ಮಹಾಭಾರತ

📙🌾📗ಮಹಾಭಾರತದ ಅಪ್ರಸಿದ್ಧ ಕಥೆಗಳು📗🌾📙

_ವಿಶ್ವದ ನಾಶಕ್ಕೆ ಹೊರಟ ಪರಾಶರರನ್ನು ಸಮಾಧಾನಪಡಿಸುತ್ತಾ ವಸಿಷ್ಠರು ಭೃಗುವಂಶದವರು ಕ್ಷತ್ರಿಯರ ದಾಳಿಯಿಂದ ನಷ್ಟಗೈದರೆಂಬ ಸಂಗತಿ ಹಿಂದೆ ತಿಳಿದೆವು. ಮುಂದೆ ಭೃಗುಪತ್ನಿಯರೆಲ್ಲರೂ ಭಯದಿಂದ ಹಿಮಾಲಯಕ್ಕೆ ಹೋದರು. ಅವರಲ್ಲಿ ಒಬ್ಬಳು ಸುಂದರಿಯಾದ ಸತಿ ತನ್ನ ಪತಿಯ ವಂಶವೃದ್ಧಿಗಾಗಿ ತೇಜಸ್ಸುಳ್ಳ ತನ್ನ ಗರ್ಭವನ್ನು ತನ್ನ ತೊಡೆಯಲ್ಲಿ ಬಚ್ಚಿಟ್ಟುಕೊಂಡಳು. ಸ್ವಲ್ಪ ಕಾಲದ ತರುವಾಯ ಆ ಗರ್ಭವು ಬ್ರಾಹ್ಮಣಿಯ ತೊಡೆಯನ್ನು ಭೇದಿಸಿ ಮಧ್ಯಾಹ್ನದ ಸೂರ್ಯನಂತೆ ಪ್ರಕಾಶಮಾನವಾಗಿ ಜನಿಸಿತು. ಅದು ಹುಟ್ಟಿದ ಮರುಕ್ಷಣವೇ ತನ್ನ ತೇಜಸ್ಸಿನಿಂದ ಕ್ಷತ್ರಿಯರ ಕಣ್ಣುಗಳನ್ನು ನಾಶಮಾಡಿತು. ಹೀಗೆ ನಷ್ಟದೃಷ್ಟಿಕರಾದ ಆ ಕ್ಷತ್ರಿಯರು ಗಿರಿದುರ್ಗಗಳಲ್ಲಿ ಅಲೆದರು. ಅನಂತರ  ಭಾರ್ಗವರನ್ನು ನಾಶಮಾಡಬೇಕೆಂಬ ತಮ್ಮ ಸಂಕಲ್ಪ ಹಾಳಾಗಿ ತಮ್ಮ ದೃಷ್ಟಿಯೇ ನಷ್ಟವಾದ ಸ್ಥಿತಿಗೆ ಪರಿತಪಿಸುತ್ತಾ ಮತ್ತೆ ದೃಷ್ಟಿ ಪಡೆಯುವ ಬಯಕೆಯಿಂದ ದೋಷರಹಿತಳಾದ ಆ ಬ್ರಾಹ್ಮಣಿಯ ಶರಣು ಹೊಕ್ಕರು._

_'ಮಹಾತ್ಮಳಾದ ನಿನ್ನ ಅನುಗ್ರಹದಿಂದ ನಮ್ಮ ಕಣ್ಣುಗಳು ಮತ್ತೆ ಕಾಣುವಂತಾಗಲಿ.ನಾವು ಮಾಡಿದ ಪಾಪದಿಂದ ನಿವೃತ್ತಿ ಹೊಂದಿ ತೆರಳುವೆವು' ಎನ್ನುತ್ತಾರೆ. ಆಗ ಆ ಸಾಧ್ವಿಯು ' ಕ್ಷತ್ರಿಯರೇ, ನಾನು ನಿಮ್ಮ ದೃಷ್ಟಿಯನ್ನು ಅಪಹರಿಸಿಲ್ಲ, ಅಥವಾ ನನಗೆ ನಿಮ್ಮ ಬಗೆಗೆ ಕ್ರೋಧವೂ ಇಲ್ಲ, ಆದರೆ ನನ್ನ ತೊಡೆಯಲ್ಲಿ ಹುಟ್ಟಿದ ಈ ಭಾರ್ಗವನು ಖಂಡಿತವಾಗಿಯೂ ನಿಮ್ಮ ಬಗ್ಗೆ ಕೋಪ ತಾಳಿದ್ದಾನೆ. ಬಂಧುನಾಶವು ಇವನ ಕೋಪಕ್ಕೆ ಕಾರಣವಾಗಿದೆ. ಮಕ್ಕಳನ್ನೂ ಬಿಡದಂತೆ ನೀವು ಭೃಗುವಂಶದವರನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುವ ಸಮಯದಲ್ಲಿ ನಾನು ನೂರು ವರ್ಷಗಳ ಕಾಲ ಈ ಗರ್ಭವನ್ನು ಧರಿಸಿದ್ದೆನು. ಆರು ಅಂಗಗಳಿಂದ ಕೂಡಿದ ನಾಲ್ಕು ವೇದಗಳನ್ನು ಇವನು ಗರ್ಭದಲ್ಲಿರುವಾಗಲೇ ಕಲಿತಿದ್ದಾನೆ. ಅವನ ತೇಜಸ್ಸು ನಿಮ್ಮ ದೃಷ್ಟಿಯನ್ನು ಅಪಹರಿಸಿದೆ. ಹಾಗಾಗಿ ಅವನನ್ನೇ ಬೇಡಿಕೊಳ್ಳಿ.' ಎಂದಳು._

_ಹೀಗೆ ಹೇಳಿದ ಮೇಲೆ ಆ ರಾಜರೆಲ್ಲರೂ ಆ ಕುಮಾರನನ್ನು "ಪ್ರಸನ್ನನಾಗು" ಎಂದು ಕೇಳಿಕೊಂಡರು. ಆಗ ಪ್ರಸನ್ನನಾದ ಅವನ ದಯೆಯಿಂದ ಅವರಿಗೆ ಮತ್ತೆ ದೃಷ್ಟಿ ದೊರಕಿತು. ಹೀಗೆ ದೃಷ್ಟಿ ಕರುಣಿಸಿದ ಆ ಮಹಾತ್ಮನು ಔರ್ವನೆಂದು ಪ್ರಖ್ಯಾತನಾದನು. ಊರು ಎಂದರೆ ಸಂಸ್ಕೃತದಲ್ಲಿ ತೊಡೆ. ತೊಡೆಯಿಂದ ಹುಟ್ಟಿದ ಕಾರಣ ಔರ್ವ ಎಂಬ ಹೆಸರು ಅವನಿಗಾಯಿತು._

_ನಾವು ಮಾಡಿದ ಕರ್ಮಗಳು ನಮ್ಮನ್ನು ಬೆಂಬಿಡದೇ ಹಿಂಬಾಲಿಸುತ್ತವೆಂಬುದಕ್ಕೆ ಈ ಕಥೆಯೇ ಸಾಕ್ಷಿ. *ಕೃತಂ ಕರ್ಮ ಕರ್ತಾರಮೇವ ಅನುಗಚ್ಛತಿ* ಎಂಬ ಮಾತು ಇದೇ ಕಾರಣದಿಂದ ಇರುವುದು.   ಸಂಪತ್ತಿನ ಆಸೆಯಿಂದ ಅಥವಾ ಭಾರ್ಗವರ ದುರಾಸೆಯ ಕಾರಣ ಕ್ಷತ್ರಿಯರು ತಮ್ಮ ಅಂತರ್ದೃಷ್ಟಿಗೆ ದ್ರೋಹವೆಸಗಿ ಭಾರ್ಗವರ ನಾಶಕ್ಕೆ ತೊಡಗಿ ಹೊರಗಿನ ದೃಷ್ಟಿಯನ್ನೂ ಕಳೆದುಕೊಳ್ಳುವಂತಾಯಿತು. ಅವರ ದುಷ್ಕರ್ಮವೇ ಅವರನ್ನು ಬೆಂಬಿಡದೇ ಹಿಂಬಾಲಿಸಿ ಪೀಡಿಸಿತು. ಹಾಗಾಗಿ ಕೆಟ್ಟ ಕೆಲಸದಲ್ಲಿ ತೊಡಗುವ ಮುನ್ನ ಪರಿಣಾಮವೂ ಕೆಟ್ಟದಾಗಿರುವುದೆಂಬ ಎಚ್ಚರ ಇದ್ದರೆ ಆಗ ಅಂತಹ ಕಾರ್ಯಗಳಲ್ಲಿ ನಮ್ಮೀ ಮನವು ತೊಡಗದು. ಸಾಕ್ಷಿಭೂತವಾಗಿ ಸೂರ್ಯ ಚಂದ್ರಾದಿಗಳಿರುವಾಗ ನಾವು ಯಾರಿಗೂ ತಿಳಿಯದೆಂದು ಮಾಡಿದ ಕುಕರ್ಮವೂ ನಿಶ್ಚಿತವಾಗಿ ಬಾಧಿಸುವುದು. ಹಾಗಾಗಿ ಸತ್ಕರ್ಮದಲ್ಲಿ ಮನವಿರಿಸಿ ಸತ್ಫಲ ಪಡೆಯೋಣ. ಔರ್ವನಂತೆ ಮಹತ್ವ ಪಡೆಯೋಣ._



📗 ಆಕರ - ಉದ್ಯೋಗಪರ್ವ ೧೭೦ ಅಧ್ಯಾಯ. ಸಂಗ್ರಹ ✍
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩