ಮೇಘದೂತ
🌹ಮೇಘದೂತದ ಒಂದು ಬಿಂದು 🌹
*शापान्तो मे भुजगशयनादुत्थिते शार्ङपाणौ शेषान्मासान्गमय चतुरो लोचने मीलयित्वा | पश्चादावां विरहगुणितं तं तमात्माभिलाषं निर्वेक्ष्याव: परिणतशरश्चन्द्रिकासु क्षपासु ||*
_ಮೇಘವೇ, ನೀನು ಅವಳ ಬಳಿ ಹೀಗೆ ನಿವೇದಿಸು. ಪ್ರಿಯೆ, ಮದನನ ಬಾಧೆಯಿಂದ ಇಬ್ಬರೂ ಸಾಕಷ್ಟು ಬಳಲಿದ್ದೇವೆ. ಇನ್ನೇನು ಹೆಚ್ಚು ಕಾಲ ಉಳಿದಿಲ್ಲ. ಆ ಶಾರ್ಙ್ಗವೆಂಬ ಧನವನ್ನು ಹಿಡಿದಿರುವ ಮಹಾವಿಷ್ಣು ಮಲಗಿ ಏಳುವ ತನಕ ಕಾಯೋಣ. ಅವನೀಗಾಗಲೇ ಆಷಾಢದ ಏಕಾದಶಿಯಂದು ಮಲಗಿರುವನು. ಇನ್ನು ನಾಲ್ಕು ತಿಂಗಳು ಕಳೆದ ಮೇಲೆ ಕಾರ್ತಿಕದ ಹನ್ನೊಂದನೆಯ ದಿನ ಏಳುವನು. ದಾಂಪತ್ಯಕ್ಕೆ ಮತ್ತೊಂದು ಹೆಸರಾದ ಲಕ್ಷ್ಮೀನಾರಾಯಣರಂತೆ ನಾವೂ ಅಂದು ಒಂದಾಗೋಣ. ನನ್ನ ಶಾಪವು ಅಂದು ಮುಕ್ತವಾಗುವುದು. ಈ ಅಲ್ಪ ಸಮಯವನ್ನು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದುಬಿಡು. ಮುಂದೆ ಒಂದಾಗುವೆಂಬ ಭರವಸೆಯಲ್ಲೇ ಈ ಸಮಯ ಚಿಂತಿಸದೇ ಕಳೆದುಬಿಡು. ಅನಂತರ ನಮ್ಮಿಬ್ಬರ ಮಿಲನವಾದಾಗ ವಿರಹ ಕಾಲದಲ್ಲಿ ಮನದಲ್ಲಿ ಎಣಿಸಿದ್ದ ನಮ್ಮ ನಮ್ಮ ವಿಧವಿಧದ ಬಯಕೆಗಳನ್ನು ಹೆಚ್ಚುತ್ತಿರುವ ಬೆಳದಿಂಗಳಿಂದ ಕೂಡಿದ ಆ ಶರತ್ಕಾಲದ ರಾತ್ರಿಗಳಲ್ಲಿ ಅನುಭವಿಸೋಣ. ಈಗ ಬರಿದೆ ಕನಸು ಕಂಡು ಅನಂತರ ನನಸಾಗಿಸೋಣ. ಧೈರ್ಯ ಕಳೆದುಕೊಳ್ಳದೆ ಸಮಯವನ್ನು ನಿರೀಕ್ಷಿಸು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಅಂದರೆ ಅಷ್ಟು ಬೇಗನೇ ನಮ್ಮ ಸಮಾಗಮ ಸಾಧ್ಯವಾಗುವುದು. ಒಂದಾದ ಮೇಲೆ ಈಗ ಯೋಚಿಸಿದ ಪರಸ್ಪರ ಆಸೆಗಳನ್ನು ಒಂದೊಂದಾಗಿ ಅನುಭವಿಸಿ ತೀರೊಣ. ಶರತ್ಕಾಲದಲ್ಲಿ ಮಳೆ ಕಡಿಮೆಯಾಗಿ ಚಂದಿರನ ಬೆಳದಿಂಗಳು ಶೋಭಿಸುವುದು. ಆ ಬೆಳದಿಂಗಳಲ್ಲಿ ನಮ್ಮ ಕನಸುಗಳ ಸುಮಧುರ ಅನುಭವಗಳ ಪಯಣ ಸಾಧ್ಯವಾಗುವುದು. ಆಶಾಭಾವನೆಯೇ ಜೀವನ, ನಿರಾಸೆಯೇ ಮರಣ. ನಾವೆಲ್ಲರೂ ಇಂತಹ ಆಶಾಭಾವನೆಯಿಂದಲೇ ಜೀವನವನ್ನು ವನವಾಗಿಸದೇ ಸುಮವಾಗಿಸಿದ್ದೇವೆ. ನಿರಾಸೆ ಆವರಿಸಿದರೆ ವನವೂ ಒಣಗಿದಂತೆ ಕಾಣುವುದು. ಹಾಗಾಗಿ ಯಕ್ಷನಂತೆ ಮುಂದೆ ಒದಗಲಿರುವ ಸುಮಧುರ ಕ್ಷಣಗಳಿಗಾಗಿ ಸಮಯ ಕಾಯುತ್ತಾ ಸುಖಿಸೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ