ರಾಮಾಯಣ ೧೭೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೨🏝📖
*ಅವಜ್ಞಯಾ ನ ದಾತವ್ಯಂ ಕಸ್ಯಚಿಲ್ಲೀಲಯಾಪಿ ವಾ | ಅವಜ್ಞಯಾ ಕೃತಂ ಹನ್ಯಾದ್ದಾತಾರಂ ನಾತ್ರ ಸಂಶಯಃ ||*
_ವಸಿಷ್ಠರ ಆದೇಶ. ಯಜ್ಞ ಎಂದ ಮೇಲೆ ಸಾವಿರಾರು ದಾನಗಳನ್ನು ನೀಡಲಿರುತ್ತದೆ. ದಾನ ಪರಂಪರೆ ನಡೆಯುತ್ತಲೇ ಇರುತ್ತದೆ. ಜ್ಞಾನ-ಅನ್ನ-ಭೂಷಣ-ಭೂಮಿ-ವಸ್ತು-ಸುವರ್ಣ-ರಜತ ಇವುಗಳ ದಾನ ಮಾಡಿದಷ್ಟೂ ಶ್ರೇಯಸ್ಸು. ದಾನಕಾಲದಲ್ಲಿ ಎಂತಹ ನಿಯಮ ಇರಬೇಕೆಂದು ನಿರೂಪಿಸುತ್ತಿದ್ದಾರೆ. ದಾನ ತೆಗೆದುಕೊಳ್ಳುವ ವ್ಯಕ್ತಿಯ ಬಗ್ಗೆ ಸ್ವಲ್ಪವೂ ಅಸಡ್ಡೆ ತೋರಬಾರದು. ಹಾಗಾಗಿಯೇ ಸಂಬಂಧಿಕರಿಗೆ-ಕುಟುಂಬಿಕರಿಗೆ ದಾನ ನೀಡಬಾರದು ಎನ್ನುವುದು. ಇವನು ಆ ಧರ್ಮ, ಇವನು ಈ ಮತ, ಇವನು ಮಿತ್ರ, ಇವನು ನನ್ನ ವಿರೋಧಿ ಇತ್ಯಾದಿ ಯಾವ ಭಾವನೆ ಇದ್ದರೂ ದಾನ ಕಾಲದಲ್ಲಿ ಅದೆಲ್ಲವನ್ನೂ ಬದಿಗಿಟ್ಟು ಶ್ರೇಯಸ್ಕಾಮನಾಗಿ ಮನಃಪೂರ್ವಕವಾಗಿ ದಾನ ಮಾಡಬೇಕು. ಅನೇಕ ಶ್ರೀಮಂತರು ದಾನ ಕೊಡುವಾಗ ಅಸಡ್ಡೆ ತೋರುವುದನ್ನು, ಅಪಮಾನ ಮಾಡುವುದನ್ನೂ, ಇವನು ತೆಗೆದುಕೊಳ್ಳಲೆಂದೇ ಹುಟ್ಟಿದವನು ಎಂಬರ್ಥದಲ್ಲಿ ನೋಡುವುದನ್ನು ಮಾತನಾಡುವುದನ್ನೂ ಗಮನಿಸಬಹುದು. ಅಂತಹ ದಾನವೆಲ್ಲ ಕಲ್ಲಮೇಲೆ ಸುರಿದ ಮಳೆಯಂತೆ ವ್ಯರ್ಥ. ಎರಡನೆಯದಾಗಿ ತಮಾಷೆ ಮಾಡುತ್ತಾ ಹೋ ಬನ್ನಿ ದಾನಕ್ಕೆ ಎಂದು ವಿನೋದ ಮಾಡುತ್ತಾ ಅಥವಾ ಚೇಷ್ಟೆ ಮಾಡುತ್ತಾ ದಾನ ಮಾಡಬಾರದು. ಒಮ್ಮೆ ಪ್ರತಿಗೃಹೀತನ ಮನಕ್ಕೆ ಬೇಸರ ಉಂಟಾದರೆ ಅದು ದಾತೃವಿಗೆ ನರಕ ತೋರಬಹುದು. ಹಾಗಾಗಿ ಗಂಭೀರತೆಯನ್ನು ಕಾಪಾಡಿಕೊಂಡು ದಾನ ಮಾಡಬೇಕು. ಅವನಿಗೆ ಗತಿಯಿಲ್ಲ , ಅವನಿಗೆ ಈ ದಾನ ಸರಿ, ಅವನು ಇಲ್ಲಿಗೆ ಅದಕ್ಕಾಗಿಯೇ ಬಂದಿದ್ದಾನೆ ಎಂದು ಎಷ್ಟು ಆತ್ಮೀಯತೆ ಇದ್ದರೂ ತಪ್ಪಿಯೂ ನುಡಿಯಬಾರದು. ಒಂದು ವೇಳೆ ಹೀಗೆಲ್ಲಾ ಅವಜ್ಞೆ ತೋರಿ ದಾನ ಮಾಡಿದರೆ ಅದು ಒಂದಲ್ಲ ಒಂದು ದಿನ ದಾತೃವಿನ ನಾಶಕ್ಕೆ ಕಾರಣವಾಗುತ್ತದೆ.ಹಾಗಾಗಿ ದುಡ್ಡಿದೆ, ಸ್ವೀಕರಿಸಲು ಜನ ಇದ್ದಾರೆ ಎಂದು ದಾನ ಮಾಡುವುದಲ್ಲ.ಮನಃಪೂರ್ವಕವಾಗಿ ಇದು ನನ್ನ ಒಳಿತಿಗೆ ಎಂಬ ಭಾವನೆಯಿಂದ ಎದುರಿಗಿರುವ ವ್ಯಕ್ತಿಯಲ್ಲಿ ಅಂತರ್ಗತನಾದ ಪರಮಾತ್ಮನಿಗೆ ನಾನು ಸಲ್ಲಿಸುವ ಪೂಜೆ ಇದು ಎಬ್ನುತ್ತಾ ದಾನ ನೀಡುವುದು ಇಹ-ಪರ ಶ್ರೇಯಸ್ಕರವಾದುದು._
_ಅಶ್ವಮೇಧದ ಕ್ರಮ ಹೀಗಿರುತ್ತದೆ. ತನ್ನ ಮನಸ್ಸಿಗೆ ಬಂದಂತೆ ತಿರುಗುವ ಅಶ್ವವನ್ನು ರಾಜಪುತ್ರ-ರಾಜೋಗ್ರ- ಸೂತಗ್ರಾಮಣಿ-ಕ್ಷತ್ರಸಂಗ್ರಹೀತರೆಂಬ ನಾಲ್ಕು ನೂರು ಜನ ಹಿಂಬಾಲಿಸುತ್ತಾರೆ. ಯಾರಾದರೂ ಕಟ್ಟಿದರೆ ಅವರೊಡನೆ ಕಾದು ಬಿಡಿಸಿಕೊಂಡು ಬರಬೇಕು. ಹೀಗೆ ಹತ್ತಾರು ದೇಶ ತಿರುಗಿ ಬಂದ ಅಶ್ವವನ್ನು ನಾಲ್ಕು ಜನ ಯಜ್ಞದ ಅಂಗದಂತಿರುವವರು ಬ್ರಹ್ಮ-ಅಧ್ವರ್ಯು-ಹೋತಾ-ಉದ್ಗಾತಾ ಇವರು ರಥಕಾರನ ಮನೆಗೆ ತೆಗೆದುಕೊಂಡು ಹೋಗಿ ಕಟ್ಟಿ ಅಲ್ಲಿ ಒಂದು ಬಗೆಯ ಹೋಮ ಮಾಡುತ್ತಾರೆ._
_ಅಶ್ವಮೇಧಕ್ಕೆ ಆಯ್ಕೆಯಾದ ಕುದುರೆಯೂ ಬಹಳ ನಿರ್ದಿಷ್ಟವಾಗಿದೆ. ಇದು 34 ಪಕ್ಕೆಲುಬುಗಳನ್ನು ಹೊಂದಿರಬೇಕು. ಸಂಪೂರ್ಣವಾಗಿ ಬಿಳಿಯಾಗಿರಬೇಕು, ಗಟ್ಟಿಮುಟ್ಟಾದ ಮೈಕಟ್ಟು, ಪರಿಪೂರ್ಣ ಆರೋಗ್ಯ ಮತ್ತು ಅದರ ಎಡ ಕಿವಿ ಕಪ್ಪು ಆಗಿರಬೇಕು. ಯಾವ ರೀತಿ ರೇಸ್ ಗಳಿಗೆ ಕುದುರೆಗಳನ್ನು ಆರಿಸುವಾಗ ಅದರ ಯೋಗ್ಯತೆ ಅಳೆಯುವರೋ ಇಲ್ಲಿಯೂ ಅದರದ್ದೇ ಆದ ನಿಯಮಗಳಿವೆ. ಅಶ್ವವು ಸಂಚಾರ ಹೊರಟ ಹನ್ನೆರಡನೆಯ ತಿಂಗಳಲ್ಲಿ ಯಜ್ಞಶಾಲೆಯ ನಿರ್ಮಾಣ, ಯಜ್ಞೋಪಯೋಗಿ ವಸ್ತುಗಳ ಸಂಗ್ರಹ ನಡೆದು ಫಾಲ್ಗುಣ ಅಮಾವಾಸ್ಯೆಗೆ ಯಜ್ಞಶಾಲೆಗೆ ಪ್ರವೇಶಿಸಿ ಚೈತ್ರ ಪ್ರತಿಪತ್ತಿಗೆ ಅಂದರೆ ಯುಗಾದಿಯ ದಿನ ಅಶ್ವಮೇಧ ಯಾಗ ಪ್ರಾರಂಭಿಸುತ್ತಾರೆ. ಒಂದು ವೇಳೆ ಕುದುರೆ ಕಳೆದುಹೋದರೆ, ಅಪಹರಿಸಿದರೆ, ಸತ್ತರೆ ಮತ್ತೆ ಪ್ರಾಯಶ್ಚಿತ್ತ ಮಾಡಿ ಇನ್ನೊಂದು ವರ್ಷ ಸಂಚರಿಸಿ ಅನಂತರ ಪ್ರಾರಂಭಿಸುವುದು. ಹಾಗಾಗಿ ಅಶ್ವಮೇಧ ಸುಲಭದ ಕೆಲಸವಲ್ಲ._
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ