ರಾಮಾಯಣ ೧೬೩
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೩🏝📖
*ಗತಾಸು ತಾಸು ಸರ್ವಾಸು ಕಾಶ್ಯಪಸ್ಯಾತ್ಮಜೋ ದ್ವಿಜಃ | ಅಸ್ವಸ್ಥಹೃದಯಶ್ಚಾಸೀದ್ದುಃಖಾತ್ಸಂಪರಿವರ್ತತೇ ||*
_ಋಷ್ಯಶೃಂಗನ ಆಶ್ರಮಕ್ಕೆ ಅವನನ್ನು ಕರೆದೊಯ್ಯಲು ನಗರದ ಗಣಿಕೆಯರು ಸಾಲಂಕೃತರಾಗಿ ಬಂದು ವಿಧವಿಧದ ಭಕ್ಷ್ಯ ಭೋಜ್ಯ ತಿನ್ನಿಸಿ ಮಧುರ ಮಾತುಗಳಿಂದ ಮನಸೆಳೆದು ವಿಭಾಂಡಕನ ಆಗಮನದ ಹೆದರಿಕೆಯಿಂದ ವ್ರತದ ನೆಪವೊಡ್ಡಿ ದೂರ ಹೋಗಿದ್ದಾರೆ. ಇತ್ತ ಋಷ್ಯಶೃಂಗನ ಮನವು ಅವರ ಸಾಮೀಪ್ಯವನ್ನು ಬಯಸುತ್ತಿದೆ. ಅವನ ಹೃದಯದ ಸ್ವಾಸ್ಥ್ಯ ಕದಡಿತು. ಇಷ್ಟು ದಿನ ಸ್ಥಿರವಾಗಿದ್ದ ಮನಸ್ಸು ಇಂದು ಅಲ್ಲೋಲಕಲ್ಲೋಲವಾಗಿದೆ. ಮನವು ವಾರಾಂಗನೆಯರ ರೂಪ-ಲಾವಣ್ಯ ಸ್ಮರಿಸಿ ಪರಿಭ್ರಮಿಸುತ್ತಿದೆ. ಅಲ್ಲಿರಲು ಸಾಧ್ಯವಾಗದೇ ಅವರನ್ನು ಹುಡುಕಿಕೊಂಡು ಹೊರಟನು ಜಿತೇಂದ್ರಿಯನು. ವಿಷಯಗಳ ಆಸಕ್ತಿಯು ನಮ್ಮನ್ನು ಮರುಳು ಮಾಡುವುದು ಹೀಗೆಯೇ. ಒಮ್ಮೆ ರುಚಿ ತೋರಿಸಿ ಅನಂತರ ಹತ್ತಿರದಲ್ಲಿ ಇಲ್ಲದಿದ್ದರೂ ಬೇಕೆಂಬ ಬಯಕೆ ಮೂಡಿ ಪಡೆಯಲು ಪ್ರಯತ್ನದಲ್ಲಿ ತೊಡಗುತ್ತದೆ. ಮನದ ಬಯಕೆಗೆ ಇಂದ್ರಿಯ ದೇಹ ಸಹಕರಿಸುತ್ತದೆ. ಅಷ್ಟು ದೀರ್ಘಕಾಲ ತಪಸ್ಸು ಮಾಡಿ ಕಲ್ಲಾಗಿದ್ದ ಋಷ್ಯಶೃಂಗನೇ ಕರಗಿದ ಮೇಲೆ ಸಾಮಾನ್ಯರ ಪಾಡೇನು!_
*ತತ್ರ ಚಾನೀಯಮಾನೇ ತು ವಿಪ್ರೇ ತಸ್ಮಿನ್ಮಹಾತ್ಮನಿ | ವವರ್ಷ ಸಹಸಾ ದೇವೋ ಜಗತ್ಪ್ರಹ್ಲಾದಯಂಸ್ತದಾ ||*
_ಅವರನ್ನು ಭೇಟಿಯಾದಾಗ ನಮ್ಮ ಆಶ್ರಮಕ್ಕೆ ತಾವು ಒಮ್ಮೆ ಬರಬೇಕು, ನಮ್ಮ ಸತ್ಕಾರವನ್ನು ಸ್ವೀಕರಿಸಬೇಕು ಎಂದೆಲ್ಲಾ ಅವನನ್ನು ಒಲಿಸಿ ರಾಜ್ಯಕ್ಕೆ ಕರೆದೊಯ್ಯುತ್ತಾರೆ ಈ ಗಣಿಕೆಯರು. ವೃತ್ತಿ ಯಾವುದಿದ್ದರೂ ಲೋಕಹಿತಕ್ಕಾಗಿ ಮನವು ಹಾತೊರೆಯುತ್ತಿರಬೇಕು. ಗಣಿಕೆಯರ ವೈಯಕ್ತಿಕ ಸ್ವಾರ್ಥ ಇವನನ್ನು ಕರೆದೊಯ್ಯುವ ವಿಷಯದಲ್ಲಿ ಎಳ್ಳಷ್ಟೂ ಇಲ್ಲ. ಆದರೆ ಲೋಕಕ್ಷೇಮಕ್ಕೆ ರಾಜಾಜ್ಞೆ ಮನ್ನಿಸಿ ಹೊರಟುಬಂದಿದ್ದಾರೆ. ಇದು ಅವರ ದೇಶಪ್ರೇಮ, ಕಾರ್ಯನಿಷ್ಠೆ. ಋಷ್ಯಶೃಂಗನಾದರೋ ಹೊರಡಲು ಅನುವಾಗಿ ಮುಂದುವರೆದನು. ರಾಜ್ಯದ ಗಡಿಯೊಳಗೆ ಯಾವಾಗ ಅವನ ಪಾದಧೂಳಿ ಪ್ರವೇಶಿಸಿತೋ ಅದರ ಜೊತೆಗೇ ಮಳೆಯ ಹನಿ ಇಳೆಗೆ ಬಡಿದು ಮಣ್ಣಿನ ಕಂಪು ಹರಡಿತು. ದೇವನು ಜಗವನ್ನೇ ಆನಂದಗೊಳಿಸುವ ಬಯಕೆಯಿಂದೆಂಬಂತೆ ಧಾರಾಕಾರ ಮಳೆಗರೆದನು. ವರ್ಷಗಳ ಕಾಲ ಮಳೆಹನಿಯನ್ನೇ ನೋಡದೇ ಬರಪೀಡಿತರಾಗಿದ್ದ ಜನರು ಇವನನ್ನು ಭರದಿಂದ ಮೆರೆಸಿದರು. ಮಹಾತ್ಮರ ಪಾದಸ್ಪರ್ಶ ಕೆಲವೊಮ್ಮೆ ಪ್ರತ್ಯಕ್ಷವಾಗಿ ಕೆಲವೊಮ್ಮೆ ಪರೋಕ್ಷವಾಗಿ ಪ್ರಭಾವ ಬೀರಿಯೇ ತೀರುತ್ತದೆ. ಒಂದು ಒಳ್ಳೆಯ ಮಾತು ಓದಿದಾಗ ಅಥವಾ ಕೇಳಿದಾಗ ನಮಗೆ ಕ್ಷಣಿಕ ಆನಂದ ದೊರೆಯುತ್ತದೆ. ಅಂತಹುದರಲ್ಲಿ ಲೋಕಕ್ಕೆ ಆನಂದ ಕೊಡುವ ಸಜ್ಜನರ ಸಂಪರ್ಕ ಅವರ ಪಾದಸ್ಪರ್ಶ ಖಂಡಿತವಾಗಿ ನಮ್ಮ ಆನಂದಕ್ಕೆ ಕಾರಣವಾಗುತ್ತದೆ. ಗುರುತಿಸುವ ನಮ್ಮ ಕಣ್ಣನ್ನು ತೆರೆದು ಅನುಭವಿಸುವ ಬುದ್ಧಿ ಇರಬೇಕಷ್ಟೇ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ