🌺ಅವಿಮಾರಕದ ಸುಂದರ ಕುಸುಮ🌺

*यज्ञै: शुभै: हरिसमो भव नित्ययुक्तै: सत्यैर्दृढैर्दशरथप्रतिमो भव त्वम् । नित्यार्पितै: पितृसमो भव सम्प्रदानै: स्वेनात्मना सुसदृशेन पराक्रमेण ।।*

_ಅಳಿಯನಾದ ಅವಿಮಾರಕ  ಕುರಂಗಿಯ ತಂದೆ ತನ್ನ ಮಾವ ಕುಂತಿಭೋಜನಿಗೆ ನಮಸ್ಕರಿಸುತ್ತಿದ್ದಾನೆ. ಆಗ ಅವನು ನುಡಿಯುವ ಆಶೀರ್ವಚನ. ನಿತ್ಯವೂ ಯಜ್ಞಗಳನ್ನು ಆಚರಿಸಿ ನೀನೂ ಕೂಡ ಇಂದ್ರನಂತೆ ಶ್ರೇಯಸ್ಸನ್ನು ಪಡೆ.( ಹರಿ ಶಬ್ದಕ್ಕೆ ಇಂದ್ರ ಎಂಬ ಅರ್ಥವೂ ಇದೆ.) ಇಂದ್ರನು ನಾನಾ ಯಜ್ಞಗಳಿಂದ ಆ ಮಹತರವಾದ ಸ್ಥಾನ ಪಡೆದಿರುವನು.ಶತಕ್ರತು ಎಂಬ ಅವನ ಹೆಸರು ನೂರು ಯಾಗ ನಡೆಸಿದವನು ಎಂಬುದನ್ನೇ  ಹೇಳುವುದು.ಯಜ್ಞಗಳಿಂದ ಈ ಲೋಕದಲ್ಲಿ ಅನೇಕರನ್ನು ಅನ್ನ ವಸ್ತ್ರ ಧನ ಕನಕ ಗೋ ಮುಂತಾದ ದಾನಗಳಿಂದ ಸಂತೋಷಪಡಿಸುವುದು.ಹಾಗೆಯೇ ದೇವತೆಗಳ ಪ್ರೀತ್ಯರ್ಥವಾಗಿ ಹವಿಸ್ಸನ್ನು ನೀಡಿ ಅವರನ್ನೂ ತೃಪ್ತಿಪಡಿಸಿ ಕಾಲಕಾಲಕ್ಕೆ ಮಳೆ ಬೆಳೆ ಸಮೃದ್ಧಿ ಉಂಟಾಗುವಂತೆ ಮಾಡುವುದು. ಇಂತಹ ಕರ್ಮಗಳನ್ನು ಆಚರಿಸು ಎಂಬ ಭಾವ.ಸತ್ಯದ ದಾರಿಯಿಂದ ಎಂದಿಗೂ ತಪ್ಪಿ ನಡೆಯಬೇಡ.ಪರಾಕ್ರಮಿಯಾದ ದಶರಥ ಶಾಪದ ಮೂಲಕ ತನ್ನ ಪ್ರಾಣ ಹೋದರೂ ಸರಿ ಎಂದು ನಿಶ್ಚಯಿಸಿ ಮಗನನ್ನು ಕೊಂದೆ ಎಂದು ಸತ್ಯವನ್ನು ಋಷಿಯ ಮುಂದೆ ನುಡಿಯುವನು ಹೊರತು ಸುಳ್ಳನ್ನಲ್ಲ.ಹೀಗೆ ಸತ್ಯಂ ವದ ಎಂಬ ಉಪನಿಷದ್ವಾಣಿ ಮರೆಯದಿರು.ದಿನವೂ ಪ್ರಜೆಗಳ ಅಪೇಕ್ಷೆಯಂತೆ ಬೊಕ್ಕಸದ ಧನವನ್ನು ಉಪಯೋಗಿಸಿ ತಂದೆ ಸೌವೀರರಾಜನಂತೆ ಪ್ರಸಿದ್ಧಿ ಪಡೆ ಉತ್ತಮ ಆಡಳಿತಗಾರನಾಗಿ. ಉತ್ತಮ ರಾಜನು ಪ್ರಜೆಗಳಿಗೆ ಸೌಕರ್ಯ ಕಲ್ಪಿಸಿಕೊಡುವನು ಹೊರತು ಸುಖಾಸುಮ್ಮನೆ ದಾನಮಾಡಿ ವಿಶ್ವಾಸ ಸಂಪಾದಿಸುವ ಮೂರ್ಖತನ ತೋರಲಾರ.ಕೊನೆಯದಾಗಿ ಪರಾಕ್ರಮದಲ್ಲಿ ನಿನಗೆ ನೀನೇ ಸಾಟಿ.ಆ ನಿನ್ನ ಪರಾಕ್ರಮ ದುಷ್ಡ ಶಿಕ್ಷೆಗೆ ಶಿಷ್ಟ ರಕ್ಷಣೆಗೆ ಮೀಸಲಾಗಿರಲಿ.ಹೀಗೆ ಹೀಗೆ ನಾಲ್ಕು ಗುಣಗಳಿಂದ ಕೂಡಿ ನಾಲ್ಕನೆಯ ಗುಣದಂತೆ ಶೋಭಿಸು ಎಂಬ ಸುಂದರ ಆಶೀರ್ವಾದ. ( ಮೂರು ಗುಣ ಸತ್ವ ರಜ ತಮ) ಇಲ್ಲಿ ಹೆಚ್ಚು ಕಾಲ ಬದುಕು,ಸಂಪತ್ತು ಹೆಚ್ಚಾಗಲಿ,ಮಕ್ಕಳು ಜನಿಸಲಿ,ರೂಪವತಿ ಸಿಗಲಿ ಮುಂತಾದ ಕ್ಷುಲ್ಲಕ ಬಯಕೆಗಳಾವುವೂ ಇಲ್ಲ ಅನ್ನುವುದು ಆಶೀರ್ವಾದದ ಘನತೆ ಹೆಚ್ಚಿಸಿದೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩