ವೇದ ಧರ್ಮ ೩೦
📗🌾📙 ವೇದ-ಧರ್ಮ 📗🌾📙 ಭಾಗ-೩೦
*ಋಷಿ ಛಂದಸ್ಸು ದೇವತೆ*
_ದೇವತೆಗಳು ಒಟ್ಟು ಮೂವತ್ತಮೂರು ಕೋಟಿ ಎನ್ನುವರು. ಈ ವಿಷಯದ ಬಗ್ಗೆ ವೇದ ಏನು ಹೇಳುವುದು ಎಂದರೆ ಅದಕ್ಕುತ್ತರ ಈ ಮಂತ್ರ.
*ಯೇ ದೇವಾ ದಿವ್ಯೇಕಾದಶಸ್ಥ ಪೃಥಿವ್ಯಾಮಧ್ಯೇಕಾದಶಸ್ಥ ಅಪ್ಸುಷದೋ ಮಹಿನೈಕಾದಶಸ್ಥ ತೇ ದೇವಾ ಯಜ್ಞ ಮಿಮಂ ಜುಷಧ್ವಮ್*
_ತೈತ್ತಿರೀಯ ಸಂಹಿತೆಯ ಈ ಮಾತು ಅರ್ಥಗರ್ಭಿತ. ಆಕಾಶದಲ್ಲಿ ಹನ್ನೊಂದು, ಭುವಿಯಲ್ಲಿ ಹನ್ನೊಂದು, ನೀರೊಳಗೆ ಹನ್ನೊಂದು ಹೀಗೆ ಮೂವತ್ತಮೂರು ದೇವತೆಗಳು ಪ್ರಸಿದ್ಧರು. ಇವರೇ ಅಷ್ಟ ವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ದ್ಯಾವಾಪೃಥಿವಿ ಅಥವಾ ಪ್ರಜಾಪತಿ ಹಾಗೂ ಅಶ್ವಿನಿದೇವತೆಗಳು ಹೀಗೆ ಒಟ್ಟು ಮೂವತ್ತಮೂರಾಗುತ್ತವೆ. ತ್ರಿಮೂರ್ತಿಗಳು ಇಂದ್ರಾದಿಗಳು ಇದರಲ್ಲೇ ಸೇರುತ್ತವೆ. ಈ ಮೂವತ್ತಮೂರು ತತ್ವಗಳೇ ಸಕಲ ಚರಾಚರ ಜೀವ- ಜಡಗಳಲ್ಲಿ ಕಂಡುಕೊಂಡಾಗ ಮೂವತ್ತಮೂರು ಕೋಟಿ ದೇವತೆಗಳಾಗುತ್ತವೆ. ಅವಧೂತನಿಗೆ ಪ್ರತಿಯೊಂದು ವಸ್ತುವಿನಲ್ಲೂ ಭಗವಂತನ ರೂಪ ಕಾಣುತ್ತಿತ್ತಂತೆ. ಅಂತಹ ನಿರ್ವಿಕಾರ ಸಮಸ್ಥಿತಿ ಸಾಧ್ಯವಾದಾಗ ನಮಗೂ ಅಷ್ಟಲ್ಲದಿದ್ದರೂ ಮೂವತ್ತಮೂರಾದರೂ ದೇವರು ದರ್ಶನ ಕೊಟ್ಟಾರು. ಅದು ಬಿಟ್ಟು ಸುಮ್ಮನೆ ದೇವನೊಬ್ಬನೇ ಅಥವಾ ನಮ್ಮ ದೇವನೇ ಸರಿ, ನಮ್ಮ ದೇವನೇ ದೊಡ್ಡವನು ಇತ್ಯಾದಿ ಬಡಬಡಿಸುವವರು ನಿಜಕ್ಕೂ ದೇವನನ್ನು ಕಾಣದ ದಡ್ಡರು. ಹಾಗಾದರೆ ದೇವನ ಸ್ವರೂಪ ಏನು ಎಂದರೆ ಉಪನಿಷತ್ತು ಹೀಗೆ ಹೇಳುವುದು-_
*ಸತ್ಯಂ ಜ್ಞಾನಂ ಅನಂತಂ ಬ್ರಹ್ಮ*
_ಸತ್ಯವು, ನಿರ್ಮಲವಾದ ಜ್ಞಾನವೂ, ಎಲ್ಲೆಡೆ ವ್ಯಾಪಿಸಿರುವಂತಹದೂ ಯಾವುದೋ ಅದೇ ದೇವರು. ಮೂರ್ತಿಗಳು, ಚಿತ್ರಗಳು, ಸಾಲಿಗ್ರಾಮಾದಿ - ಲಿಂಗಾದಿ ಶಿಲೆಗಳು ಎಲ್ಲವೂ ನಮ್ಮ ಕಾಣ್ಕೆಗೆ ಒಂದು ಸಾಧನ. ಕಾಣ್ಕೆ ವಿಸ್ತರಿಸಿದಂತೆ ಬರೀ ಶಿಲೆ ಅಥವಾ ಮೂರ್ತಿಯಲ್ಲದೆ ಎಲ್ಲೆಡೆಯೂ ದೇವನು ಕಾಣಸಿಗುವನು. ಇದನ್ನೇ ಗೀತೆಯಲ್ಲಿ ಕೃಷ್ಣ ಹೇಳಿದ್ದು- *ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ* ಎಂದು. ಎಲ್ಲವನ್ನೂ ನನ್ನಲ್ಲಿ, ಎಲ್ಲೆಡೆ ನನ್ನನ್ನೇ ಯಾರು ಕಾಣುವರೋ ಅವರು ನಿಜಭಕ್ತರು ಎಂದು. ಈ ಮೂರು ತತ್ವಗಳೇ ಮೂವತ್ತಮೂರಾಗಿ, ಆ ದೇವತೆಗಳ ಪ್ರತಿಯೊಂದು ವರ್ಗ ಒಂದೊಂದು ಕೋಟಿಯಷ್ಟು ವಿಸ್ತೃತಗೊಂಡಾಗ ದೇವತೆಗಳ ಸಂಖ್ಯೆಯ ನೈಜ ಅರ್ಥ ತಿಳಿಯುತ್ತದೆ. ನಮ್ಮಲ್ಲಿ ದೇವನ ಇಂತಹ ತಿಳುವಳಿಕೆ ಇಲ್ಲದಿರುವಾಗ ಇತರ ಧರ್ಮದವರ ಪ್ರಶ್ನೆಗಳಿಗೆ ಉತ್ತರಿಸುವುದೂ ಕಷ್ಟವಾಗುತ್ತದೆ. ಇವೆಲ್ಲವನ್ನೂ ಒಂದರಲ್ಲೇ ಉಪಸಂಹಾರ ಮಾಡಿದಾಗ ದೇವನೊಬ್ಬನೇ, ನಾಮ ಹಲವು ಎಂಬ ಮಾತೂ, ಅಥವಾ ಏಕೋ ದೇವಃ ಸರ್ವಭೂತೇಷು ಗೂಢಃ ಎಂಬ ಮಾತೂ ಕೂಡಿಬರುವುದು._
*ಛಂದಸ್ಸು*
_ಸಂಸ್ಕೃತ ಸಾಹಿತ್ಯ ಹೆಚ್ಚಾಗಿ ಛಂದೋಬದ್ಧವಾಗಿದೆ. ಗದ್ಯರೂಪದಲ್ಲಿ ಬ್ರಾಹ್ಮಣ ಅಥವಾ ಆರಣ್ಯಕ ( ಉಪನಿಷತ್ ಇದರಲ್ಲೇ ಸೇರುವುದು) ಮಂತ್ರಗಳು ಇದ್ದರೂ ಸಂಹಿತಾ ಭಾಗ ಹಾಗೂ ಕಾವ್ಯ ಪುರಾಣಾದಿಗಳು, ಆಯುರ್ವೇದ ಧನುರ್ವೇದ ಸ್ಥಾಪತ್ಯ ಮುಂತಾದ ಉಪವೇದಗಳು ಛಂದೋಬದ್ಧವಾಗಿಯೇ ಇವೆ. ರಾಮಾಯಣ ಮಹಾಭಾರತವೆಂಬ ನಮ್ಮ ಶ್ರೇಷ್ಠ ಇತಿಹಾಸಗಳು ಛಂದೋಬದ್ಧವಾಗಿಯೇ ಉಳಿದುಕೊಂಡಿವೆ. ಹೀಗಿರುವಾಗ ಉಳಿದ ಸಾಹಿತ್ಯಗಳ ಬೆಳವಣಿಗೆಗೆ ಮೂಲಾಧಾರವಾದ ವೈದಿಕ ಸಾಹಿತ್ಯ ಅನೇಕ ಛಂದಸ್ಸುಗಳಲ್ಲಿ ರಚಿತವಾಗಿರುವುದು ಅಚ್ಚರಿ ತರುವುದಿಲ್ಲ. ಛಂದೋಬದ್ಧವಾಗಿರುವ ಕಾರಣ ಇದರ ಕಾಲ ಹೆಚ್ಚು ಪುರಾತನವಲ್ಲ ಎಂಬ ಆಧುನಿಕ ಅಬುದ್ಧಿಗಳು ಛಂದಸ್ಸುಗಳ ಹುಟ್ಟಿನ ಸಮಯವನ್ನೇ ಅಥವಾ ಭಾಷೆಯ ಹುಟ್ಟಿನ ಕಾಲವನ್ನೇ ಇನ್ನೂ ನಿರ್ಣಯಿಸಿಲ್ಲ._
ಮುಂದುವರೆಯುತ್ತದೆ....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ