ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*तथापि जिह्म: स भवज्जिगीषया तनोति शुभ्रगुणसम्पदा यश: | समुन्नयन् भूतिमनार्यसङ्गमाद्वरं विरोधोपि समं महात्मभि: ||*
_ಅನುಚರ ಯುಧಿಷ್ಠಿರನಿಗೆ ನುಡಿಯುತ್ತಿದ್ದಾನೆ. ದುರ್ಯೋಧನ ನ್ಯಾಯದ ವರ್ತನೆಯ ತೋರಿಕೆಯ ಮೂಲಕ ಪ್ರಜೆಗಳ ಮನವನ್ನು ಗೆಲ್ಲಲು ಪ್ರಯತ್ನ ಪಡುತ್ತಿದ್ದಾನೆ. ಸ್ವಭಾವತಃ ದುಷ್ಟನಾದರೂ ಆ ಸುಯೋಧನನು ನಿನ್ನ ಜನಪರತೆಯನ್ನು, ರಾಜನಾಗಿದ್ದಾಗ ಮಾಡಿದ ಒಳ್ಳೆಯ ಕೆಲಸಗಳ ಜನಪ್ರಿಯತೆಯನ್ನು ಸಹಿಸದೆ ತಾನೂ ಯಥೇಚ್ಛವಾಗಿ ದಾನ ಮಾಡುವುದು, ಹಿರಿಯರಲ್ಲಿ ಸಂಕೋಚ ತೋರುವುದೇ ಮೊದಲಾದ ಗುಣಗಳಿಂದ ನಿನ್ನನ್ನು ಮೀರಲು ಪ್ರಯತ್ನಿಸುತ್ತಿರುವನು. ಏಕೆಂದರೆ ಲೋಕದಲ್ಲಿ ಶುಭ್ರತೆಯೊಂದೇ ಸದಾ ಪ್ರಕಾಶಿಸುವಂತಹದು. ಲೋಕದಲ್ಲಿ ಬೆಳಕು ಮಾತ್ರ ಸ್ವೀಕರಿಸಲ್ಪಡುವುದೇ ಹೊರತು ಕತ್ತಲಲ್ಲ. ದುರ್ಯೋಧನ ಸ್ವಭಾವತಃ ಕತ್ತಲಲ್ಲೇ ಇರುವವನಾದರೂ ಈಗ ನಿನ್ನ ಮೇಲಿನ ಪ್ರಜೆಗಳ ಅಭಿಮಾನವನ್ನು ಸಹಿಸದೇ ತಾನು ಅಲ್ಪ ಸ್ವಲ್ಪ ಜನೋಪಕಾರಿ ಕಾರ್ಯಗಳನ್ನು ನಡೆಸುತ್ತಾ ನಿನ್ನನ್ನು ಮೀರಲು ಪ್ರಯತ್ನಿಸುತ್ತಿದ್ದಾನೆ. ಹಾಗಿದ್ದರೂ ಅವನು ದುಶ್ಯಾಸನನೇ ಮೊದಲಾದ ದುಷ್ಟರ ಸಂಗವನ್ನು ಇನ್ನೂ ತೊರೆದಿಲ್ಲ. ರಾಜ್ಯದ ಸಂಪತ್ತನ್ನು ಹೆಚ್ಚಿಸಲು ಬಯಸುವ ಅವನು ನೀಚರೊಡನೆ ಗೆಳೆತನ ಮಾಡುತ್ತಾ ನಿನ್ನಂತಹ ಮಹಾತ್ಮರೊಡನೆ ವಿರೋಧ ಆಚರಿಸುತ್ತಾ ತನ್ನ ಏಳಿಗೆಯನ್ನು ಬಯಸುತ್ತಿದ್ದಾನೆ. ಒಂದು ವೇಳೆ ಮಹಾತ್ಮರನ್ನು ವಿರೋಧ ಮಾಡಿಯಾದರೂ, ದುಷ್ಟರನ್ನು ಸಂಧಿಸಿಯಾದರೂ ತನ್ನ ಖ್ಯಾತಿ ಅಥವಾ ಅಧಿಕಾರದ ಉಳಿವಿಗೆ ಪ್ರಯತ್ನ ಪಡುತ್ತಿದ್ದಾನೆ. ಲೋಕದ ಅಧಿಕಾರ ದಾಹಿಗಳ ಬಗೆಗೆ ಕವಿಯ ಮಾರ್ಮಿಕವಾದ ಮಾತು. ಒಂದೆಡೆ ಸಮಾಜಸೇವೆಯ ಸೋಗು ಮತ್ತೊಂದೆಡೆ ನಿಜವಾದ ಸೇವಕರ ನಾಶ ಬಯಸುವುದು. ಈಗಿನ ಅಧಿಕಾರಸ್ಥರ ಎಲ್ಲಾ ಲಕ್ಷಣಗಳು ದುರ್ಯೋಧನನಲ್ಲಿ ಒಟ್ಟಾಗಿ ಸೆರೆಸಿಕ್ಕಿವೆ. ದುರ್ಯೋಧನ ತನ್ನ ಅಧಿಕಾರ ಗಟ್ಟಿ ಮಾಡಿಕೊಳ್ಳಲು ದಾನ ಧರ್ಮ ಇತ್ಯಾದಿ ಕಾರ್ಯಗಳನ್ನು ತೋರಿಕೆಗೆ ಮಾಡುತ್ತಿದ್ದಾನೆ. ಆದರೆ ಅವನ ವರ್ತನೆ ಬದಲಾಯಿಸಿಲ್ಲ. ದುಷ್ಟರ ಸಂಗವನ್ನು ಮಾಡಿಯೇ ಇಂತಹ ಕೆಲಸ ಮಾಡುತ್ತಿದ್ದಾನೆ. ನಿನ್ನಂತಹ ಮಹಾತ್ಮರನ್ನು ವಿರೋಧ ಮಾಡುವುದೇ ವರವೆಂಬ ಭಾವನೆ ಅವನದ್ದು. ದುಷ್ಟರ ಸಂಗ ಮಹಾತ್ಮರ ವಿರೋಧ ಇವೇ ಅವನಿಗೆ ವರವಾಗಿವೆ. ಹಾಗಾಗಿ ಅವನೇನೂ ಸುಧಾರಿಸಿಲ್ಲ. ಸುಧಾರಿಸಿದಂತೆ ಕಾಣುತ್ತಿದ್ದಾನಷ್ಟೇ ಎಂಬ ಭಾವ. ಈಗಿನ ಅನೇಕರು ಇಂತಹ ವರ್ತನೆ ತೋರುವರು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ