ಚಾರುದತ್ತ ೨೦

👳‍♀ಚಾರುದತ್ತ ಬೆಳಕು- ೨೦👳‍♀

*ಕೃತ್ವಾ ನಿಶಾಯಾಂ ವಚನೀಯದೋಷಂ ನಿದ್ರಾಂ ಚ ಹಿತ್ವಾ ತಿಮಿರಂ ಭಯಂ ಚ | ಸ ಏವ ಸೂರ್ಯೋದಯಮಂದವೀರ್ಯಃ ಶನೈರ್ದಿವಾಚಂದ್ರ ಇವಾಸ್ಮಿ ಭೀತಃ ||*

_ಚಾರುದತ್ತನ ಮನೆಯಲ್ಲಿ ಕಳ್ಳತನ ಮಾಡಲು ಹೋದ ಇವನು ವಿದೂಷಕನ ಮೂರ್ಖತನದಿಂದ ಚಿನ್ನದ ನಾಣ್ಯದ ಚೀಲವನ್ನೇ ಪಡೆದು ಹೊರಬಂದಿದ್ದಾನೆ. ಕಳ್ಳರಿಗೆ ರಾತ್ರಿ ಅಪಾರ ಧೈರ್ಯ. ಅವರ ಸಾಹಸವೆಲ್ಲವೂ ಕತ್ತಲೆಯಲ್ಲಿ ಮಾತ್ರ. ಬೆಳಕು ಹರಿದಾಗ ಪುಕ್ಕಲರು ಅವರು. ಅದನ್ನೇ ಕವಿ ವರ್ಣಿಸಿದ್ದಾನೆ. ರಾತ್ರಿ ಹೊತ್ತು ನಿದ್ರೆ ಬಿಟ್ಟು ಕತ್ತಲೆಯ ಭಯವನ್ನು ತ್ಯಜಿಸಿ ಕಳ್ಳತನವನ್ನೇನೋ ಸುಲಭವಾಗಿ ಮಾಡಿದೆನು. ಆದರೆ ಬೆಳಕು  ಹರಿಯುತ್ತಿದ್ದಂತೆ ಹೆದರಿಕೆ ಉಂಟಾಗುತ್ತಿದೆ. ಸೂರ್ಯನ ಕಿರಣಗಳು ವಾತಾವರಣವನ್ನು ಪ್ರವೇಶಿಸಿದಂತೆ ಶಕ್ತಿಯೆಲ್ಲ ಉಡುಗಿಹೋಗಿ ನಿಧಾನಕ್ಕೆ ಹೆಜ್ಜೆ ಇಡುತ್ತಾ ಹಗಲಿನ ಚಂದ್ರನಂತೆ ಸುಮ್ಮನೆ ಹೆಸರಿಗೆ ಮಾತ್ರ ಇದ್ದೇನೆ. ನನ್ನದಾದ ಧೈರ್ಯ ಸಾಹಸ ಎಲ್ಲವೂ ಕ್ಷೀಣವಾಗಿದೆ. ಯಾರಾದರೂ ಗುರುತಿಸಿದರೆ ಎಂಬ ಭಯವೂ ಕಾಡುತ್ತಿದೆ. ಹಗಲಿನಲ್ಲಿ ಚಂದ್ರನು ಎಷ್ಟು ದೊಡ್ಡದಾಗಿ ಇದ್ದರೂ ಸೂರ್ಯನ ಕಾಂತಿಯ ಎದುರು ಅವನು ನಿಸ್ತೇಜ. ಅಂತೆಯೇ ಮೋಸದಿಂದ ಕಾರ್ಯ ಕತ್ತಲಿನಲ್ಲಿ ಅಥವಾ ಉಳಿದವರಿಗೆ ತಿಳಿಯದಂತೆ ಎಷ್ಟು ಧೈರ್ಯದಿಂದ ಮಾಡಿದರೂ ಎಲ್ಲರೆದುರಿಗೆ ಬೆಳಕಿನಲ್ಲಿ ಏನಾದರೂ ಮಾಡಬೇಕೆಂದರೆ ಅದಕ್ಕೆ ಪ್ರಾಮಾಣಿಕವಾಗಿ ಧೈರ್ಯ ಬೇಕಾಗುತ್ತದೆ. ಮೋಸ-ವಂಚನೆಗೆ ಬೆಳಕು ಅಥವಾ ಜನಸಮೂಹ ಎಂದಿಗೂ ವಿರುದ್ಧ. ಕವಿ ಇಲ್ಲಿ ವಚನೀಯದೋಷ ಎಂಬ ಸುಂದರ ಪ್ರಯೋಗ ಮಾಡಿದ್ದಾನೆ. ಎಲ್ಲರೂ ಆಡಿಕೊಳ್ಳುವಂತಹ ತಪ್ಪು ಎಂಬುದು ಅದರ ಅರ್ಥ. ಪ್ರಕೃತ ಕಳ್ಳನ ಕೃತ್ಯ ಎಲ್ಲರೂ ನಿಂದಿಸುವಂತಹದ್ದು. ಸಂಸ್ಕೃತದ ಸೊಬಗು ಇಂತಹ ಪದಗಳ ಬಳಕೆಯಲ್ಲಿದೆ. ಸಂದರ್ಭಕ್ಕೆ ಅನುಗುಣವಾಗಿ ಅರ್ಥೈಸುವ ವಿಶಿಷ್ಟ ಪದವಿದು. ವಂಚಕರಿಗೂ ಎಲ್ಲರೆದುರು ಬಂದಾಗ ಮನದಲ್ಲಿ ಮೂಡುವ ಭಯವನ್ನು ಕವಿ ಕಳ್ಳನ ಮೂಲಕ ತೆರೆದಿಟ್ಟಿದ್ದಾನೆ.ಅದಕ್ಕೆ ಹೊಂದಿಕೆಯಾಗುವ ಸುಂದರ ಉಪಮೆ ಹಗಲ ತಂಗದಿರ. ರಾತ್ರಿ ತನ್ನ ತಂಪಿಂದ ಆನಂದನೀಡುವ ಚಂದಿರ ಹಗಲಿನಲ್ಲಿ ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೇ._

📝ಸಂಗ್ರಹ ಲೇಖನ. ಶ್ರೀನಿಧಿ ಅಭ್ಯಂಕರ್. 

ಎಲ್ಲಾ ಲೇಖನಗಳಿಗೆ ಇಣುಕಿ
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩