ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*स किं सखा साधु न शास्ति योधिपं हितान्न य: संशृणुते स किंप्रभु: | सदानुकूलेषु हि कुर्वते रतिं नृपेष्वमात्येषु च सर्वसम्पद: ||*
_ಭಾರವಿಯ ಒಂದೊಂದು ಮಾತು ಒಂದೊಂದು ಮುತ್ತು. ಚಂದದ ಈ ಶ್ಲೋಕ ನೋಡಿ. ಯಾರು ನಮಗೆ ಉಪಯುಕ್ತವಾದ ಅಥವಾ ನಮಗೆ ಒಳ್ಳೆಯದನ್ನು ಉಂಟುಮಾಡುವ ಮಾತನಾಡುವುದಿಲ್ಲವೋ ಅವನು ಹೇಗೆ ಗೆಳೆಯನಾದಾನು? ಸ್ನೇಹವೆಂದರೆ ಯಾವ ಪ್ರಯೋಜನವನ್ನೂ ಬಯಸದೇ ಮಿತ್ರನ ಹಿತವನ್ನು ಮಾತ್ರ ಬಯಸುವಂತಹದು. ಅದಿಲ್ಲದಿದ್ದರೆ ಅವನೆಂತಹ ಸ್ನೇಹಿತ. ಸಂಸ್ಕೃತದಲ್ಲಿ ಸ್ನೇಹವೆಂದರೆ ಅಂಟು ಎಂಬ ಅರ್ಥವಿದೆ. ನಿಜವಾದ ಪ್ರೀತಿ ಅಥವಾ ಹಿತ ಕಾಯುವ ಮನ ಮಾತ್ರವೇ ಈ ಅಂಟನ್ನು ಗಟ್ಟಿಯಾಗಿಸುವುದು. ಅಥವಾ ಪ್ರಭುವು ಯಾವ ಕಾರಣದಿಂದಲೂ ಪರಾಜಿತನಾಗದಂತೆ ಸಲಹೆ ಕೊಡುವ ಸೇವಕನೇ ನಿಜವಾದ ಗೆಳೆಯನಲ್ಲವೇ! ದುಡ್ಡನ್ನೋ ಅಧಿಕಾರವನ್ನೋ ಅವಲಂಬಿಸಿರುವ ಸ್ನೇಹ ಕ್ಷಣಿಕವಾದುದು. ಇನ್ನು ಆಪ್ತರ ಉಪಯುಕ್ತ ಮಾತನ್ನು ಯಾರು ತೆಗೆದು ಹಾಕುವರೋ ಅವರು ಹೇಗೆ ರಾಜರಾಗುವರು? ತನಗೆ ಕಹಿಯೆಂದೋ, ಅಥವಾ ತನ್ನ ಯೋಚನೆಯಂತೆ ಇಲ್ಲವೆಂದೋ ಆಪ್ತರ ಬಹುಮೂಲ್ಯವಾದ ಮಾತನ್ನು ಯಾರು ತಿರಸ್ಕರಿಸುವರೋ ಅಂತಹ ಒಡೆಯರು ಬಹಳ ಕಾಲ ಒಡೆತನ ಹೊಂದಲಾರರು. ಅವರ ಪತನ ನಿಶ್ಚಿತ. ಅಧಿಕಾರದಲ್ಲಿರುವವರು ಇನ್ನೊಬ್ಬರ ಮಾತಿಗೆ ಕಿವಿಗೊಡುವುದನ್ನೂ ಒಳ್ಳೆಯ ಸಲಹೆಗಳಿದ್ದರೆ ಸ್ವೀಕರಿಸುವದನ್ನೂ ರೂಢಿಸಿಕೊಳ್ಳಬೇಕೇ ಹೊರತು ಧಿಮಾಕಿನಿಂದ ವರ್ತಿಸುವುದಲ್ಲ. ಹೀಗಾಗಿಯೇ ಪರಸ್ಪರ ಹೊಂದಾಣಿಕೆ ಹೊಂದಿರುವ ಅಂದರೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ವ್ಯವಹರಿಸುವ ರಾಜ ಮತ್ತು ಮಂತ್ರಿಗಳಿರುವಲ್ಲಿ ಎಲ್ಲಾ ಬಗೆಯ ಸಂಪತ್ತೂ ಕಂಡುಬರುವುದು. ಪರಸ್ಪರ ಮೋಸದ ಅಥವಾ ವಂಚನೆಯ ಪ್ರೀತಿಯಿದ್ದರೆ ಅದು ಒಂದಲ್ಲ ಒಂದು ದಿನ ಬಿರುಕಿಗೆ ಕಾರಣವಾಗುವುದು. ನೈಜ ವಿಶ್ವಾಸವು ಅವರಿಬ್ಬರ ಹಾಗೂ ರಾಜ್ಯದ ಏಳಿಗೆಗೂ ಕಾರಣವಾಗುವುದು. ಹಾಗಾಗಿ ಮಂತ್ರಿ ಮತ್ತು ರಾಜರ ನಡುವೆ ಎಂದಿಗೂ ಸಂಬಂಧ ಉತ್ತಮವಾಗಿರಬೇಕು. ನಮ್ಮ ಕಣ್ಣೇದುರೇ ಮಂತ್ರಿಗಳ ಕುತಂತ್ರದಿಂದ ನಾಶವಾದ ಎಷ್ಟೋ ರಾಜಮನೆತನಗಳಿವೆ. ಇಲ್ಲೆಲ್ಲ ತೋರಿಕೆಯ ಪ್ರೀತಿಯಿತ್ತೇ ಹೊರತು ನೈಜವಲ್ಲ. ನಿಜವಾದ ವಿಶ್ವಾಸವಿದ್ದ ರಾಜ್ಯವನ್ನು ಲಕ್ಷ್ಮಿಯು ಎಂದಿಗೂ ತೊರೆಯಲಾರಳು ಅಥವಾ ಅಂತಹ ಮಂತ್ರಿ ಹಾಗೂ ರಾಜರನ್ನು ರಾಜ್ಯಲಕ್ಷ್ಮಿಯು ಆಶ್ರಯಿಸುವಳು. ಇದು ನಮ್ಮ ಜೀವನದಲ್ಲೂ ಎಷ್ಟು ಸತ್ಯ ಸಂಗತಿಯಲ್ಲವೇ! ಗಂಡ- ಹೆಂಡತಿ, ಅಪ್ಪ ಅಥವಾ ಅಮ್ಮ - ಮಕ್ಕಳು, ಅಧಿಕಾರಿ- ಸೇವಕವರ್ಗ ಇಲ್ಲೆಲ್ಲ ನಿಜವಾದ ವಿಶ್ವಾಸವಿದ್ದಲ್ಲಿ ಅವೆಲ್ಲ ಯಶಸ್ಸು ಪಡೆಯುತ್ತವೆ. ಹಾಗಿಲ್ಲದಿರೆ ಅನರ್ಥವನ್ನು ತಂದುಕೊಡುತ್ತವೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ