೈನ್ಯದ ಶತ್ರುವಾಗಿರುವವನು, ಸ್ವದೇಶದಲ್ಲಿ ಯಾವತ್ತಿಗೂ ವಾಸ ಮಾಡದಿರುವವನು, ಬಹುಶತ್ರುಗಳುಳ್ಳವನು, ಕಾಲವಶನಾಗಿರುವವನು, ಸತ್ಯ ಧರ್ಮಗಳನ್ನು ಬಿಟ್ಟವನು ಹೀಗೆ ಇಪ್ಪತ್ತು ವಿಧದ ಪುರುಷರೊಡನೆ ಮೂರು ಉಪಾಯಗಳನ್ನು ಪ್ರಯೋಗಿಸದೇ ದಂಡವೇ ಸರಿಯಾದುದು. ಬಾಲ್ಯದಲ್ಲಿ ದಂಡನೆ ನೀಡಿದರೆ ಮಾತ್ರ ಮಕ್ಕಳು ಪಾಠ ಕಲಿಯುವರು. ಇನ್ನು ವೃದ್ಧರು ತಾವೇ ತಿಳಿದವರೆಂದು ಮತ್ತಷ್ಟು ಹದಗೆಡಿಸುತ್ತಾರೆ. ರೋಗಪೀಡಿತನು ವಿವೇಚನೆ ಕಳೆದುಕೊಂಡಿರುತ್ತಾನೆ. ಇನ್ನು ಬಂಧುಗಳೇ ಬಿಡಬೇಕೆಂದರೆ ದೊಡ್ಡ ಅಪರಾಧದಲ್ಲಿ ಭಾಗಿರುತ್ತಾನೆಂದೇ ಅರ್ಥ. ಹೇಡಿಯೊಡನೆ ಉಳಿದ ಉಪಾಯಗಳಿಗಿಂತ ದಂಡದ ಬೆದರಿಕೆಯೇ ಪರಿಣಾಮಕಾರಿ. ಲೋಭಿ ಮತ್ತು ಜಿಪುಣರು ಪ್ರಾಣ ಹೋದರೂ ಸಂಪತ್ತು ಬಿಡಲಾರರು. ಅಂತಹವರಿಗೆ ದಂಡಿಸಿದಾಗ ಸರಿ ದಾರಿ ಹಿಡಿಯುವರು. ಹೀಗೆ ಯಾರೊಡನೆ ಹೇಗೆ ವ್ಯವಹರಿಸಬೇಕೆಂಬ ವಿಷಯದಲ್ಲಿ ಕಾಮಂದಕ ನೀತಿ ಸುಂದರವಾಗಿ ನಿರೂಪಿಸಿದೆ. ನಮ್ಮ ವ್ಯವಹಾರಗಳಿಗೆ ಇದು ಮಾರ್ಗದರ್ಶಕವಾಗಲಿ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ