*ವೇದಧರ್ಮ ಭಾಗ-೧*

_ವೇದ ಎನ್ನುವುದು ಭಾರತೀಯ ಸಂಸ್ಕೃತಿಯ ಅಥವಾ ಪರಂಪರೆಯ ಬಹುಮುಖ್ಯ ಅಂಗ. *ಇಷ್ಟಪ್ರಾಪ್ತಿ ಅನಿಷ್ಟಪರಿಹಾರಯೋ: ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದ:*  ಎಂದರು ಸಾಯಣಾಚಾರ್ಯರು. ಯಾವ ಜ್ಞಾನವು ಬೇಕಾದ್ದನ್ನು ತರುವಲ್ಲಿ ಬೇಡವಾದ್ದನ್ನು ನಿರಾಕರಿಸುವಲ್ಲಿ ಸಹಕಾರಿಯೋ ಅವುಗಳೇ ವೇದಗಳು. *ಧರ್ಮೋ ವಿಶ್ವಸ್ಯ ಜಗತ: ಪ್ರತಿಷ್ಠಾ* ಎಂಬ ಮಾತಿನಂತೆ ಧರ್ಮವೇ ಜಗತ್ತಿನ ಎಲ್ಲದರ ಅಳಿವು ಉಳಿವಿಗೆ ಕಾರಣ.ಆಸ್ತಿಕ ಹಾಗೂ ನಾಸ್ತಿಕ ದರ್ಶನಗಳೆರಡರ ಮೂಲವೂ ಇವೇ ವೇದಗಳು.ದೇಹಕ್ಕೆ ಹೇಗೆ ತಲೆಯು ಮುಖ್ಯವೋ ನಮ್ಮ ಎಲ್ಲಾ ಆಚಾರ ವಿಚಾರಗಳಲ್ಲಿ ವೇದಗಳೇ ಮುಖ್ಯ. ಅವುಗಳಿಂದಲೇ ಸಂಸ್ಕೃತಿ ಜನಿಸಿತು. ಇದಕ್ಕಾಗಿಯೇ ಏನೋ *ವೇದೋಖಿಲೋ ಧರ್ಮ ಮೂಲಂ* ಎನ್ನುವ ಮಾತು.ಎಲ್ಲಾ ಧರ್ಮಗಳ ಮೂಲವೂ ವೇದವೆನ್ನುವುದು ಇದರ ಅರ್ಥ. ಹಾಗಾದರೆ ವೇದ ಎಂದರೇನು?ಇದು ಸಾಮಾನ್ಯರ ಪ್ರಶ್ನೆ. ಸರಳವಾಗಿ ಹೇಳುವುದಾದರೆ ವೇದ= ಜ್ಞಾನ ಅಷ್ಟೇ. *ವಿದಂನ್ತ್ತ್ಯೇಭೀ ಧರ್ಮಬ್ರಹ್ಮಣೀ ಕ್ರಿಯಾಜ್ಞಾನಮಯಂ ವೇದ:* ಅಂದರೆ ಧರ್ಮ ಹಾಗೂ ಭಗವಂತನ ಬಗ್ಗೆ ತಿಳಿಸಿಕೊಡುವ ಜ್ಞಾನ. ಯಜ್ಞದ ಅಂಗ ಎಂಬುದು ಇನ್ನೊಂದು ಅರ್ಥ.ನಮ್ಮ ಕರ್ಮಗಳೆಲ್ಲವೂ ಯಜ್ಞ ಅಂದರೆ ತ್ಯಾಗದ ರೂಪವಾದಾಗ ವೇದೋಕ್ತ ಕರ್ಮ ಮಾಡಿದಂತೆ  ಆಗುತ್ತದೆ.ಇದು ಅಪೌರುಷೇಯ.ಋಷಿಗಳು ವೇದಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು  ಹೊರತು ಈ ಲೇಖನದಂತೆ ಕೂತು ಬರೆದದ್ದಲ್ಲ.ಬರೆದ ಲಿಪಿ ಹಾಳಾಗಬಹುದೇ ಹೊರತು ಒಳಗಿನ ಜ್ಞಾನ ಅಲ್ಲ.ಹಾಗಾಗಿಯೇ ಸಾವಿರಾರು ವರ್ಷ ಕಳೆದರೂ ವೇದ ನಮ್ಮೊಳಗೆ ಪ್ರವಹಿಸುತ್ತಿದೆ.ಬ್ರಹ್ಮನೊಮ್ಮೆ ಸೃಷ್ಟಿ ಹೇಗೆ ಮತ್ತು ಯಾವಾಗ ಮಾಡಬೇಕೆಂದು ಆಲೋಚಿಸುತ್ತಿದ್ದಾಗ  ಅವನ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಹೊರಹೊಮ್ಮಿದವು ಎನ್ನುತ್ತದೆ ಪುರಾಣ.( ಅಪೌರುಷೇಯವಾದ ವೇದಗಳು ಬ್ರಹ್ಮನಿಂದ ಹೊರಹೊಮ್ಮಿದವು) ಅಂತಹ ಜ್ಞಾನವನ್ನು ಋಷಿಗಳು ತಮ್ಮ ಅನುಭವದ ಮೂಸೆಯಲ್ಲಿ ಕಂಡುಕೊಂಡರು ಜಗದಗಲ ಹಂಚಿದರು.ವಿಜ್ಞಾನಿಗಳು ಅನೇಕ ಪ್ರಯೋಗಗಳಿಂದ ಹೇಗೆ ಹೊಸ ವಿಷಯಗಳನ್ನು ಕಂಡುಹಿಡಿದು ಜಗತ್ತಿಗೆ ಕೊಡುಗೆ ನೀಡುವರೋ ಹಾಗೆ ನಮ್ಮ ಋಷಿಗಳೆಂಬ ವಿಶಿಷ್ಟ ಜ್ಞಾನಿಗಳು ತಮ್ಮ ಸಾಕ್ಷಾತ್ಕಾರದ ಅರಿವನ್ನು ವೇದರೂಪದಲ್ಲಿ ಹಂಚಿದರು.ವಿಜ್ಞಾನ ಹೇಗೆ ಪ್ರಕೃತಿಯ ಒಳಗಿರುವ ನಿಗೂಢ ಸತ್ಯಗಳನ್ನು ಅನ್ವೇಷಿಸುವುದೋ ಹಾಗೆಯೇ ವೇದಗಳು ಇಲ್ಲಿನ ಸೃಷ್ಟಿ ಅದಕ್ಕೆ ಕಾರಣ ಜೀವರಾಶಿಯ ಅಗಾಧತೆ ಇವುಗಳ ಮಹತ್ವ ಇತ್ಯಾದಿ ನಾನಾ ವಿಷಯಗಳ ಬಗ್ಗೆ ವಿವರಿಸುತ್ತಾ ಹೋಗುತ್ತವೆ. ವೇದ ಶಬ್ದಕ್ಕೆ ಆತ್ಮಸ್ವರೂಪ ತಿಳಿಸುವ ಜ್ಞಾನ, ಸತ್ಯದ ದರ್ಶಕ,ಪುರುಷಾರ್ಥಗಳ ಸಾಧಕ,ಎಲ್ಲಾ ವಸ್ತುಗಳ ಸೂಕ್ಷ್ಮ ಜ್ಞಾನ  ತಿಳಿಸಿಕೊಡುವುದು ಇತ್ಯಾದಿ ಅರ್ಥಗಳನ್ನು ಪುರಾಣಗಳು ಹಾಗೂ ಕೋಶಕಾರರು ಕೊಡುತ್ತಾರೆ.ವೇದವನ್ನೋದಿದ ರಾವಣ,ಹಿರಣ್ಯಾಕ್ಷ  ಮುಂತಾದವರು ಸತ್ಯವನ್ನು ಅರಿಯದೇ ಅದನ್ನು ದುರುಪಯೋಗ ಮಾಡಿಕೊಂಡು ಲೋಕದ ನಾಶಕ್ಕೆ ತೊಡಗಿದರು.ಆಗ ವೇದ ಅವರ ರಕ್ಷಣೆಗೆ ನಿಲ್ಲಲಿಲ್ಲ.ಜ್ಞಾನ ಎಂದಿಗೂ ಸದುದ್ದೇಶ ಇಟ್ಟುಕೊಂಡು ಅಧ್ಯಯನ ಮಾಡಲ್ಪಟ್ಟಾಗ ಪ್ರಶಂಸನೀಯವಾಗುವುದು.ಅಣುಬಾಂಬ್,ಎಕೆ ೪೭ ಮುಂತಾದ ವಿನಾಶಕಾರೀ ಅಸ್ತ್ರಗಳನ್ನು ಕಂಡುಹಿಡಿದವರು ಅವರ ಅಗಾಧ ಜ್ಞಾನವನ್ನು ಲೋಕದ ಕೆಡುಕಿಗೆ ಬಳಸಿಲ್ಲವೇ,ಅಷ್ಟಲ್ಲದೇ ಅವರು ಅಂತ್ಯಕಾಲದಲ್ಲಿ ತಮ್ಮ ಕೃತ್ಯಕ್ಕೆ  ಕೊರಗಲಿಲ್ಲವೇ! ಹಾಗೆಯೇ ಹಿರಣ್ಯಕಶಿಪು,ದುರ್ಯೋಧನ ಮುಂತಾದವರು.ಅಕ್ಷರಗಳಿಗೆ ಸಾವಿದೆ ಜ್ಞಾನಕ್ಕಲ್ಲ.ಅದು ಅವಿನಾಶಿ.ಹಾಗಾಗಿಯೇ ವೇದಗಳು ಇಂದಿಗೂ ಹಿಂದೆಯೂ ಮುಂದೆಯೂ ಇರುವವು.
ಒಟ್ಟು ನಾಲ್ಕು ವೇದಗಳು ಪ್ರಸಿದ್ಧ. ವೇದಗಳು ವ್ಯಾಸರಿಂದ ವಿಭಜಿಸಲ್ಪಟ್ಟು ಲೋಕಕ್ಕೆ ಕಾಣಿಸಿಕೊಂಡವು‌.ಈ ಕಾರಣದಿಂದಲೇ ಅವರು ವೇದ-ವ್ಯಾಸರೆಂದು ಪ್ರಸಿದ್ಧರು.ಇದಕ್ಕೆ ಮೊದಲು ವೇದಗಳು ಅನಂತವಾಗಿದ್ದವು.ಭರದ್ವಾಜನೆಂಬ ಋಷಿಯೊಬ್ಬ ವೇದಗಳನ್ನು ಅಧ್ಯಯನ ಮಾಡಲು ತನ್ನ ಆಯುಷ್ಯವನ್ನೆಲ್ಲ ಕಳೆದರೂ ಸಂಪೂರ್ಣ ಅಧ್ಯಯನ ಸಾಧ್ಯವಾಗದೇ ವೇದದ ಸಾರವನ್ನು ಬ್ರಹ್ಮನಿಂದ ಅರಿತು ಮುಕ್ತನಾದನೆಂದು ವೇದವೇ ಹೇಳುತ್ತದೆ.( ಕೃ.ಯಜುರ್ವೇದ ಬ್ರಾಹ್ಮಣ)
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ( ಅಥರ್ವಣ ಅಲ್ಲ ) ಎಂಬುದಾಗಿ ವ್ಯಾಸರು ಅಗಾಧ ಜ್ಞಾನ ರಾಶಿಯನ್ನು ಸಂಕ್ಷಿಪ್ತಗೊಳಿಸಿ ಅಧ್ಯಯನಕ್ಕೆ ಅನುಕೂಲ ಆಗುವಂತೆ ಮಾಡಿ ಲೋಕಕ್ಕೆ ದೊಡ್ಡ ಉಪಕಾರ ನೀಡಿದರು.

 *ಋಚ್ಯತೇ ಸ್ತೂಯತೇ ಯಯಾ ಸಾ ಋಕ್*  ಎಂದರೆ ಯಾವ ವೇದದ ಮಂತ್ರಗಳಲ್ಲಿ ಸ್ತುತಿಯೇ ಪ್ರಮುಖವಾಗಿದೆಯೋ ಅದು ಋಗ್ವೇದ. ೨೧ ಶಾಖೆಗಳು,ಹತ್ತು ಮಂಡಲಗಳು,೧೦೫೮೦ ಮಂತ್ರಗಳಿಂದ ಕೂಡಿರುವ ಈ ವೇದ ಬಹು ಪ್ರಾಚೀನ ಹಾಗೂ ಅತ್ಯಂತ ದೊಡ್ಡದು. *ಸುಷ್ಟು ಉಕ್ತತ್ವಾತ್ ಸೂಕ್ತಂ* ಎಂಬಂತೆ ದೇವತೆಗಳ ನಿಜಸ್ವರೂಪದ ವರ್ಣನೆ,ಪ್ರಕೃತಿಯ ವರ್ಣನೆ , ಕರ್ಮಗಳ ವಿವೇಚನೆ ಈ ವೇದದ ಸಾವಿರಕ್ಕೂ ಮಿಗಿಲಾದ ಸೂಕ್ತಗಳಲ್ಲಿ ನಿರೂಪಿಸಲ್ಪಟ್ಟಿದೆ.ಪಾಠ ಮಾಡುವವರ ಭಿನ್ನತೆಯಿಂದಾಗಿ ಶಾಖೆಗಳು ಅನೇಕ ಹೊರತು ವೇದವಲ್ಲ.ದೇಶ,ಭಾಷೆ ಬದಲಾದಾಗ ನಮ್ಮ ನುಡಿ ಬದಲಾದಂತೆ ವೇದದ ಉಚ್ಚಾರಣೆ ವ್ಯತ್ಯಾಸಗೊಂಡು ಅನೇಕ ಶಾಖೆಗಳಾದವು.

*ಅನಿಯತಾಕ್ಷರಪಾದಾವಸಾನೋ ಯಜು:* ಎಂದರೆ ಇಷ್ಟೇ ಅಕ್ಷರಗಳು ಎಂಬ ನಿಯಮವಿಲ್ಲದೇ ಉದ್ದಕ್ಕೆ ಹೇಳಲ್ಪಡುವ ಮಂತ್ರಗಳಿಂದ ಕೂಡಿರುವುದೇ ಯಜುರ್ವೇದ. ೧೦೦ ಶಾಖೆಗಳು, ೩೦೯೧ ಮಂತ್ರಗಳು ಇದರಲ್ಲಿವೆ.ಇದು ಎರಡು ವಿಧ.ವ್ಯಾಸರ ಶಿಷ್ಯರಾದ ವೈಶಂಪಾಯನರು ಯಾಜ್ಞವಲ್ಕ್ಯರಿಗೆ ಬೋಧಿಸುತ್ತಿದ್ದಾಗ ಅವರ ನಡುವೆ ವೈಚಾರಿಕ ಭೇದ ಕಂಡು ಬಂತು.ಆಗ ಯಾಜ್ಞವಲ್ಕ್ಯರು ಸೂರ್ಯನಿಂದ ಮಗದೊಮ್ಮೆ ಇವೇ ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡರು. ಅದು ಶುಕ್ಲ ಯಜುರ್ವೇದ, ವೈಶಂಪಾಯನರು ಬೋಧಿಸಿದ್ದು ಕೃಷ್ಣ ಯಜುರ್ವೇದ ಎಂದೆನಿಸಿತು.ಯಜ್ಞಗಳ ಬಗ್ಗೆ ಹೆಚ್ಚಿನ ವಿಮರ್ಶೆ ಈ ವೇದದ ವಿಶೇಷ. ಇದರ ಮೊದಲ ಮಂತ್ರವೇ ಯಜ್ಞಕ್ಕಾಗಿ ಕಡಿಯಬೇಕಾದ ಮರದ ಬಳಿ ನಿವೇದಿಸಿಕೊಳ್ಳುವ ಮಂತ್ರ.ಎಲೈ ತರುವೇ ನಿನ್ನ ಒಂದು ಗೆಲ್ಲನ್ನು ಯಜ್ಞದ ಉದ್ದೇಶದಿಂದ ಕಡಿಯುವೆನು,ನನ್ನ ತಪ್ಪನ್ನು ಮನ್ನಿಸು ಅನುಗ್ರಹಿಸು ಎಂದು ಕೇಳಿಕೊಳ್ಳುವ ಅತ್ಯಂತ ಉದಾರ ಹಾಗೂ ರಮಣೀಯ ಅರ್ಥ ಹೊಂದಿದೆ.

 *ಸಾ ಚ ಅಮಶ್ಚೇತಿ ಸಾಮ* ಎಂದರೆ ಸ್ವರಗಳಿಂದ ಕೂಡಿದ ಮಂತ್ರಗಳ
 ಸಾಮವೇದ. ಸೋಮಲತೆ,ಅನೇಕ ವಾದ್ಯಗಳ ವರ್ಣನೆಯೂ ಇದರ ವೈಶಿಷ್ಟ್ಯ. ಸಂಗೀತದ ರಾಗಗಳು ಅವುಗಳ ವೈಶಿಷ್ಟ್ಯ ಇವೆಲ್ಲ ಸಾಮವೇದದಲ್ಲಿಯೇ ಕಂಡುಬರುವುದು. ಋಗ್ವೇದದ ಸುಮಾರು ೧೫೦೦ ದಷ್ಟು ಮಂತ್ರಗಳು ಇದರಲ್ಲಿ ಬಂದಿವೆ.ಸಂಗೀತದ ಹುಟ್ಟಿಗೆ ಈ ವೇದವೇ ಕಾರಣ.ಹಾಗಾಗಿ ಇದರ ಉಪವೇದ ಸಂಗೀತ ಶಾಸ್ತ್ರ ಅಥವಾ ಗಂಧರ್ವವೇದ. *ಸಹಸ್ರವರ್ತ್ಮಾ ಸಾಮವೇದ:* ಸಾವಿರ ಶಾಖೆಗಳು ಇದರಲ್ಲಿ ಇವೆ.ಸಂಗೀತದಲ್ಲಿ ಒಂದೇ ರಾಗವನ್ನು ಹತ್ತು ಜನ ಹತ್ತು ರೀತಿಯಲ್ಲಿ ಹಾಡಿದಾಗ ಅಲ್ಪ ಸ್ವಲ್ಪ ಆಲಾಪ ವ್ಯತ್ಯಾಸ ಕಂಡುಬಂದು ಅವರ ಶೈಲಿಯಾಗಿ ಗುರುತಿಸಲ್ಪಡುವಂತೆ  ಸಾಮವೇದ ಗುರುತಿಸಲ್ಪಟ್ಟಿರಬಹುದು  ಸಾವಿರ ರೀತಿಯಲ್ಲಿ.

*ಥರ್ವತಿ ಗತಿಕರ್ಮಣ: ತತ್ ಪ್ರತಿಷೇಧ:* ಕರ್ಮಗಳ ವಿವರಣೆ,ವಿಧಿ- ನಿಷೇಧ ಇದರ ಮುಖ್ಯ ವಿಷಯ.ಯಾವ ಕರ್ಮ ಮಾಡಬಹುದು, ಯಾವುದು ನಿಷಿದ್ಧ,ಬದುಕಿದ್ದಾಗ ಹಾಗೂ ಸತ್ತ ಮೇಲೆ ಪ್ರಯೋಜನ ಕೊಡುವ ಕರ್ಮಗಳ ಬಗೆ,ಸಾವಿರಕ್ಕೂ ಮೀರಿದ ಗಿಡಮೂಲಿಕೆಗಳ ಮಾಹಿತಿ,ಔಷಧಗಳು, ಕೃಷಿ ಮಾಹಿತಿ,ಮನೆ ಕಟ್ಟುವ ಬಗೆಗಳು ಹಾಗೂ ಉಪಯೋಗಿ ವಸ್ತುಗಳ ಮಾಹಿತಿ, ಆಯುಷ್ಯ ಹೆಚ್ಚಿಸಿಕೊಳ್ಳುವ ಹಾಗೂ ದೇಹ ಹುರಿಗೊಳಿಸುವ ಬಗೆಗಳು ಹೀಗೆ ಆಧುನಿಕ ಕಾಲದಲ್ಲಿ ಬೆಳವಣಿಗೆ ಹೊಂದಿರುವ ಅನೇಕ ವಿಷಯಗಳ ನಿರೂಪಣೆ ಸುಂದರವಾಗಿದೆ.( ಇಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್, ಡೆಂಟಲ್,ಫ್ಯಾಷನ್ ಇತ್ಯಾದಿ ಎಲ್ಲವೂ ಇಲ್ಲೇ ಇದೆ.)ಎಲ್ಲರ ಭಾವನೆಯಂತೆ ಆಭಿಚಾರಿಕ ಅಥವಾ ಮಾಟಮಂತ್ರಗಳು ಮಾತ್ರ ಇರುವುದಲ್ಲ  ಈ ವೇದದಲ್ಲಿ.ಲೌಕಿಕ ಜೀವನದ ಪ್ರಯೋಜನಕ್ಕೆ ಬರುವ ಸಾವಿರಾರು ಮಾಹಿತಿಯ ಕಣಜ ಅಥರ್ವವೇದ.ಮಾಟಮಂತ್ರಗಳ ಬಗ್ಗೆ ಕೇವಲ ಕೆಲವೇ ಕೆಲವು ಮಂತ್ರಗಳನ್ನು ಹೊಂದಿದೆ ಈ ವೇದ.
ಇನ್ನು ವೇದಗಳನ್ನು ಅಧ್ಯಯನ ಮಾಡಲು ಕೆಲವು ನಿಯಮಗಳು ಅವಶ್ಯಕ.ಹೇಗೆ ವೈದ್ಯಶಾಸ್ತ್ರ ಅಧ್ಯಯನ ಮಾಡುವವನು ಮಾನವೀಯತೆ ಹೊಂದಿರಬೇಕು,ಶುಚಿಯಾಗಿರಬೇಕು,ಇಂದ್ರಿಯ ನಿಗ್ರಹ ಉಳ್ಳವನಾಗಿರಬೇಕು,ಭಾವನೆ ಇರಬಾರದು,ಅವನದ್ದೇ ಅದ ವಸ್ತ್ರ ಸಂಹಿತೆ ಪಾಲಿಸಬೇಕು ಇತ್ಯಾದಿ ಇವೆಯೋ ಹಾಗೆ ವೇದ ಅಧ್ಯಯನ ಮಾಡುವುದಕ್ಕೂ ನಿಯಮಗಳು ಅನಿವಾರ್ಯ. ಸ್ನಾನ ಮಾಡಿರುವುದು,ಶುಚಿತ್ವ,ಮದ್ಯಪಾನ ಮಾಡದವನು,ಮಾಂಸ ಭಕ್ಷಿಸದವನು( ನಾಲಗೆ ಮಂತ್ರಗಳ ಉಚ್ಚಾರಣೆಗೆ ಸಹಕರಿಸಲು ಹಾಗೂ ಮಂತ್ರ ಸಿದ್ಧಿಸಲು,ಕಾಮ ಕ್ರೋಧಾದಿಗಳ ನಿಯಂತ್ರಣ ಸಾಧಿಸಲು ) ಜಿತೇಂದ್ರಿಯನೂ ಆಗಿರಬೇಕು.ಇಂತಹ ನಿಯಮ ಪಾಲಿಸಿ ಮಂತ್ರಗಳನ್ನು ಹೇಳಿದಾಗ ಅವುಗಳ ಪ್ರಭಾವದಿಂದಾಗಿ ವಾತಾವರಣದಲ್ಲಿ ಹೊಸ ಕಂಪನಗಳು ಬಿಡುಗಡೆಯಾಗುತ್ತವೆ.( ಸೋಮಯಾಗ ನಡೆಯುವ ಪ್ರದೇಶದಲ್ಲಿ ನಿರಂತರ ಮಳೆ ಇದೇ ಕಾರಣಕ್ಕೆ ಬರುವುದು.)
*ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಸೇವನಾತ್ ಅನಿಗ್ರಹಾಚ್ಚ ಇಂದ್ರಿಯಾಣಾಂ ನರ: ಪತನಮೃಚ್ಛತಿ* ಎಂಬಂತೆ ಮಾಡಬೇಕಾಗಿರುವುದನ್ನು ಮಾಡದೇ, ಮಾಡಬಾರದ್ದನ್ನು ಮಾಡಿದರೆ, ಇಂದ್ರಿಯಗಳ ಹತೋಟಿ ಸಾಧಿಸದೇ ಹೋದರೆ ಮನುಷ್ಯ ತನ್ನ ಪತನಕ್ಕೆ ತಾನೇ ಕಾರಣವಾಗುತ್ತಾನೆ.ಯಾವುದನ್ನು ಮಾಡಬೇಕು ,ಯಾವುದು ನಿಂದಿತ ಎಂಬ ವಿಷಯ ತಿಳಿಸಿಕೊಡುವುದೇ ವೇದ.ಹಾಗಾಗಿಯೇ ಪ್ರಭುಸಂಹಿತೆ ಎನ್ನುತ್ತಾರೆ.ರಾಜನಂತೆ ಆದೇಶಿಸುತ್ತದೆ ವೇದ - ಸತ್ಯಂ ವದ ಧರ್ಮಂ ಚರ ಇತ್ಯಾದಿ.ಭಾರತ ಎಂದೊಡನೆ ಜನರ ಮನಸ್ಸಿನಲ್ಲಿ ಮೂಡುವುದು ವೇದೋಪನಿಷತ್ತಿನ ಸುಂದರ ಸಂದೇಶಗಳ ತವರೂರು ಎಂಬುದಾಗಿ. ವೇದವು ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ನಿರ್ದಿಷ್ಟ ಪಥದತ್ತ ಒಯ್ಯುತ್ತಿರುವ ಧರ್ಮವೆಂಬ ನೌಕೆಯ ಚುಕ್ಕಾಣಿ.   ಮಂತ್ರಗಳನ್ನು ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಒಳ್ಳೆಯ ಕಾಲದಲ್ಲಿ, ಶುದ್ದವಾದ ಪ್ರದೇಶದಲ್ಲಿ, ಗುರುಗಳಿಂದ ಸರಿಯಾದ ಕ್ರಮದಲ್ಲಿ ಪಾಠ ಕೇಳಿ ಉಚ್ಚರಿಸಿದಾಗ ಅವುಗಳು ಫಲ ಕೊಡುವುದು ನೂರಕ್ಕೆ ನೂರು ಸತ್ಯ.ಇದನ್ನು ಅರಿಯದೇ ಬ್ರಾಹ್ಮಣರಾಗಿರಲಿ ಯಾರೇ ಆಗಲಿ ಮಂತ್ರಗಳನ್ನು ಹೇಳಿದರೆ ಕೇವಲ ಒದರುವುದು ಆಗುವುದೇ ಹೊರತು ಪರಿಣಾಮವಲ್ಲ. *ವ್ಯಾಸರು ಋಗ್ವೇದವನ್ನು ಪೈಲನಿಗೆ,ಯಜುರ್ವೇದವನ್ನು ವೈಶಂಪಾಯನರಿಗೆ,ಸಾಮವೇದವನ್ನು ಜೈಮಿನಿ ಋಷಿಗಳಿಗೆ,ಅಥರ್ವವೇದವನ್ನು ಸುಮಂತು ಋಷಿಗಳಿಗೆ ಮೊದಲು ಬೋಧಿಸಿದರು.ಅವರಿಂದ ಪರಂಪರೆ ಬೆಳೆದುಬಂತು.ಅದಕ್ಕೆ ಮೊದಲು ಇಡಿಯ ವೇದರಾಶಿಯನ್ನು ವಸಿಷ್ಠ, ವಿಶ್ವಾಮಿತ್ರರು ಅಧ್ಯಯನ ಮಾಡುತ್ತಿದ್ದರು.ಹೀಗೆ ವಿಭಾಗಿಸಿದ ವೇದ ಪಾಠ ವ್ಯಾಸರಿಂದ ಮೊದಲಿಗೆ ಪ್ರಾರಂಭವಾಯಿತು.*
ಬ್ರಹ್ಮನ ಪೂರ್ವದ ಮುಖದಿಂದ ಋಗ್ವೇದವೂ,ದಕ್ಷಿಣದ ಮುಖದಿಂದ ಯಜುರ್ವೇದವೂ,ಪಶ್ಚಿಮದ ಮುಖದಿಂದ ಸಾಮವೇದವೂ,ಉತ್ತರದ ಮುಖದಿಂದ ಅಥರ್ವವೇದವೂ ಉಚ್ಚರಿತವಾಯಿತು.ಇನ್ನು ಋಗ್ವೇದವು ರಜೋಗುಣವನ್ನೂ,ಯಜುರ್ವೇದ ಹಾಗೂ ಅಥರ್ವವೇದಗಳು ಸತ್ವವನ್ನೂ,ಸಾಮವೇದವು ತಮೋಗುಣವನ್ನೂ ಪ್ರತಿನಿಧಿಸುತ್ತದೆ.ಹೀಗೆ ವೇದಗಳು ತ್ರಿಗುಣಾತ್ಮಕಗಳೂ ಹೌದು.ಇಂತಹ ವೇದಗಳ ಬಗ್ಗೆ ಮತ್ತಷ್ಟು ತಿಳಿಯುವ ಪ್ರಯತ್ನ ಮಾಡಿ ಜಗದ ಜ್ಞಾನ ಪಡೆದು ಬದುಕನ್ನು ಸಾರ್ಥಕಗೊಳಿಸೋಣ.

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩