💐ಪ್ರತಿಮಾನಾಟಕದ ಒಂದು ಕುಸುಮ💐

*छत्रं सव्यजनं सनन्दिपटहं भद्रासनं कल्पितं न्यस्ता हेममया: सदर्भकुसुमास्तीर्थाम्बुपूर्णा घटा:। युक्त: पुष्यरथश्च मन्त्रिसहिता: पौरा: समभ्यागता: सर्वस्यास्य हि मङ्गलं स भगवान् वेद्यां वसिष्ठ: स्थित: ।।*

_ರಾಮಾಭಿಷೇಕದ ಸಿದ್ಧತೆಗಳನ್ನು ವರ್ಣಿಸುವ ಶ್ಲೋಕ. ರಾಜರಿಗೆ ಹಿಡಿಯುವ ಬೃಹದಾಕಾರದ ಛತ್ರಿ ಅಲಂಕೃತಗೊಂಡು ಸಿದ್ಧವಾಗಿದೆ.ಅಭಿಷೇಕವಾದ ಮೇಲೆ ಹಿಡಿಯುವುದು ವಾಡಿಕೆ.ಸುತ್ತಲೂ ಹವಳ ಮುತ್ತುಗಳನ್ನು ಪೋಣಿಸಿ ಶ್ರೀಮಂತ ಛತ್ರ ತಯಾರಾಗಿದೆ.ಜೊತೆಗೆ ರಾಜನು ಬೆವರದಿರುವಂತೆ ಬೀಸಣಿಗೆಯು ಸಿದ್ಧವಾಗಿದೆ.ಬೀಸುವವರು ಅಲಂಕಾರ ಮಾಡಿಕೊಂಡು ನಿಂತಿರುವರು.ಸುತ್ತಲೂ ತಂಪಿದ್ದರೂ ಜನಜಂಗುಳಿ ಹಾಗೂ ರಾಜನ ಕಾರ್ಯದ ಒತ್ತಡದಿಂದಾಗಿ ಉಂಟಾಗುವ ಸೆಕೆಯ ನಿವಾರಣೆಗೆ ಈ ಬೀಸುವ ಕಾಯಕ.ಸಿಂಹಾಸನವು ಬಣ್ಣಗಳನ್ನು ಲೇಪಿಸಿಕೊಂಡು, ಹಳೆಯ ಕುಸುರಿಗಳನ್ನು ಇನ್ನಷ್ಟು ನವೀಕರಿಸಿಕೊಂಡು ರಾಜನನ್ನೇ ನಿರೀಕ್ಷಿಸುತ್ತಿದೆ.ಪಕ್ಕದಲ್ಲೇ ರಾಜನ ಆಗಮನದ ಕಾಲದಲ್ಲಿ ನುಡಿಸಲು ಸಿದ್ದವಾದ ಒಂದು ವಿಧದ ಮಂಗಲವಾದ್ಯದೊಡನೆ ಸೇವಕ ಸಿದ್ಧನಾಗಿರುವನು.ಪಟಹ ಒಂದು ಬಗೆಯ ವಾದ್ಯ.ಪಾವಿತ್ಯ್ರದ ಕುರುಹಾದ ದರ್ಭೆಗಳು ಹಾಗೂ ಸುವಾಸಿತ ಪುಷ್ಪಗಳೊಡಗೂಡಿದ ಚಿನ್ನದ ಕಲಶಗಳು ನಾನಾ ನದಿಗಳ ಹಾಗೂ ಸಪ್ತ ಸಮುದ್ರಗಳ ತೀರ್ಥದಿಂದ ತುಂಬಿ ಯಾವಾಗ ರಾಮನ ಶಿರವನ್ನು ಸ್ಪರ್ಶಿಸುವೆವೊ ಎಂದು ಕಾತರಗೊಂಡು ಕಾಯುತ್ತಿವೆ. ಪಟ್ಟಾಭಿಷೇಕದ ನಂತರ ವಿಹರಿಸಲು  ಪುಷ್ಯವೆಂಬ ರಥಕ್ಕೆ ಕುದುರೆಗಳು ಜೋಡಿಸಲ್ಪಟ್ಟು ಸಿದ್ಧವಾಗಿದೆ.( ಒಂದು ಸಂಪ್ರದಾಯ ಅಭಿಷೇಕದ ನಂತರ ವಿಹಾರ ) ಅಷ್ಟ ಮಂತ್ರಿಗಳೂ ಹಾಗೂ ಅಯೋಧ್ಯೆಯ ಪುರಜನರೆಲ್ಲರೂ ಸಂಭ್ರಮದಿಂದ ಇಂಬುಗೊಂಡಿದ್ದಾರೆ ಈ ಸಮಾರಂಭವನ್ನು.( ಭಿನ್ನಮತೀಯರು ಪ್ರಗತಿಪರರೂ/ಪ್ರಗತಿ- ಪರರೂ  ಅವಕಾಶವಾದಿಗಳು ದಶರಥನ ಕಾಲದಲ್ಲಿ ಇರಲಿಲ್ಲ ಹಾಗಾಗಿ ಎಲ್ಲರೂ ಬಂದಿದ್ದರು ) ಇಲ್ಲಿ ಯಾವ ಜಾತಿ ಮತ ಇತ್ಯಾದಿ ವಿಶೇಷಣಗಳಿಲ್ಲ.ಹಾಗಾಗಿ ಸರ್ವ ಮಾನವರೂ ಬಂದಿದ್ದರೆನ್ನುವ ಭಾವ.ಈ ಎಲ್ಲ ವಸ್ತುಗಳ  ಮಂಗಲಮಯ ಭಾವಕ್ಕೆ ಕಾರಣವಾದ ಅಥವಾ ರಾಮನ ಅಭಿಷೇಕವನ್ನು ಸಭೆಯಲ್ಲಿ ನಿರ್ಣಯಿಸಿದ ಎಲ್ಲರಿಗೂ ಒಳಿತನ್ನೇ ಬಯಸುವ ಮಂಗಲಮೂರ್ತಿ ವಸಿಷ್ಠರು ವೇದಿಕೆಯ ಪಕ್ಕದಲ್ಲೇ ವೇದಮಂತ್ರಗಳನ್ನು ನುಡಿಯುತ್ತಾ ನಿಂತಿರುವರು.ಹೀಗೆ ಊರಿಗೆ ಊರೇ ಈ ಕಾರ್ಯದಲ್ಲಿ ಸಂಭ್ರಮದಿಂದ ಪಾಲುಗೊಂಡಿದೆ.ಕವಿ ಚಿತ್ರವನ್ನು ಮನದಲ್ಲಿ ತಂದುಕೊಂಡು ಬಿಡದೆ ವರ್ಣಿಸಿದ ಪರಿ ಸುಂದರ._

📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩