ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*इयं हि नीलोत्पलदामवर्चसा मृणालशुक्लोज्वलदंष्ट्रहासिना | निशाचरेन्द्रेण निशार्धचारिणा मृगीव सीता परिभूय नीयते ||*
_ರಾವಣನಿಂದ ಸೀತೆ ಅಪಹೃತಳಾಗುತ್ತಿರುವುದನ್ನು ಕಂಡ ತಪಸ್ವಿಗಳಾಡುವ ಮಾತು. ನೀಲಿಕಮಲದ ಮಾಲೆಯಂತೆ ಆಕರ್ಷಕ ಕಾಂತಿ ಹೊಂದಿರುವ ( ಶ್ಯಾಮಲವರ್ಣದ ಕೋಮಲ ತನು) ಕಮಲದ ದಂಟಿನಂತೆ ಬೆಳ್ಳಗಿನ ದಂತಪಂಕ್ತಿಯಿರುವ ( ನಗುವ ಸಮಯದಲ್ಲಿ ಹೊರಸೂಸುವ ಶುಭ್ರತೆಯುಳ್ಳ ದಂತದಸಾಲುಗಳು ) , ಮಧ್ಯರಾತ್ರಿ ಸಂಚರಿಸುವ ಕಳ್ಳನಂತೆ ನಿಶಾಚರರಾದ ರಾಕ್ಷಸರ ರಾಜನಾದ ಈ ರಾವಣನು ಹರಿಣಿಯಂತೆ ಬೆದರಿರುವ ಈ ಸೀತೆಯನ್ನು ಹೊತ್ತೊಯ್ಯುತ್ತಿದ್ದಾನೆ. ಜಿಂಕೆಗೆ ತೊಂದರೆ ನೀಡಿ ಅಥವಾ ಕಿರುಕುಳ ಕೊಟ್ಟು ಹೊತ್ತೊಯ್ಯುವಂತೆ ಈ ದುಷ್ಟನು ಸೀತೆಯನ್ನು ಬಲಾತ್ಕಾರವಾಗಿ ಅಪಹರಿಸುತ್ತಿರುವನು. ನೀಲೋತ್ಪಲದ ಸಾದೃಶ್ಯವು ಸೀತೆಯ ಕಳೆಗುಂದಿದ ಮುಖಕಮಲದ ಸಂಕೇತ. ರಾಮನಿಲ್ಲದೆ ಆ ಕಮಲವು ಅರಳದು. ರಾವಣನೆಂಬ ಹುಲಿಯ ಬಲೆಗೆ ಬಿದ್ದ ಆ ಜಿಂಕೆಯಂತೆ ಕೃಶವಾದ ತನುವಿರುವ ಚಂಚಲಾಕ್ಷಿಯಾದ ಸೀತೆ ನರಳುತ್ತಿದ್ದಾಳೆ. ರಾಮನಿಲ್ಲದ ಸಮಯದಲ್ಲಿ ಅನ್ನುವುದರ ಸೂಚಕ ಕಳ್ಳನಂತೆ ಎಂಬುದು. ಎಲ್ಲರೂ ಸುಪ್ತ ರಾಗಿದ್ದಾಗ ಕಳ್ಳನು ಕದಿಯುವಂತೆ ರಾಮ- ಲಕ್ಷ್ಮಣರೆಂಬ ರಕ್ಷಕರ ಅನುಪಸ್ಥಿತಿಯಲ್ಲಿ ರಾವಣ ಅಪಹರಿಸುತ್ತಿರುವನು. ಅವನಿರುವಾಗ ರಾವಣನಿಗೆ ಧೈರ್ಯ ಸಾಲದೆಂಬ ಸತ್ಯವೂ ಧ್ವನಿತವಾಗಿದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ