🌹ಶಾಕುಂತಲದ ಸುಂದರ ಕುಸುಮ🌹

*अस्मान्साधु विचिन्त्य संयमधनानुच्चै: कुलं चात्मन: त्वय्यास्या: कथमप्यबान्धवकृतां स्नेहप्रवृत्तिं च ताम् । सामान्यप्रतिपत्तिपूर्वकमियं दारेषु दृश्या त्वया भाग्यायत्तमत: परं न खलु तद्वाच्यं वधूबन्धुभि: ।।*

_ಕಣ್ವಮಹರ್ಷಿಗಳು ದುಷ್ಯಂತನಿಗೆ ಶಿಷ್ಯನ ಮೂಲಕ ಈ ಸಂದೇಶ ಕಳುಹಿಸುತ್ತಿದ್ದಾರೆ.ಕನ್ಯೆ ಹೆತ್ತವರ ಜವಾಬ್ದಾರಿ ಮತ್ತೆ ಮತ್ತೆ ಸೂಚಿಸುತ್ತಿರುವಂತಿದೆ ಈ ಸುಮ.'ದುಷ್ಯಂತ ' ಇವಳನ್ನು ಹೀಗೆ ನೋಡಿಕೊ.ಸಂಯಮವೇ ನಮ್ಮ ಧನ ಎಂಬುದನ್ನು ಅರ್ಥಮಾಡಿಕೊಂಡು, ತನ್ನ ಕುಲದ ದೊಡ್ಡಸ್ತಿಕೆಯನ್ನೂ, ಬಂಧುಗಳ ಮಧ್ಯಸ್ಥಿಕೆ ಇಲ್ಲದೆ ಇವಳಲ್ಲಿ ತಾನು ಅನುರಾಗ ತಾಳಿದುದನ್ನೂ ಆಲೋಚಿಸಿ, ತನ್ನ ಪತ್ನಿಯರಿಗೆ ಸಾಮಾನ್ಯವಾಗಿ ಸಲ್ಲಬೇಕಾದ ಆದರದಿಂದ ಇವಳನ್ನು ನೋಡಿಕೊಳ್ಳಬೇಕು.ಇದಕ್ಕಿಂತ ಹೆಚ್ಚಿನದು ಅವಳ ಭಾಗ್ಯಕ್ಕೆ ಬಿಟ್ಟದ್ದು.ಅದನ್ನು ವಧುವಿನ ಬಂಧುಗಳು ಹೇಳಬಾರದು.ವಧುವಿನ ತಂದೆಯಾಗಿ ಅಳಿಯನಿಗೆ ಕಣ್ವರಾಡುವ ಮಾತಿದು.ನಮ್ಮ ಸಂಪತ್ತು ಸಹನೆ ಅಥವಾ ತಾಳ್ಮೆ. ಅದನ್ನು ಬಿಟ್ಟು ಹೆಚ್ಚಿನ ಸಂಪತ್ತಿಲ್ಲ.ತವರುಮನೆಯಿಂದ ಅದು ತಾ ಇದು ತಾ ಎಂದು ಕಳುಹಿಸಿದರೆ ತರಲು ಏನೂ ಇಲ್ಲ ಎಂಬ ಗೂಢಾರ್ಥ.ಇನ್ನೊಂದು ಅರ್ಥದಲ್ಲಿ ತಾಳ್ಮೆ ನಮ್ಮ ಬಳಿ ಉಳಿಯುವಂತೆ ಮಾಡು.ಅವಳ ಯೋಗಕ್ಷೇಮ ಹಾಳುಗೆಡವಿ ನಮ್ಮ ತಾಳ್ಮೆ ಕೆಡಿಸದಿರು.ಅದು ನಿನಗೂ ಕ್ಷೇಮ.ನಿನ್ನ ಪುರುವಂಶದ ಶ್ರೇಷ್ಠತೆಗೆ ಅನುಸಾರ ಅವಳನ್ನು ಆದರಿಸು.ನಿಮ್ಮ ವಂಶಸ್ಥರು ಹಾಕಿಕೊಟ್ಟ ಸ್ತ್ರೀಯರಿಗೆ ಗೌರವ ಕೊಡುವ ಸತ್ಪರಂಪರೆ ಮೀರದಿರು.ಇವಳು ಎಲ್ಲರ ಗೌರವಕ್ಕೆ ಪಾತ್ರಳಾಗಲಿ.ಇನ್ನೊಂದು ಮಾತು.ನೀನು ಇವಳಲ್ಲಿ ಹಿರಿಯರ ಮಧ್ಯಸ್ಥಿಕೆ ಇಲ್ಲದೆ ಪ್ರೀತಿ ಬೆಳೆಸಿದ್ದು.ಹಾಗಾಗಿ ನಾವು ಪದೇ ಪದೇ ನಮ್ಮ ಮಗಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳದಿರುವಂತೆ ನಿನ್ನ ಉಳಿದ ಪತ್ನಿಯರಿಗೆ ಸಲ್ಲುವ ಪ್ರೀತಿ ಇವಳಿಗೂ ತಲುಪುವಂತೆ ನೋಡಿಕೊ.ಅವರಿಗಿಂತ ಕೀಳಲ್ಲ ಈಕೆ.ವನವಾಸಿಯಾದರೂ ನಾಗರಿಕರಿಗಿಂತ ಹೆಚ್ಚು ಸಂಸ್ಕಾರವಂತಳು.ನೀನಾಗಿಯೇ ಪ್ರೀತಿ ಪ್ರಾರಂಭಿಸಿದ್ದರಿಂದ ಆ ಜವಾಬ್ದಾರಿ ನಿನಗೇ ಹೆಚ್ಚಿರುವುದು.ಇನ್ನು ಇವಳು ಪಟ್ಟದರಸಿ ಆಗುವಳೋ, ರಾಜನ ಪ್ರಿಯಪತ್ನಿ ಆಗುವಳೋ, ಅರಮನೆಯಲ್ಲೆಲ್ಲ ಮೆರೆಯುವಳೋ ಅವೆಲ್ಲ ಅವಳ ಹಣೆಬರಹವನ್ನು ಅವಲಂಬಿಸಿದೆ.ಅದನ್ನು ನಾನು ಹೇಳಲಾರೆ.ಹುಡುಗಿಯ ಬಂಧುಗಳು ಇದಕ್ಕಿಂತ ಹೆಚ್ಚಿನ ಆಕಾಂಕ್ಷೆಗಳನ್ನು ಹೇಳಬಾರದು.ಮನದಲ್ಲಿ ಇದ್ದರೂ ಬಾಯಿಬಿಟ್ಟು ಹೇಳಿ ಪಡೆಯುವಂಥದ್ದಲ್ಲ ಅವು.ಅವರವರ ಯೋಗ್ಯತೆ ಅನುಸರಿಸಿ ಸಿಂಗುವಂತಹವು. ಒಟ್ಟಾರೆಯಾಗಿ ನಮಗೂ ನಿನಗೂ ಅವಳ ಕಾರಣದಿಂದ ದು:ಖವಾಗದಿರುವಂತೆ ಸಲಹು.ಇಷ್ಟೇ ನಾನು ಕೇಳಿಕೊಳ್ಳುವುದು‌.ಕಣ್ವರ ಕೇಳಿಕೆಯಲ್ಲೂ ಒಂದು ಗಾಂಭೀರ್ಯ ಇರುವುದು ಕಾಳಿದಾಸನ ಉದಾತ್ತ ಶೈಲಿ.ಇಂದ್ರಿಯ ನಿಗ್ರಹವೇ ಸಂಪತ್ತಾಗಿರುವವರು ಅಥವಾ ನಿಗ್ರಹಾನುಗ್ರಹ ಸಮರ್ಥರು. ಉತ್ತಮ ಕುಲದ ನಡತೆಯ ಬಗ್ಗೆ ಜನರಲ್ಲಿರುವ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳಲು ಸೂಚನೆ.ಬಂಧುಗಳ ನೆರವಿಲ್ಲದೇ ಎನ್ನುವುದರಿಂದ  ನಿಮ್ಮದೇ ಹೆಚ್ಚಿನ ಜವಾಬ್ದಾರಿ ಎಂಬ ಎಚ್ಚರಿಕೆ. ಅನ್ಯ ಪತ್ನಿಯರಲ್ಲಿ ಕಾಣುವ ಪ್ರೀತಿ ಇವಳಲ್ಲೂ ಇರಲಿ ಎಂಬ ಆಗ್ರಹ.ಕಣ್ವರು ತುಂಬಾ ವಿಶಾಲ ಮನೋಭಾವದವರು.ಸಾಮಾನ್ಯರಂತೆ ತನ್ನ ಮಗಳೇ ರಾಣಿಯಾಗಲಿ ಎಂದು ಹೇಳುವುದಿಲ್ಲ ಅವರು.ದೈವ ಅವಳ ಪರವಾಗಿದ್ದರೆ ಮಹಾರಾಣಿ ಆಗಲೂಬಹುದು. ಮಾನ್ಯಪ್ರತಿಪತ್ತಿ ಎಂದು ಹೆಚ್ಚಿನ ಮಾನ್ಯತೆಯಿಂದ ಕಾಣಬೇಕು ಎಂಬ ಅರ್ಥ ಸೂಚ್ಯ ಹೊರತು ವಾಚ್ಯವಲ್ಲ. ಇದು ಶಾಕುಂತಲದ ಪ್ರಸಿದ್ಧ ನಾಲ್ಕು ಶ್ಲೋಕಗಳಲ್ಲಿ ಎರಡನೆಯದು._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩