ರಾಮಾಯಣ ೩೯
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-39
*ಐಕಮತ್ಯಮುಪಾಗಮ್ಯ ಶಾಸ್ತ್ರದೃಷ್ಟೇನ ಚಕ್ಷುಷಾ ಮಂತ್ರಿಣೋ ಯತ್ರ ನಿರತಾಸ್ತಮಾಹುರ್ಮಂತ್ರಮುತ್ತಮಮ್*
_ಮಂತ್ರಾಲೋಚನೆಯ ಬಗೆಗಳನ್ನು ಮತ್ತೆ ರಾವಣ ವಿವರಿಸುತ್ತಿದ್ದಾನೆ. ಎಲ್ಲಾ ಮಂತ್ರಿಗಳೂ ಒಕ್ಕೊರಲಿನಿಂದ ಶಾಸ್ತೃದ ಆಧಾರದ ಮೇಲೆ ಯಾವ ಸಲಹೆಯನ್ನು ನಿರತರಾಗುವರೋ ಅಂತಹ ಮಂತ್ರವು ಉತ್ತಮವೆನಿಸುವುದು. ಮಂತ್ರಿಗಳ ನಡುವೆ ದೊಡ್ಡ ಮಟ್ಟದ ಅಭಿಪ್ರಾಯ ಭೇದ ಇರಬಾರದು. ನಿರ್ಣಯಿಸಿದ ವಿಷಯದ ಬಗೆಗೆ ಒಮ್ಮತವಿರಬೇಕು. ಹಾಗಿಲ್ಲದಾಗ ಒಬ್ಬರು ಯಶಸ್ಸಿಗೆ ಪ್ರಯತ್ನಿಸಿದರೆ ಇನ್ನೊಬ್ಬ ಉದಾಸೀನತೆ ತೋರಬಹುದು ಅಥವಾ ಹಾಳುಮಾಡಬಹುದು. ನಮ್ಮ ಸರ್ಕಾರಗಳ ಅನೇಕ ಯೋಜನೆಗಳು ಪ್ರತ್ಯಕ್ಷ ನಿದರ್ಶನ. ಇನ್ನು ಸಾಮಾಜಿಕವಾಗಿಯೋ ಸಾಂದರ್ಭಿಕವಾಗಿಯೋ ಯೋಚಿಸುವುದಕ್ಕಿಂತ ಹೆಚ್ಚಾಗಿ ಶಾಸ್ತ್ರವೆಂಬ ಚಕ್ಷುವಿಂದ ಯೋಚಿಸುವುದು ಉತ್ತಮ. ಕೆಲವೊಮ್ಮೆ ನಮಗೆ ಉತ್ತಮವೆನಿಸಿದ ಕಾರ್ಯಗಳು ಕಾನೂನಿಗೆ ವಿರೋಧ ಎನಿಸಬಹುದು. ಉದಾಹರಣೆಗೆ ಅಕ್ರಮ ಸಂಪತ್ತನ್ನು ಕದ್ದು ಬಡವರಿಗೆ ಹಂಚುವುದು ಇತ್ಯಾದಿ. ಶಾಸ್ತ್ರವನ್ನು ರೂಪಿಸಿದವರು ವಿಶಾಲ ದೃಷ್ಟಿಕೋನ ಹೊಂದಿರುವ ಕಾರಣ ಹಾಗೂ ಅಧ್ಯಯನ ಅಗಾಧವಾದ ಕಾರಣ ಅದರ ಮಾರ್ಗದರ್ಶನ ಸಾಧುವಾಗುತ್ತದೆ.ಮಂತ್ರಿಗಳ ಸಮೂಹದಲ್ಲಿ ಇಂತಹ ಮಂತ್ರಗಳು ಉತ್ತಮವೆನಿಸುತ್ತವೆ._
*ಬಹ್ವ್ಯೋಪಿ ಮತಯೋ ಭೂತ್ವಾ ಮಂತ್ರಿಣಾಮರ್ಥನಿರ್ಣಯೇ ಪುನರ್ಯತ್ರೈಕತಾಂ ಪ್ರಾಪ್ತಾಃ ಸ ಮಂತ್ರೋ ಮಧ್ಯಮಃ ಸ್ಮೃತಃ*
_ಮಂತ್ರಾಲೋಚನೆಯ ಪ್ರಾರಂಭದಲ್ಲಿ ಅನೇಕ ಮತಗಳಿದ್ದರೂ ಕಡೆಯಲ್ಲಿ ಎಲ್ಲಾ ಮಂತ್ರಿಗಳೂ ಸೇರಿ ಕರ್ತವ್ಯ ನಿರ್ಣಯದ ಬಗೆಗೆ ಐಕಮತ್ಯವನ್ನು ತಾಳುವರೋ ಅದು ಮಧ್ಯಮ ಮಂತ್ರವೆನಿಸುವುದು. ಆರಂಭದಲ್ಲಿ ಎಷ್ಟೇ ಗೊಂದಲಗಳಿದ್ದರೂ ಕೊನೆಗೊಂದು ನಿರ್ಣಯವನ್ನು ಅವಲಂಬಿಸುವುದು ಇದರ ವಿಶೇಷ._
*ಅನ್ಯೋನ್ಯಂ ಮತಿಮಾಸ್ಥಾಯ ಯತ್ರ ಸಂಪ್ರತಿಭಾಷ್ಯತೇ ನ ಚೈಕಮತ್ಯೇ ಶ್ರೇಯೋಸ್ತಿ ಮಂತ್ರಃ ಸೋಧಮ ಉಚ್ಯತೇ*
_ಇದು ಮೂರನೆಯ ಬಗೆ. ಒಬ್ಬರಿಂದ ಒಬ್ಬರು ಭಿನ್ನವಾದ ಅಭಿಪ್ರಾಯ ಮಂಡಿಸುತ್ತಾ, ತಮ್ಮದೇ ಸರಿಯಾದ ಅಭಿಮತವೆಂದು ಜಿದ್ದಿಗೆ ಬಿದ್ದವರಂತೆ ಆಡುವರೋ, ಕಡೆಯಲ್ಲಿ ಒಮ್ಮತವೇರ್ಪಟ್ಟರೂ ಕೆಟ್ಟುಹೋದ ವಾತಾವರಣ ಇರುವುದೋ ಅಂತಹ ಸಮಾಲೋಚನೆಯನ್ನು ಅಧಮ ಎನ್ನುವರು. ಪರಸ್ಪರ ಕೆಸರೆರಚಾಡುತ್ತಾ, ಅಹಂಕಾರದಿಂದ ತಮ್ಮದೇ ಸರಿಯೆಂದು ವಾದಿಸುತ್ತಾ , ಕಡೆಗೊಮ್ಮೆ ಉದಾಸೀನತೆಯಿಂದಲೋ ಅಥವಾ ಬೇಸರದಿಂದಲೋ ಯಾವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದೋ ಅಂತಹ ಮಂತ್ರವು ಕಾರ್ಯವನ್ನು ಹಾಳು ಮಾಡಲೂಬಹುದು. ನಾವು ಎಂತಹ ಆಲೋಚನೆ ಮಾಡಬಹುದೆಂದು ರಾವಣ ಚೆನ್ನಾಗಿ ತಿಳಿಸಿದ್ದಾನೆ._
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ