ರಾಮಾಯಣ ೧೬೫
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೫🏝📖
*ತಾವನ್ಯೋನ್ಯಾಂಜಲಿಂ ಕೃತ್ವಾ ಸ್ನೇಹಾತ್ಸಂಶ್ಲಿಷ್ಯ ಚೋರಸಾ | ನನಂದತುರ್ದಶರಥೋ ರೋಮಪಾದಶ್ಚ ವೀರ್ಯವಾನ್ ||*
_ಸಂತಾನಾರ್ಥಿಯಾಗಿ ಯಜ್ಞ, ತನ್ಮೂಲಕ ಸ್ವರ್ಗಕಾಮಿಯಾದ ದಶರಥನು ಮಂತ್ರಿಗಳ ಸಲಹೆಯಂತೆ ಅಂಗರಾಜ್ಯಕ್ಕೆ ಬಂದನು. ರೋಮಪಾದನ ಅಪ್ಪನು ಇವನಿಗೆ ಮಿತ್ರನಾಗಿದ್ದನು. ಬಹುಶಃ ದಶರಥನ ಬದುಕು ಬಹು ದೀರ್ಘಕಾಲ ಇದ್ದುದು ಇದಕ್ಕೆ ಕಾರಣ. ಮೂರು-ನಾಲ್ಕು ತಲೆಮಾರಿನ ರಾಜರುಗಳು ಅವನೊಡನೆ ಒಡನಾಟ ಹೊಂದಿದ್ದರು. ಅಪ್ಪನ ಕಾಲದ ನಂತರ ಮಗನೂ ದಶರಥನ ಜೊತೆ ಉತ್ತಮ ಸಂಬಂಧ ಹೊಂದಿದ್ದನು. ದಶರಥನ ಕೋರಿಕೆಯಂತೆ ರೋಮಪಾದನು ತನ್ನ ಅಳಿಯ ಋಷ್ಯಶೃಂಗನನ್ನು ಕಳುಹಿಸಿಕೊಡುವನು. ಅನಂತರ ದಶರಥನು ಹೊರಟುನಿಂತಾಗ ಅವರೀರ್ವರು ಪರಸ್ಪರ ಇನ್ನು ಯಾವಾಗ ಈ ಭೇಟಿಯೋ ಎಂಬಂತೆ ಗಾಢವಾಗಿ ಆಲಿಂಗಿಸಿಕೊಂಡರು. ಗಾಢವಾದ ಆಲಿಂಗನವು ಯಾವಾಗಲೂ ತುಂಬಾ ಪ್ರೀತಿಯ ಸಂಕೇತ. ಅದು ಗೆಳೆತನವಿರಲಿ, ವಾತ್ಸಲ್ಯವಿರಲಿ, ಪ್ರೇಮವಿರಲಿ, ಉದ್ವೇಗವಿರಲಿ ಆಲಿಂಗನವು ಆ ಕ್ಷಣದಲ್ಲಿ ಮನಸ್ಸಿಗೆ ಒಂದು ತೃಪ್ತಿಯನ್ನು ತಂದುಕೊಡುತ್ತದೆ. ಪರಸ್ಪರ ಕೈ ಮುಗಿದರು. ವಸ್ತುತಃ ಇಲ್ಲಿ ದಶರಥನು ಬಹಳ ಹಿರಿಯ. ಆದರೂ ಸ್ನೇಹ ಸಂಬಂಧವು ವಯಸ್ಸಿನ ಅಂತರವನ್ನು ಅಭಿಮಾನವನ್ನು ತೊರೆದು ಪ್ರೀತಿ ಅನುರಣಿಸುವಂತೆ ಮಾಡುತ್ತದೆ. ಅವರು ಎಲ್ಲೋ ದೂರದಲ್ಲಿದ್ದರೂ ಅವರ ನಡುವಿದ್ದ ಆತ್ಮೀಯತೆಯು ಹತ್ತಿರದ ಸಂಬಂಧಿಗಳಂತಿತ್ತು. ಇದಕ್ಕೊಂದು ಕಾರಣ ಪುರಾಣಾಂತರಗಳಲ್ಲಿ ಉಲ್ಲೇಖಿತವಾದ ಶಾಂತೆಯನ್ನು ದತ್ತು ಕೊಟ್ಟ ವಿಷಯವೂ ಇರಬಹುದು. ಋಷ್ಯಶೃಂಗನಿಗೆ ರೋಮಪಾದನು ಹೇಗೆ ಮಾವನೋ ಅಂತೆಯೇ ದಶರಥನೂ ಮಾವನೇ ಆಗಿದ್ದನು.ಅದೂ ಅವರ ಆತ್ಮೀಯತೆಗೆ ಪ್ರಮುಖ ಕಾರಣವಿರಬಹುದು. ರಾಜ್ಯ ಸಣ್ಣದಿರಲಿ-ದೊಡ್ಡದಿರಲಿ, ಅಧಿಕಾರದ ಎಲ್ಲೆ ಎಷ್ಟೇ ಇರಲಿ ಆತ್ಮೀಯತೆಗೆ ಅದಾವುದೂ ಕಾಣದು. ಪ್ರೀತಿಯೊಂದೇ ಅಲ್ಲಿ ಪ್ರಧಾನ. ನಮ್ಮ ನಾಯಕರು ಯಾವುದೋ ಸಣ್ಣ ದೇಶದ ರಾಜರನ್ನು ಅಪ್ಪಿದಾಗ ನಾವು ಗ್ರಹಿಸಬೇಕಾಗಿರುವುದು ಇದೇ ಹೊರತು ಲಾಭ-ನಷ್ಟವನ್ನಲ್ಲ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ