ವೇದ- ಧರ್ಮ ೨೯
📗🌾📙 ವೇದ-ಧರ್ಮ 📗🌾📙 ಭಾಗ-29
*ಋಷಿ ಛಂದಸ್ಸು ದೇವತೆ*
*ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ ಹಿರಣ್ಯಯೇನ ಸವಿತಾ ರಥೇನಾದೇವೋಯಾತಿ ಭುವನಾನಿ ವಿಪಶ್ಯನ್*
_ವೈದಿಕ ಮಂತ್ರಗಳು ಅಗ್ನಿ ಸೂರ್ಯ ಮುಂತಾದ ದೇವತೆಗಳ ಹೊರರೂಪವನ್ನು ಸುಂದರವಾಗಿ ವರ್ಣಿಸಿ ತನ್ಮೂಲಕ ಒಳತತ್ವದ ಬಗೆಗೆ ಸೆಳೆಯುತ್ತವೆ. ಈ ಮಂತ್ರವು ಸೂರ್ಯನನ್ನು ಸ್ತುತಿಸಿದೆ. 'ಇಗೋ, ಕತ್ತಲೆಯ ಬಲೆಯಿಂದ ಕೂಡಿದ ಆಗಸದ ಮೂಲಕ ಸೂರ್ಯನು ಭೂಮಿಯ ಮತ್ತು ಮೇಲಿನ ಲೋಕಗಳನ್ನು ಬೆಳಗಿಸುತ್ತಾ ಸ್ವರ್ಣರಥದಲ್ಲಿ ಬರುತ್ತಿರುವನು.' ಇಲ್ಲಿ ಧ್ವನಿತಾರ್ಥ ಕತ್ತಲು ಅಜ್ಞಾನ, ಬೆಳಕು ಸುಜ್ಞಾನದ ಸಂಕೇತ. ಭಗವಂತನ ಆ ರೂಪ ಎಲ್ಲಾ ಜೀವಿಗಳ ಅಜ್ಞಾನ ಕಳೆದು ಸುಜ್ಞಾನ ಕೊಡುತ್ತಿದೆ ಎಂಬುದಾಗಿದೆ. ಹೀಗೆ ಆಧ್ಯಾತ್ಮಿಕ ಧ್ವನಿ ಪ್ರತಿಯೊಂದು ಮಂತ್ರದಲ್ಲೂ ಇದೆ. ಇದನ್ನರಿಯದೆ ಮೇಲ್ನೋಟದ ಅರ್ಥವೇ ಸತ್ಯವೆಂದರೆ ಅದು ಭಾಷಾಂತರಕಾರರ ಹಾಗೆ ಅಥವಾ ವಿದೇಶೀ ವ್ಯಾಖ್ಯಾನಕಾರರ ಹಾಗೆ ಸುಮ್ಮನೆ ಮಣಮಣಿಸುವುದಾಗುವುದು. ಇನ್ನು ದೇವತೆಗಳು ಏಕವೇ, ಅನೇಕವೇ ಎಂದು ಪ್ರಶ್ನಿಸಿದರೆ ವೇದವೇ ಇದಕ್ಕುತ್ತರಿಸುವುದು._
*ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಸ್ಸುಪರ್ಣೋ ಗರುತ್ಮಾನ್ ಏಕಂ ಸದ್ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ*
_ಇರುವುದು ಒಂದೇ ವಸ್ತು ಅಥವಾ ಶಕ್ತಿ. ಅದನ್ನೇ ಜ್ಞಾನಿಗಳು ಇಂದ್ರ, ಮಿತ್ರ, ವರುಣ, ಗರುಡ, ಅಗ್ನಿ, ಯಮ, ವಾಯು ಎಂದೆಲ್ಲಾ ಕರೆದರು. *ಯೋ ದೇವಾನಾಂ ನಾಮಧಾ ಏಕ ಏವ* ಈ ಮಂತ್ರವೂ ಇದನ್ನೇ ಸಾರುವುದು. *ಸೂರ್ಯ ಆತ್ಮಾ ಜಗತಸ್ತಸ್ಥುಶಶ್ಚ* ಎಂಬ ಮಂತ್ರವು ಸೂರ್ಯನೇ ಜಗದ ಆಧಾರವೆಂದು ಸಾರುವುದು. ಇದನ್ನೇ ವಿಜ್ಞಾನ ಈಗ ಹೇಳುತ್ತಿದೆ. ಸೂರ್ಯನಿಲ್ಲದ ಭೂಮಿ ಒಂದು ದಿನವೂ ವಾಸಿಸಲು ಅಯೋಗ್ಯ ಎಂಬುದಾಗಿ._
_ಇನ್ನು ವೇದಗಳಲ್ಲಿ ಕೆಲವು ದೇವತೆಗಳ ಸ್ತುತಿ ಹೆಚ್ಚಿದೆ, ಕೆಲವರ ಸ್ತುತಿ ಕಡಿಮೆ ಇದೆ. ಉ: ಇಂದ್ರನನ್ನು ಸ್ತುತಿಸುವ ಅಗ್ನಿಯನ್ನು ಸ್ತುತಿಸುವ ಸೂಕ್ತಗಳು ಉಳಿದೆಲ್ಲ ದೇವತೆಗಳಿಗಿಂತ ಹೆಚ್ಚಿದೆ. ಹಾಗಾದರೆ ಅವರು ಶ್ರೇಷ್ಠರೋ ಎಂಬ ಪ್ರಶ್ನೆ ಹುಟ್ಟುವುದು. ಹಾಗೆಯೇ ಕೇನೋಪನಿಷತ್ತಿನ ಯಕ್ಷರೂಪೀ ಪರಬ್ರಹ್ಮನ ಮಹಿಮೆಯ ಕಥೆಯಲ್ಲಿ ದೇವತೆಗಳೆಲ್ಲ ಸೋತರೆಂದು ಹೇಳಿರುವುದು ಅದೇ ಅರ್ಥವಲ್ಲ. *ತಸ್ಮಾದಿಂದ್ರಃ ಅತಿತರಾಮಿವ ಅನ್ಯಾನ್ದೇವಾನ್*
ಎಂಬಂತೆ ಸ್ತುತಿಯು ದೇವತೆಗಳನ್ನೆಲ್ಲ ಅತಿಕ್ರಮಿಸಿದನು ಎಂಬುದು ಹೇಗೆ ಸರಿಯಾದ ಅರ್ಥ ಇತ್ಯಾದಿ ಪ್ರಶ್ನೆಗಳಿಗೆ ಒಂದೇ ಉತ್ತರ._
*ಅಗ್ನಿಮುಖಾ ಏವ ದೇವತಾಃ ಪ್ರೀಣಾತಿ*
_ದೇವತೆಗಳಿಗೆಲ್ಲ ಯಜ್ಞದಲ್ಲಿ ಮಾತ್ರ ತಾತ್ಪರ್ಯ. ಹಾಗಾಗಿ ಯಜ್ಞದ ಮೂಲರೂಪಿಯಾದ ಅಗ್ನಿಯ ಸ್ತೊತ್ರ ಸಹಜವಾಗಿ ಹೆಚ್ಚಿದೆ, ಹೊರತು ಅವನು ಶ್ರೇಷ್ಠ ಇವನು ಕನಿಷ್ಠ ಎಂದಲ್ಲ. ಕೆಲವು ಅಜ್ಞಾನಿಗಳು ನಮ್ಮ ದೇವರೇ ಶ್ರೇಷ್ಠ, ಉಳಿದವರು ಕನಿಷ್ಠ ಎನ್ನುತ್ತಾರೆ. ಅವರೆಲ್ಲ ಅರೆಬೆಂದ ಮಡಕೆಯಂತೆ ಮೂಲಾರ್ಥ ಅರಿಯದೇ ಮಾತನಾಡುವವರು. ಯಾವ ದೇವತೆಯೂ ಕೀಳಲ್ಲ, ಯಾರೂ ಮೇಲಲ್ಲ._
ಮುಂದುವರೆಯುತ್ತದೆ....
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ