📃ಮಹಾಭಾರತದ ಕೆಲವು ಉತ್ತಮ ಶ್ಲೋಕಗಳು💦
*ಅವಧ್ಯಾ: ಸ್ತ್ರಿಯ ಇತ್ಯಾಹು: ಧರ್ಮಜ್ಞಾ ಧರ್ಮನಿಶ್ಚಯೇ |ಧರ್ಮಜ್ಞಾನ್ರಾಕ್ಷಸಾನಾಹುರ್ನಹನ್ಯಾತ್ಸಚ ಮಾಮಪಿ ||*
ಏಕಚಕ್ರನಗರದ ಬ್ರಾಹ್ಮಣನ ಪತ್ನಿಯಾಡುವ ಮಾತು- ಸ್ತ್ರೀಯರನ್ನು ಕೊಲ್ಲಬಾರದೆಂದು ಧರ್ಮಜ್ಞರು ಹೇಳಿದ್ದಾರೆ.ಧರ್ಮವನ್ನು ನಿಶ್ಚಯಿಸುವಾಗ ರಾಕ್ಷಸರೂ ಧರ್ಮಜ್ಞರಾಗಿರುವರೆಂದು ಹೇಳುವರು.ಆದುದರಿಂದ ಅವನು ನನ್ನನ್ನು ಕೊಲ್ಲದೆ ಬಿಡಬಹುದು. ರಾಮನು ತಾಟಕಿಯನ್ನು ಕೊಲ್ಲುವ ಮೊದಲು ಏಕೆ ವಿಶ್ವಾಮಿತ್ರರನ್ನು ಪ್ರಶ್ನಿಸಿದನೆಂಬುದಕ್ಕೆ ಇಲ್ಲಿ ಉತ್ತರವಿದೆ.ಸ್ತ್ರೀಯರು ಸಾಮಾನ್ಯವಾಗಿ ವಧಾರ್ಹರಲ್ಲ.

*ನಿ:ಸಂಶಯೋ ವಧ: ಪುಂಸಾಂ ಸ್ತ್ರೀಣಾಂ ಸಂಶಯಿತೋ ವಧ: | ಅತೋ ಮಾಮೇವ ಧರ್ಮಜ್ಞ ಪ್ರಸ್ಥಾಪಯಿತುಮರ್ಹಸಿ ||*

ಪುರುಷರನ್ನು ಕೊಲ್ಲುವ ವಿಷಯದಲ್ಲಿ ಹೆಚ್ಚು ಸಂಶಯವಿಲ್ಲ. ಆದರೆ ಸ್ತ್ರೀಯರನ್ನು ಕೊಲ್ಲುವುದು ಸಂಶಯಾಸ್ಪದ.ಹಾಗಾಗಿ ನನ್ನನ್ನೇ ಅವನ ಬಳಿಗೆ ಕಳುಹಿಸು ಎಂದು  ಆ ಸ್ತ್ರೀ ಹೇಳುತ್ತಾಳೆ.ಇಲ್ಲಿಯೂ ವ್ಯಾಸರ ಮಾತು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ.

*ನ ಚಾಪ್ಯಧರ್ಮ: ಕಲ್ಯಾಣ ಬಹುಪತ್ನೀಕತಾ ನೃಣಾಮ್ | ಸ್ತ್ರೀಣಾಮಧರ್ಮ: ಸುಮಹಾನ್ಭರ್ತು: ಪೂರ್ವಸ್ಯ ಲಂಘನೇ ||*

ಈ ಶ್ಲೋಕ ಈಗಿನ ಸಮಕಾಲೀನ ವಿವಾದದ ಕೇಂದ್ರಬಿಂದು.ಅನೇಕ ಮಂದಿ ಪತ್ನಿಯರನ್ನು  ಹೊಂದಿರುವುದು ಪುರುಷರಿಗೆ ಅಧರ್ಮವಲ್ಲ. ಆದರೆ ಮೊದಲಿನ ಪತಿಯನ್ನು ಅತಿಕ್ರಮಿಸುವುದು ಸ್ತ್ರೀಯರಿಗೆ ಅಧರ್ಮ.ಇದು ಪತಿ ಸಜ್ಜನನಾಗಿರುವಾಗ , ನಪುಂಸಕನಾಗದಿದ್ದಾಗ ಮಾತ್ರ ಅನ್ವಯಿಸುವುದೇ ಹೊರತು ಎಲ್ಲಾ ಕಾಲಕ್ಕಲ್ಲ.ಅಷ್ಟಾಗಿ ರಾಮಭಕ್ತರಾದ ನಾವು ಏಕಪತ್ನೀ ಅಥವಾ ಏಕಪತಿ ವ್ರತಸ್ಥರಾಗುವುದು ರಾಮನ ನಡೆಯನ್ನು ಅನುಸರಿಸಿದಂತಾಗುವುದು.ಈ ಮಾತು ಸ್ವಲ್ಪ ಭಾವನಿಗೆ ಬಿದ್ದು ಹೇಳಿದ್ದೇ ಹೊರತು ಆ ತಾಯಿ ಸಹಜವಾಗಿ ಹೇಳಿದ್ದಲ್ಲ.ಪತಿಯ ಮೇಲಿನ ಅತಿ ವಾತ್ಸಲ್ಯ ಅವಳಿಂದ ಹೀಗೆ ಮಾತನಾಡಿಸುತ್ತದೆ.

*ಇತ್ಯರ್ಥಮಿಷ್ಯತೇ ಅಪತ್ಯಂ ತಾರಯಿಷ್ಯತಿ ಮಾಮಿತಿ | ತಸ್ಮಿನ್ನುಪಸ್ಥಿತೇ ಕಾಲೇ ತರತಂ ಪ್ಲವಯಾನ್ಮಯಾ |*

ಅವನ ಮಗಳಾಡುವ ಮಾತು.ನಿಮ್ಮ ಬದಲಿಗೆ ನಾನೇ ಹೋಗುವೆ. ಹೇಗಾದರೂ ಮುಂದೆ ಪರಿತ್ಯಕ್ತಳಾಗುವಳು ನಾನು.ಸಂತಾನ ನಮ್ಮನ್ನು ಪಾರುಮಾಡುವುದೆಂದು ಜನರು ಅಪೇಕ್ಷಿಸುತ್ತಾರೆ.ಅಂತಹ ಸಮಯ ಪ್ರಾಪ್ತವಾಗಿರುವಾಗ ನನ್ನ ಮೂಲಕ ಈ ಆಪತ್ತನ್ನು ದಾಟಿ.ಎಂತಹ ಮಾರ್ಮಿಕ ಮಾತು.ಸಂತಾನ ಇಹದಲ್ಲಾಗಲಿ ಪರದಲ್ಲಾಗಲಿ ಶ್ರೇಯೋಕಾರಕ ಆಗದಿದ್ದರೆ ಪಡೆದೇನು ಫಲ.ಇಲ್ಲಿ ಪುತ್ರ ಪುತ್ರಿ ಉಲ್ಲೇಖ ಇಲ್ಲ.

*ಇಹ ವಾ ತಾರಯೇದ್ದುರ್ಗಾದುತ ವಾ ಪ್ರೇತ್ಯ ತಾರಯೇತ್ | ಸರ್ವಥಾ ತಾರಯೇತ್ ಪುತ್ರ: ಪುತ್ರ ಇತ್ಯುಚ್ಯತೇ ಬುಧೈ: |*

ಮಗನ ಜವಾಬ್ದಾರಿ ಈ ಮಾತಲ್ಲಿ ಸ್ಪಷ್ಟವಾಗಿ ಇದೆ.ಈ ಲೋಕದಲ್ಲಿ ತಾಯಿತಂದೆಯರನ್ನು ಕಷ್ಟದಿಂದ ಪುತ್ರನು ಪಾರುಮಾಡುವನು.ಅವರು ಪರಲೋಕಕ್ಕೆ ಹೋದಮೇಲೂ ಪಿಂಡ ತರ್ಪಣ ಯಜ್ಞ ಗಳ ಮೂಲಕ ಮಗನೇ ಉದ್ಧರಿಸುವನು. ಹೀಗೆ ಎಲ್ಲ ರೀತಿಯಿಂದಲೂ ಉದ್ಧರಿಸುವನಾದ್ದರಿಂದ ಅವನನ್ನು ಪುತ್ರ ಎನ್ನುವರು.ಇದಕ್ಕೆ ವಿರುದ್ಧವಾಗಿದ್ದರೆ ದಾಸರ ಮಾತಿನಂತೆ ಹೆತ್ತ ತಾಯಿ ತಂದೆಯರ ಚಿತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಯಾವ ಫಲವೂ ಇಲ್ಲ.

*ಆಕಾಂಕ್ಷಂತೇ ಚ ದೌಹಿತ್ರಾನಪಿ ನಿತ್ಯಂ ಪಿತಾಮಹಾ:| ತಾನ್ಸ್ವಯಂ ವೈ ಪರಿತ್ರಾಸ್ಯೇ ರಕ್ಷಂತೀ ಜೀವಿತಂ ಪಿತು: ||*

ತಾತಂದಿರು ಎಂದಿಗೂ ಮಗಳ ಮಕ್ಕಳನ್ನು ಅಪೇಕ್ಷಿಸುತ್ತಾರೆ.( ಮಗಳೂ ಮಗನೂ ಇಬ್ಬರೂ ಅಪೇಕ್ಷಿತರೇ .ಮಗಳೆಂದು ಗರ್ಭದಲ್ಲೇ ಕೊಲ್ಲುವುದಲ್ಲ.ಅಥವಾ ಹೆಣ್ಣು ಹುಟ್ಟಿತೆಂದು ತಾತ್ಸಾರ ಸಲ್ಲ ) ನಾನು ನನ್ನ ತಂದೆಯ ಪ್ರಾಣವನ್ನೂ ರಕ್ಷಿಸಿ ನನ್ನ ತಾತಂದಿರನ್ನೂ ಉದ್ದರಿಸುವೆ.ನಾನು ಸತ್ತರೂ ನನ್ನ ತಂದೆ ಕೊಡುವ ತರ್ಪಣಾದಿಗಳಿಂದ ಅವರು ಸುಖಿಸುವರು ಎಂಬ ಭಾವ.ಆ ಮಗಳ ಮಾತನ್ನು ಓದುತ್ತಿದ್ದರೆ ಎಂತಹ ಅಪ್ಪಂದಿರ ಹೃದಯವೂ ಕರಗೀತು.ವ್ಯಾಸರ ಮಾತೃಹೃದಯ ಗೋಚರಿಸುತ್ತದೆ ಇಲ್ಲಿ.

ಸಂಗ್ರಹ 📜ಶ್ರೀನಿಧಿ ಅಭ್ಯಂಕರ್. ಮಹಾಭಾರತ ಆದಿಪರ್ವ ೧೪೭ ಅಧ್ಯಾಯ.

*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩