ವೇದ- ಧರ್ಮ ೨೬

📗🌾📙 ವೇದ-ಧರ್ಮ 📗🌾📙 ಭಾಗ-26

*ಋಷಿ ಛಂದಸ್ಸು ದೇವತೆ*

_ವೇದೋಕ್ತ ದೇವತೆಗಳ ಸ್ವರೂಪ ವಿಮರ್ಶೆ ಮಾಡೋಣ.  ‌*ಅನುಗತಾಶ್ಚ ಸರ್ವತ್ರ ಅಭಿಮಾನಿನ್ಯಃ ಚೇತನಾದೇವತಾ ಮಂತ್ರಾರ್ಥವಾದೇತಿಹಾಸಪುರಾಣಾದಿಭ್ಯೋ ಅವಗಮ್ಯಂತೇ ಎಂಬಂತೆ ಎಲ್ಲೆಡೆಯೂ ಚೇತನರಾದ ದೇವತೆಗಳು ವ್ಯಾಪಿಸಿರುವರೆಂದು ಅರ್ಥವಾದ ಇತಿಹಾಸ ಪುರಾಣಗಳಿಂದ ತಿಳಿದುಬರುತ್ತದೆ._

_ಪ್ರಾಚೀನ ಋಷಿಗಳು ಗಾಳಿ, ಮಳೆ, ಬೆಳಕು, ಮಳೆ, ಗುಡುಗು ಮುಂತಾದ ಪ್ರಕೃತಿಯ ಶಕ್ತಿಗಳನ್ನು ಕಂಡು ಆಶ್ಚರ್ಯ ಭಯಗಳಿಂದ ತುಂಬಿಕೊಂಡು ಅವುಗಳನ್ನೇ ದೇವತೆಗಳೆಂದು ಭಾವಿಸಿ ಸ್ತುತಿಸಿದರೆಂಬುದು ಮೆಕ್ ಡೊನಾಲ್ಡ್ ಮೊದಲಾಗಿ ಅನೇಕ ಪಾಶ್ಚಾತ್ಯರ ಮತ. ಆದರೆ ಇದು ಪೂರ್ಣ ಸತ್ಯವಲ್ಲ. ಇದಕ್ಕುದಾಹರಣೆಯಾಗಿ ಸೂರ್ಯನ ಹಸ್ತಗಳೆಂದರೆ ನಾವು ದಿನವೂ ಕಾಣುವ ಕಿರಣಗಳು, ಅಗ್ನಿಯ ನಾಲಗೆಯೆಂದರೆ ಬೆಂಕಿಯ ಜ್ವಾಲೆಗಳು, ಇಂದ್ರನ ವಜ್ರವೆಂದರೆ ಸಿಡಿಲು ಇತ್ಯಾದಿ. ರಾಧಾಕೃಷ್ಣನ್ ಅವರೂ ಇದೇ ತರಹದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರೆಂದಂತೆ ಋಷಿಗಳ ಮನವೆಂಬ ಕಾರ್ಖಾನೆಯಲ್ಲಿ ನೂರಾರು ದೇವತೆಗಳು ತಯಾರಿಸಲ್ಪಟ್ಟರು ಎಂಬುದಾಗಿ. ಈ ದೇವತೆಗಳು ಕವಿಹೃದಯದಿ ಹುಟ್ಟಿಕೊಂಡ ಪ್ರತಿಭೆಯ ವಿಲಾಸಗಳೆಂದು ಕೆಲವರ ಮತ.‌ ಇನ್ನು ಕೆಲವರಂತೂ ಸೋಮದ ಅಮಲಿನಲ್ಲಿ ಇಂದ್ರ ರುದ್ರ ಕಂಡೆ ಎಂದು ಋಷಿಗಳು ಕೂಗಾಡಿದರು, ಆಗ ಹುಟ್ಟಿಕೊಂಡಿದ್ದೇ ದೇವತೆಗಳು ಎಂಬ ಬಾಲಿಶ ಹಾಗೂ ಮೂರ್ಖತನದ ಅಭಿಪ್ರಾಯ ಹೊರಹಾಕುತ್ತಾರೆ. ಇಂತಹ ಯಾವ ಅಭಿಪ್ರಾಯಗಳೂ ಕೆಲವು ಅಂಶಗಳಲ್ಲಿ ಸತ್ಯವಷ್ಟೇ._

_ದೇವತೆಗಳು ಕಲ್ಪನೆಯ ಕೂಸಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಣಿಸಬೇಕಿತ್ತು. ಆದರೆ ವಿಶ್ವೇದೇವತೆಗಳು ಆಯುಧ ಹಿಡಿದೇ, ಪಿತೃಗಳು ಜ್ಞಾನ ಮುದ್ರೆಯಿಂದ ಕೂಡಿರುವ ಕೈಗಳಿಂದ ಹೇಗೆ ಕಾಣುತ್ತಿದ್ದರು? ವೇದೋಕ್ತ ದೇವತೆಗಳಿಗೆ ನಿರ್ದಿಷ್ಟ ಆಕಾರ ಅಭಿವ್ಯಕ್ತಿಯ ಸ್ಥಾನ ಎಲ್ಲವೂ ಇದೆ. ಅಂತರ್ಮುಖರಾಗಿ ನೋಡಿದಾಗ ಇಂತಹ ನೈಜ ರೂಪಗಳು ಎಲ್ಲರಿಗೂ ಒಂದೇ ಬಗೆಯಾಗಿ ಕಾಣಸಿಗುತ್ತವೆ. ಋಷಿ ಮುನಿಗಳಿಗೆ ಕಂಡ ದೇವಿಯ ರೂಪವೇ ರಾಮಕೃಷ್ಣ ಪರಮಹಂಸರಿಗೂ ಕಂಡಿದ್ದೇ ಹೊರತು ಯಾರೋ ಊರಿನ ಹೆಂಗಸಂತಲ್ಲ. ಇನ್ನು ಋಷಿಗಳು ತಮ್ಮ ಸ್ವಾರ್ಥಕ್ಕಾಗಿ ಹೀಗೆ ಹೇಳಬಹುದೆಂದರೆ ಅದೂ ಸರಿಯಲ್ಲ. ಎಲ್ಲ ಬಗೆಯ ಸ್ವಾರ್ಥ ತ್ಯಜಿಸಿ ಪರಾರ್ಥಕ್ಕಾಗಿ ಸಾಧನೆ ಮಾಡಲಾರಂಭಿಸಿದ ಮೇಲೆಯೇ ಅವರುಗಳು ಋಷಿಗಳಾಗಿದ್ದು ಹೊರತು ಕೇವಲ ತಪದಿಂದಲ್ಲ. ಒಂದು ವೇಳೆ ತಪವೇ ಹೇತುವಾಗಿದ್ದರೆ ರಾವಣ ಮುಂತಾದವರು ಮಹರ್ಷಿಗಳಾಗುತ್ತಿದ್ದರು. *ರಜಸ್ತಮೋಭ್ಯಾಂ ನಿರ್ಮುಕ್ತಾಃ ತಪೋಜ್ಞಾನ ಸಮಾಧಿಭಿಃ* ಎಂಬಂತೆ ಕೇವಲ ಸತ್ವವೊಂದನ್ನೇ ಆಶ್ರಯಿಸಿ ಬಯಕೆಗಳು ಅವುಗಳ ಪರಿಣಾಮಗಳಲ್ಲಿ ನಿರ್ಲಿಪ್ತರಾಗಿ ಲೋಕದ ಸ್ಪರ್ಧೆಯಿಂದ ದೂರವಾಗಿ ತಪಸ್ಸನ್ನು ಅಚರಿಸುತ್ತಿದ್ದರು ಋಷಿಗಳು. ಇಷ್ಟಾಗಿ ಅವರು ಕಂಡುಕೊಂಡಿದ್ದೇ ಹೊರತು ಸೃಷ್ಟಿ ಮಾಡಿದವರಲ್ಲ. ಎಲ್ಲೋ ವಿಶ್ವಾಮಿತ್ರನಂತಹ ಋಷಿಗಳು ತಮ್ಮ ತಪವು ಪೂರ್ಣವಾಗುವ ಮೊದಲು ಅರೆಬೆಂದ ತಪದಿಂದ ಇನ್ನೊಂದು ಸ್ವರ್ಗ ಮುಂತಾದವನ್ನು ಸೃಷ್ಟಿಸಿರಬಹುದೇ ಹೊರತು ಪೂರ್ಣಜ್ಞಾನಿಗಳಾದ ಮೇಲೆ ಅಲ್ಲ._

_ಇನ್ನು ಋಷಿಗಳು ಸೋಮಪಾನ ಮಾಡುತ್ತಿದ್ದುದು ಸತ್ಯವಾದರೂ ಅದು ಚಟವಾಗಿರಲಿಲ್ಲ. ಯಜ್ಞದ ಸಂದರ್ಭದಲ್ಲಿ ಅನೇಕ ದಿನಗಳು ವ್ರತ ಉಪವಾಸ ಮಾಡಿ ಯಜ್ಞ ವಿಧಿಯ ಅಂಗವಾಗಿ ದೇವತಾಪ್ರಸಾದವೆಂದಿ ಸ್ವೀಕರಿಸುತ್ತಿದ್ದುದೇ ಹೊರತು ಯಥೇಚ್ಛವಾಗಿ ಅಲ್ಲ. ಯಾರಾದರೂ ತಿರುಪತಿ ಲಾಡು ಸಿಕ್ಕಿತೆಂದು ಹತ್ತತ್ತು ತಿನ್ನುವರೇ? ಹಾಗೆ ತಿಂದರೆ ಅವರಿಗೆ ಅದರ ಮೌಲ್ಯ ತಿಳಿದಿಲ್ಲವೆಂದರ್ಥ. ಇಂತಹ ಮಾತನಾಡುವವರು ವರ್ಷಗಟ್ಟಲೆ ಉಪವಾಸ ಮಾಡಿ ದೇಹ ದಂಡಿಸಿ ಅವರೆನ್ನುವಂತೆ ಸೋಮಪಾನ ಕುಡಿದರೆ ಆಗ ಮಹತ್ವದ ಅರಿವಾದೀತು ಹೊರತು ಈಗಿನ ಕುಡಿತದ ರೀತಿಯಲ್ಲ ಅದು. ಹಾಗಾಗಿ ಅಮಲಿನಲ್ಲಿ ಏನೇನೋ ಅಂದರೆನ್ನುವುದು ಕುಡುಕರ ಮಾತಿನಂತೆ ತಿರಸ್ಕೃತವೇ ಸರಿ._

ಮುಂದುವರಿಯುತ್ತದೆ....

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩