🌺ಪ್ರತಿಮಾನಾಟಕಸ ಒಂದು ಸುರಭಿ 🌺

*सीताभव: पातु सुमन्त्रतुष्ट: सुग्रीवराम: सहलक्ष्मणश्च । यो रावणार्यप्रतिमश्च देव्या विभीषणात्मा भरतोनुसर्गम् ।।*

_ಭಾಸನ ನಾಟಕಗಳಲ್ಲಿ ಹೆಚ್ಚು ಪ್ರಸಿದ್ಧವಾದ ನಾಟಕ ಪ್ರತಿಮಾನಾಟಕ.ಮಂಥರೆಯ ದುರ್ಬೋಧೆಯ ಪರಿಣಾಮ ರಾಮನ ವನಗಮನ ನಡೆಯುತ್ತದೆ. ಅವನು ವನಕ್ಕೆ ಹೊರಡುವ ಮುಂಚಿನ ಘಟನೆಗಳಿಂದ ಈ ನಾಟಕ ಪ್ರಾರಂಭವಾಗುವುದು.ಇದರ ವಿಶೇಷತೆ ಪ್ರತಿಮಾಗೃಹದ ಕಲ್ಪನೆ. ರಾಮಾಯಣದಲ್ಲಿ ಇಲ್ಲದ ರಾಜರ ಪ್ರತಿಮೆಗಳನ್ನಿಡುವ  ಒಂದು ಸಂಗ್ರಹಾಲಯ ಇವನ ಹೊಸ ಕಲ್ಪನೆ. ನಾಟಕಕ್ಕೂ ಅದೇ ಹೆಸರಾಗಿದೆ.ಭರತನಿಗೆ ಎಲ್ಲಾ ವಿಷಯ ತಿಳಿಯುವುದು ಅವನು ಹಾಗೆಯೇ ಕಾಡಿಗೆ ರಾಮನಿಗಾಗಿ ತೆರಳುವುದು ಇತ್ಯಾದಿ ಕವಿಯ ಕಥೆ ಹೇಳುವ ಶೈಲಿ ನಿಜಕ್ಕೂ ಸುಂದರ.ಒಂದೊಂದು ಶ್ಲೋಕಗಳು ಕರುಣಾರಸವನ್ನು ಸುಂದರವಾಗಿ ಬಿಂಬಿಸುತ್ತವೆ.ಕೆಲವು ಶ್ಲೋಕಗಳನ್ನು ಓದಿದಾಗ ನಮಗರಿವಿಲ್ಲದೇ ಕಣ್ಣೀರು ಹರಿಯುವುದು ಕವಿಯ ಚಾತುರ್ಯ. ಉತ್ತರರಾಮಚರಿತದಂತೆ ಕರುಣಾರಸ ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಪಾದಿಸಲ್ಪಟ್ಟದ್ದು ಇಲ್ಲಿಯೇ ಎನ್ನಬಹುದು. ಅಂತಹ ಕೆಲವು ಉತ್ತಮ ಶ್ಲೋಕಗಳ ಯಥಾಮತಿ ಪರಿಚಯ ಮಾಲಿಕೆ ಇಂದಿನಿಂದ ಆರಂಭಿಸುತ್ತಿದ್ದೇನೆ.ತಪ್ಪು ತಿದ್ದಿ ಮುನ್ನಡೆಸಬೇಕು ಗುರು ಹಿರಿಯರು.
_ಸೀತೆಯ ಪತಿ ಅಥವಾ ಜನಕನ ಅಳಿಯನಾದ ಶ್ರೀರಾಮನು ನಮ್ಮನ್ನು ಸಲಹಲಿ.ಸುಮಂತ್ರ ಹೆಸರಿನ ಮಂತ್ರಿಯನ್ನು ಹೊಂದಿದವನು ಅಥವಾ ಮಂತ್ರಾಲೋಚನೆಯಲ್ಲಿ ಪಳಗಿದ ಮಂತ್ರಿಗಳುಳ್ಳ ರಾಮ ಕಾಪಾಡಲಿ.ಸದಾ ಲಕ್ಷ್ಮಣನ ಜೊತೆಗಿರುವ ಅಥವಾ ಉತ್ತಮ ಲಕ್ಷಣಗಳಿಂದ ಕೂಡಿದ  ರಾಮ ಪಾಲಿಸಲಿ.ಪ್ರತಿಯೊಂದು ಸಂದರ್ಭದಲ್ಲಿ ನೆರಳಿನಂತಿದ್ದ ಲಕ್ಷ್ಮಣ,ಹಾಗಾಗಿ ಸಹ =ಜೊತೆ ಜೊತೆಗೆ ಎಂದಿಗೂ.ಸುಗ್ರೀವ ಮಿತ್ರ ಶ್ರೀ ರಾಮ  ಅಥವಾ ಸುಂದರ ಕಂಠದಿಂದ ಶೋಭಿಸುತ್ತಿರುವ ರಾಮ ಅನುಗ್ರಹಿಸಲಿ.( ಗ್ರೀವ = ಕಂಠ) ರಾವಣನ ಶತ್ರುವಾದ ರಾಮ ನಮ್ಮನ್ನು ರಕ್ಷಿಸಲಿ.ಯಾರೂ ಸಾಟಿ ಇಲ್ಲದ ರಾಮ ನಮ್ಮನ್ನು ಅವಿರತ ನೋಡಿಕೊಳ್ಳಲಿ.ದೇವಿಯಿಂದ ಸೀತಾಮಾತೆಯಿಂದ ಕೂಡಿರುವ ರಾಮ ನಮ್ಮನ್ನಗಲದಿರಲಿ.( ಮನದಲ್ಲಿ ನೆಲೆಸಲಿ) ವಿಭೀಷಣನ ಆತ್ಮ ಅಂದರೆ ಕಷ್ಟಸುಖಗಳಲ್ಲಿ ಭಾಗಿಯಾದ ರಾಮ ನಮ್ಮ ಸುಖದು:ಖಗಳಲ್ಲಿ ಜೊತೆಗಿದ್ದು ಧೈರ್ಯ ನೀಡಲಿ.ಯಾರ ಆತ್ಮ ಭರತನೋ ,ಭರತನ ಮೇಲೆ ಆತ್ಮಕ್ಕಿಂತ ಮಿಗಿಲಾದ ಪ್ರೀತಿ ಹೊಂದಿದ್ದ ರಾಮ ನಮಲ್ಲಿ ದಯೆ ತೋರಲಿ. ಪ್ರತಿಯೊಂದು ಸೃಷ್ಟಿಯಲ್ಲಿ ರಕ್ಷಿಸಲಿ ಅಥವಾ ಜನ್ಮ ಜನ್ಮಾಂತರಗಳಲ್ಲೂ ಸಲಹಲಿ ಎಂಬ ಅಪೂರ್ವ ಅರ್ಥ ಈ ಶ್ಲೋಕದಲ್ಲಿದೆ.ರಾಮಾಯಣದ ,ಈ ನಾಟಕದ ಎಲ್ಲಾ ಮುಖ್ಯ ಪಾತ್ರಗಳನ್ನು ಹೇಳಿ ಪಾತ್ರಪರಿಚಯ ಹಾಗೂ ನಾಂದೀರೂಪದ ಸ್ತುತಿ ಎರಡನ್ನೂ ಒಂದರಲ್ಲೇ ಹೇಳಿರುವುದು ಭಾಸನ ಕೌಶಲ್ಯಕ್ಕೆ ಸಾಕ್ಷಿ.ಅಪ್ರತಿಮ ಎಂದು ನಾಟಕದ ಹೆಸರನ್ನೂ ಸೂಚಿಸಿದ್ದಾನೆ._

📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩