ರಾಮಾಯಣ ೧೭೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೧🏝📖  
  
*ಮಿಥಿಲಾಧಿಪತಿಂ ಶೂರಂ ಜನಕಂ ಸತ್ಯವಿಕ್ರಮಮ್ | ಪೂರ್ವ ಸಂಬಂಧಿನಂ ಜ್ಞಾತ್ವಾ ತತಃ ಪೂರ್ವಂ ಬ್ರವೀಮಿ ತೇ || ತಥಾ ಕಾಶೀಪತಿಂ ಸ್ನಿಗ್ಧಂ ಸತತಂ ಪ್ರಿಯವಾದಿನಮ್ | ತಥಾ ಕೇಕಯರಾಜಾನಂ  ವೃದ್ಧಂ ಪರಮಧಾರ್ಮಿಕಮ್ | ಅಂಗೇಶ್ವರಂ ಮಹಾಭಾಗಂ ರೋಮಪಾದಂ ಸುಸಸ್ಕೃತಮ್ | ತಥಾ ಕೋಸಲರಾಜಾನಂ ಭಾನುಮಂತಂ ಸುಸತ್ಕೃತಮ್ | ಮಗಧಾಧಿಪತಿಂ ಶೂರಂ ಸರ್ವಶಾಸ್ತ್ರವಿಶಾರದಮ್ || ಪ್ರಾಚೀನಾನ್ಸಿಂಧುಸೌವೀರಾನ್ಸೌರಾಷ್ಟ್ರೇಯಾಂಶ್ಚ ಪಾರ್ಥಿವಾನ್ | ದಾಕ್ಷಿಣಾತ್ಯಾನ್ನರೇಂದ್ರಾಶ್ಚ ಸಮಸ್ತಾನಾನಯಸ್ವ ಹ ||*

_ವಸಿಷ್ಠರು ಸುಮಂತ್ರನಿಗೆ ಆಮಮತ್ರಣದ ಜವಾಬ್ದಾರಿ ನೀಡುತ್ತಿದ್ದಾರೆ. ಮೊದಲಿಗೆ ವೇದ-ವೇದಾಂಗ ನಿಷ್ಣಾತನೂ- ಸಕಲಶಾಸ್ತ್ರ ಪಾರಂಗತನೂ-ಮಹಾಪರಾಕ್ರಮಿಯೂ-ಶೂರನೂ ಆದ ದೂರದ ಹಿಂದಿನ ಸಂಬಂಧಿಯೂ ಆದ ಜನಕನನ್ನು ಆಹ್ವಾನಿಸು. ಇಲ್ಲಿ ಜನಕನಿಗೆ ಸಂಬಂಧ ಇದ್ದದ್ದು ಹಿಂದೆ ಯಾವುದೋ ಕಾಲದಲ್ಲಿ. ಈ ಕಾಲದಲ್ಲಿ ಮೊದಲು ಅವನನ್ನೇ ಕರೆಯಲು ಕಾರಣ ಅವನ ಯೋಗ್ಯತೆ. ಜೀವನ್ಮುಕ್ತನೆಂಬ ಹೆಗ್ಗಳಿಕೆ, ಶಾಸ್ತ್ರ-ಶಸ್ತ್ರ ಎರಡರಲ್ಲೂ ಪ್ರಾವೀಣ್ಯ, ವೇದಾದಿಗಳಲ್ಲೂ ಅಪಾರ ಜ್ಞಾನ ಇವೇ ಮುಖ್ಯ ಕಾರಣ. ಯಾವುದಾದರೂ ಕರ್ಮಕ್ಕೆ ಆಮಂತ್ರಣ ಕೊಡುವಾಗ ಮೊದಲು ಅತ್ಯಂತ ಯೋಗ್ಯರು ಯಾರು ಅವರಿಗೆ ಕರೆಹೇಳಬೇಕು. ಅನಂತರ ಉಳಿದವರಿಗೆ.ಜನಕನಷ್ಟು ಯೋಗ್ಯ ವ್ಯಕ್ತಿ ಹುಡುಕಿದರೂ ಸಿಗುವುದು ಕಷ್ಟ. ಅನಂತರ ಆ ಕಾಲದ ಪ್ರಸಿದ್ಧ ದೊರೆಗಳನ್ನು ಕರೆಯುತ್ತಿದ್ದಾರೆ. ಸ್ನೇಹಪರನಾದ ಪ್ರಿಯವಾದಿಯಾದ ಕಾಶಿರಾಜನನ್ನು ಆಹ್ವಾನಿಸು. ಇಲ್ಲಿ ಪ್ರಿಯವಕ್ತೃತ್ವವೇ ಸ್ನೇಹಪರತೆಗೆ ಕಾರಣ. ಒಳ್ಳೆಯ ಮಾತುಗಾರನಿಗೆ ಎಲ್ಲರೂ ಸ್ನೇಹಿತರೇ ಸರಿ. ಕಾಶಿಯ ರಾಜನನ್ನು ಹೆಸರಿನಿಂದ ಕರೆಯುವುದು ಕಡಿಮೆ. ಏಕೆಂದರೆ ಕಾಶಿಯ ರಾಜ ಎಂದಿಗೂ ವಿಶ್ವನಾಥ. ಆಳ್ವಿಕೆ ನಡೆಸುವವನು ವಿಶ್ವನಾಥನ ಆಜ್ಞಾವರ್ತಿಯಾಗಿ ಸಾಮಂತನಂತೆ ಇರುವುದು. ಹಾಗಾಗಿ ಕಾಶಿಯ ರಾಜರಿಗೆ ಹೆಚ್ಚಾಗಿ ಹೀಗೆಯೇ ಸಂಬೋಧನೆ._

_ಮುಂದೆ ಪರಮಧಾರ್ಮಿಕ ಕೇಕಯಾಧಿಪತಿಯನ್ನು ಆಹ್ವಾನಿಸು ಎನ್ನುತ್ತಾನೆ. ಕೈಕೇಯಿಯ ಅಪ್ಪನೂ ಹಾಗೇ ಎಂದೆಲ್ಲಾ ಬರೆಯುವ ಅನೇಕ ಲೇಖಕರು ಬಹುಶಃ ಈ ಮಾತನ್ನು ಓದಿರಲಾರರು. ಕೈಕೇಯಿ ಏನೋ ಪ್ರಚೋದಿತಳಾಗಿ ತಪ್ಪು ಎಸಗಿದಾಕ್ಷಣ ಅವಳಪ್ಪನೂ ಅಧರ್ಮಿಯೆಂದಲ್ಲ. ವಸಿಷ್ಠರ ಸಂಬೋಧನೆ ಪರಮಧಾರ್ಮಿಕ ಎನ್ನುವುದನ್ನು ನೋಡಿದರೆ ಅವನ ವ್ಯಕ್ತಿತ್ವ ಬಹಳ ಉನ್ನತಮಟ್ಟದಲ್ಲಿತ್ತು ಎಂದು ಊಹಿಸಬಹುದು. ಮುಂದೆ ಮಹಾನುಭಾವನಾದ ರೋಮಪಾದನನ್ನು ಕರೆ ತಾ ಎನ್ನುತ್ತಾರೆ. ಋಷ್ಯಶೃಂಗನಂತಹ ಅಳಿಯನನ್ನು ಪಡೆಯುವುದು ಜನ್ಮಜನ್ಮಾಂತರಗಳ ಸೌಭಾಗ್ಯ. ಯಾರೋ ಶ್ರೀಮಂತನೋ-ಸುಂದರನೋ ಸುಲಭವಾಗಿ ಸಿಗುವರು. ಆದರೆ ಮಹಿಮಾನ್ವಿತರು ಮುಗ್ಧತೆಯ ಮೂರ್ತಿವೆತ್ತಂತಿರುವವರು  ಕಷ್ಟ. ಹಾಗಾಗಿ ಇವನು ಮಹಾನುಭಾವನು._

ಮುಂದೆ ಉತ್ತರಕೋಸಲದ ಒಡೆಯ ಭಾನುಮಂತನನ್ನೂ, ಶಾಸ್ತ್ರನಿಷ್ಠನಾದ ಮಗಧಾಧಿಪತಿಯನ್ನೂ ಆಹ್ವಾನಿಸುತ್ತಿದ್ದಾರೆ. ಇಲ್ಲೂ ಮಗಧದ ರಾಜನ ಹೆಸರು ಕಂಡುಬರುವುದಿಲ್ಲ. ಮಹಾಭಾರತದ ಅನೇಕ ಕಡೆಯಲ್ಲೂ ಮಗಧದ ರಾಜನ ಹೆಸರಿನ ಉಲ್ಲೇಖ ಕಡಿಮೆ. ಬಹುಶಃ ಅಲ್ಲಿಯ ರಾಜರನ್ನು ಹಾಗೆಯೇ ಸಂಬೋಧಿಸುವುದು ಅವರ ಉನ್ನತ ವ್ಯಕ್ತಿತ್ವದ ದ್ಯೋತಕವಾಗಿದೆ. ಅನಂತರ ಪೂರ್ವದಿಕ್ಕಿನ ರಾಜರನ್ನೂ, ಸಿಂಧು-ಸೌವೀರಾಧಿಪತಿಗಳನ್ನೂ, ಸೌರಾಷ್ಟ್ರ ( ಗುಜರಾತ್) ರಾಜರನ್ನೂ, ದಕ್ಷಿಣ ದಿಕ್ಕಿನ ರಾಜರನ್ನೂ ಆಹ್ವಾನಿಸುವನು. ದಕ್ಷಿಣ ದಿಕ್ಕಿನ ರಾಜ್ಯಗಳೆಲ್ಲವೂ ಅರಣ್ಯವಾಗಿತ್ತು. ದ್ರಾವಿಡರು ಅಥವಾ ವನವಾಸಿಗಳು ತುಂಬಿದ್ದರು ಎನ್ನುವ ತಥಾಕಥಿತ ಇತಿಹಾಸಕಾರರು ಈ ವಿಷಯ ಗಮನಿಸಬೇಕು. ಇಲ್ಲಿನ ಕೆಲವು ಭಾಗ ಅರಣ್ಯ ಆಗಿದ್ದ ಕಾರಣ ದಕ್ಷಿಣದ ಎಲ್ಲವೂ ಕಾಡಾಗಿತ್ತು ಎಂದಲ್ಲ. ಇಲ್ಲೂ ಜನಜೀವನ ನಾಗರಿಕತೆ ರೂಪುಗೊಂಡಿತ್ತು. ಇನ್ನೂ ಬೇರೆ ಬೇರೆ ರಾಜರಿಗೆ ಪ್ರಮುಖರಿಗೆ ವಸಿಷ್ಠರು ಆಮಂತ್ರಣ ಕಳುಹಿಸುತ್ತಿದ್ದಾರೆ. ಬಹುಶಃ ದಶರಥನಿಗೆ ಆ ಕಾಲದಲ್ಲಿ  ಶತ್ರುಗಳೆಂದು ಯಾರೂ ಇರಲಿಲ್ಲ. ಅವನ ಪರಾಕ್ರಮ ಹಾಗೂ ಶ್ರೇಷ್ಠ ವ್ಯಕ್ತಿತ್ವ ಇದೇ ಕಾರಣವಾಗಿದ್ದಿರಬಹುದು. ಹಾಗಾಗಿ ಹೆಚ್ಚಿನೆಲ್ಲಾ ರಾಜರನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದಾನೆ._

_ಇಲ್ಲಿ ನಾಯಕತ್ವದ ಒಂದು ಮುಖ್ಯ ಅಂಶ ಗಮನಿಸಬೇಕು. ಒಮ್ಮೆ ವಸಿಷ್ಠರಿಗೆ ಯಜ್ಞದ ಜವಾಬ್ದಾರಿ ಕೊಟ್ಟ ಮೇಲೆ ದಶರಥನು ಮಧ್ಯದಲ್ಲಿ ತಲೆಹಾಕಲಾರ. ಆಮಂತ್ರಣದಿಂದ ಹಿಡಿದು ಎಲ್ಲವೂ ಅವರ ನೇತೃತ್ವದಲ್ಲಿ ನಡೆಯುತ್ತದೆ. ಅಷ್ಟು ಯೋಗ್ಯತೆ ಹಾಗೂ ಅನುಭವ ನೋಡಿ ಜವಾಬ್ದಾರಿ ನೀಡಿದ ಮೇಲೆ ಮತ್ತೆ ತಪ್ಪಿದರೆ ಮಾತ್ರ ತಲೆಹಾಕಬೇಕೇ ಹೊರತು ಸುಮ್ಮನೇ ಮಧ್ಯೆ ಪ್ರವೇಶಿಸುವದಲ್ಲ._



ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩