🌹ಶಾಕುಂತಲದ ಮತ್ತೊಂದು ಸೌರಭ🌹

*भूत्वा चिराय चतुरन्तमहीसपत्नी दौष्यन्तिमप्रतिहतं तनयं निवेश्य । भर्त्रा तदर्पितकुटुम्बभरेण  सार्धं शान्ते करिष्यसि पदं पुनराश्रमेस्मिन् ।।*

_ಶಕುಂತಲೆ ತಂದೆಗೆ ನಮಸ್ಕರಿಸಿ ಅಳುತ್ತಿದ್ದಾಳೆ.ಕಣ್ವರು ಮಗಳನ್ನು ಸಮಾಧಾನ ಮಾಡುತ್ತಿದ್ದಾರೆ.ಇನ್ನು ಯಾವಾಗ ಆಶ್ರಮಕ್ಕೆ ನಾನು ಕಾಲಿಡುವುದು ಎಂದು ಶಕುಂತಲೆ ಪ್ರಶ್ನಿಸಿದಾಗ ಕಣ್ವರ ಮನೋಹರವಾದ ಮಾತು.ಮಗಳೇ- ನಾಲ್ಕು ದಿಕ್ಕಿನಲ್ಲಿ ಸಮುದ್ರದಿಂದ ಸುತ್ತುವರೆದ ಭೂಮಿಗೆ ಬಹುಕಾಲ ಸವತಿಯಾಗಿ  , ತನಗೆ ಪ್ರತಿಯಾಗಿ ನಿಲ್ಲಬಲ್ಲ ಮಹಾರಥಿಕನಿಲ್ಲದ ದುಷ್ಯಂತನಿಂದ ಪಡೆದ ನಿನ್ನ ಮಗನನ್ನು ಪಟ್ಟಕಟ್ಟಿ, ಅವನಿಗೆ ಕುಟುಂಬದ ಭಾರವನ್ನು ಒಪ್ಪಿಸಿದ ನಿನ್ನ ಪತಿಯೊಡನೆ ಶಾಂತವಾದ ಈ ಆಶ್ರಮದಲ್ಲಿ ಮತ್ತೆ ಹೆಜ್ಜೆಯನ್ನಿಡುವೆ.ಇದು ಆಶೀರ್ವಾದವೂ ಹೌದು,ಕಿವಿಮಾತೂ ಹೌದು,ಬಯಕೆಯೂ ಹೌದು, ಲೋಕಕ್ಷೇಮವನ್ನು ಬಯಸುವ ಋಷಿಯ ಮನದ ಮಾತೂ ಹೌದು. ರಾಜನಿಗೆ ಮೊದಲ ಪತ್ನಿ ರಾಜ್ಯಲಕ್ಷ್ಮಿ.ಭೂಮಿಯೇ ಅವನ ರಾಣಿ.ಉಳಿದವರೇನಿದ್ದರೂ ಸವತಿಯರು.ರಾಜ್ಯಲಕ್ಷ್ಮಿಗಾಗಿ ಹೋರಾಡುತ್ತಲೇ ಇರುತ್ತಾನೆ.ಅವಳಿಲ್ಲವಾದರೆ ರಾಜಪದವಿ ಎಲ್ಲಿ? ಹಾಗಾಗಿಯೇ ಕಣ್ವರ ಮಾತು ಭೂಮಿಗೆ ಸವತಿಯಾಗಿ ಬಹುಕಾಲ ಇರು.ನಿಮ್ಮ ಜೋಡಿ ಬೇರ್ಪಡದೆ ರಾಜನು ನಿನ್ನನ್ನು ರಾಣಿಯಂತೆ ನೋಡಿಕೊಳ್ಳಲಿ.ದಾಂಪತ್ಯ ಅವಕಾಶವಾದಿ ಆಗದಿರಲಿ. ಎರಡನೆಯ ಮಾತು ಶತ್ರುಗಳ ಶಕ್ತಿ ಬೆಳೆಯದಿರುವ ಮಾತು.ದುಷ್ಯಂತನಷ್ಟೇ ಮಹಾರಥನೋರ್ವ ಬೆಳೆದರೆ ರಾಜ್ಯ ಕೈ ತಪ್ಪಬಹುದು.ಹಾಗಾಗಿ ತನಗೆ ಸಮಾನನಾದ ಮಹಾರಥನಿಲ್ಲದ ದುಷ್ಯಂತ. ಅವನಿಗೆ ನಿನ್ನಲ್ಲಿ ಜನಿಸಿದ ಮಗನಿಗೆ ಪಟ್ಟ ಕಟ್ಟುವುದು ಎಂಬ ಮಾತು ಶಕುಂತಲೆ ಉಳಿದ ಪತ್ನಿಯರನ್ನು ಮೀರಿ ಮಹಾರಾಣಿಯಾಗಲಿ, ಅವಳ ಸಂತತಿಗೆ ರಾಜ್ಯ ದೊರಕಲಿ ಎಂಬ ಸಾಮಾನ್ಯ ತಂದೆಯ ಆಶಯ. ಮಗನ ಬೆಳವಣಿಗೆಯ ನಂತರ ರಾಜ್ಯದ ಹೊಣೆಗಾರಿಕೆ ವಹಿಸಿ 'ವಾರ್ಧಕ್ಯೇ ಮುನಿವೃತ್ತೀನಾಂ' ಎಂಬಂತೆ ಕಾಡಿನಲ್ಲಿ ತಪಸ್ವಿ ಜೀವನ ನಡೆಸುವಾಗ ಈ ಶಾಂತ ಆಶ್ರಮವು ನಿನಗೆ ಮತ್ತೆ ನೆಲೆಯಾಗುತ್ತದೆ. ಅಲ್ಲಿಯವರೆಗೆ ಯಾವ ಘಟನೆಗಳೂ ನಿನ್ನನ್ನು ಇಲ್ಲಿಯವರೆಗೆ ಬರದಂತೆ ತಡೆಯಲಿ.ಒಂದು ವೇಳೆ ವಿವಾಹವಾದ ಮಗಳು ಅಕಸ್ಮಾತ್ತಾಗಿ ಹಿಂದಿರುಗಿದರೆ ತಂದೆಗೆ ಚಿಂತೆ ಪ್ರಾರಂಭವಾಗುವುದು.ಮಗಳ ಬಾಳು ಏನಾಯಿತೋ ಎಂದು. ಹಾಗಾಗಿ ಸುಖವೆಲ್ಲ ಕಳೆದು ನಂತರ ಆಶ್ರಮಕ್ಕೆ ಹಿಂತಿರುಗು ಎಂಬ ಮುಂದಾಲೋಚನೆ ಹಾಗೂ ಎಚ್ಚರಿಕೆಯ ಮಾತೂ ಕೂಡ. 'ಪದಂ ಕರಿಷ್ಯಸಿ ' ಎಂಬುದೊಂದು ನುಡಿಗಟ್ಟು. ಪುರುವಂಶದವರ ಕುಲವ್ರತ ಅರಿತ ಕಣ್ವರ ಮಾತಿದು. ರಾಜ್ಯರಕ್ಷಣೆಯೇ ರಾಜರಿಗೆ ಕುಟುಂಬದ ಭಾರ, ಹಾಗಾಗಿಯೇ ಮಗನಿಗೆ ರಾಜ್ಯಭಾರ ವಹಿಸಿ ಇಲ್ಲಿಗೇ ಹಿಂತಿರುಗು ಎಂಬ ಭಾವ.ಮಗಳಿಗೆ ಒಳ್ಳೆಯದನ್ನು ಬಯಸುತ್ತಾ ಬೇಸರವಾಗದಂತೆ ( ಮಧ್ಯದಲ್ಲಿ ಮನೆಗೆ ಬರಬೇಡ ) ತಿಳಿಹೇಳುವ ಕಾಳಿದಾಸನ ಶೈಲಿ ಹೃದ್ಯ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩