ಪದಶಕ್ತಿ ೪೨

🏹*ಪದಶಕ್ತಿ* ---೪೨🌄

*ಪುಣ್ಯಜನ*

_ಈ ಪದ ಕೇಳಿದ ಕ್ಷಣವೇ ನಮ್ಮ ಮನದಲ್ಲಿ ಮೂಡುವ ಭಾವ ಸತ್ಕಾರ್ಯ ಮಾಡಿ ಪುಣ್ಯ ಸಂಪಾದಿಸಿದವರು ಅಂತ. ಆದರೆ ಸಂಸ್ಕೃತದಲ್ಲಿ ಮುಖ್ಯ ಅರ್ಥವಿರುವುದು ಪಾಪಿ ಎಂದು. ರಾಕ್ಷಸರ ಪಾಪಕೃತ್ಯಗಳಿಂದಾಗಿ ಹಿಂಸೆಯಿಂದಾಗಿ ಅವರಿಗೆ ಈ ಹೆಸರು ಬಂದಿದೆ. ಇದು ಒಂದು ರೀತಿಯಲ್ಲಿ ವ್ಯತಿರೇಕ ಹೆಸರು. ನಮ್ಮ ದೈನಂದಿನ ವ್ಯವಹಾರದಲ್ಲಿ ಯಾರಿಗಾದರೂ ಹಾಸ್ಯ ಮಾಡುವಾಗ ಸೋಮಾರಿಯಾದರೆ ಅವನು ಭಾರೀ ಕೆಲಸಗಾರ ಎಂದೋ ಅಥವಾ ಹೆಚ್ಚು ತಿನ್ನುವನಾದರೆ ಅವನಿಗೆ ದಿನವೂ ದ್ವಾದಶಿ ಎನ್ನುವಂತೆ ರಾಕ್ಷಸರಿಗೆ ಈ ಪರ್ಯಾಯಪದಬಳಕೆಯಲ್ಲಿದೆ._
_ಯಕ್ಷ ಜನ್ಮವು ಸಿಗುವುದು ಬಹಳ ಪುಣ್ಯಸಂಪಾದನೆಯಿಂದ. ಅವರು ಸದಾ ಸುಖಲೋಲುಪರು. ಮನುಷ್ಯರಿಗಿಂತ ಶ್ರೇಷ್ಠ ಜನ್ಮವದು. ಹಾಗಾಗಿ ಅವರಿಗೂ ಪುಣ್ಯಜನ ಎಂಬ ಪರ್ಯಾಯ ಇದೆ. *ಪಯೋಧರೈಃ ಪುಣ್ಯಜನಾಂಗನಾನಾಂ* ಎಂದು ಕಾಳಿದಾಸ ತನ್ನ ರಘುವಂಶದಲ್ಲಿ ಯಕ್ಷಾಂಗನೆಯರ ಪಯೋಧರಗಳತ್ತ ಕಣ್ಣು ನೆಟ್ಟಿದ್ದಾನೆ. ಯಕ್ಷರೂ ಕೆಲವೊಮ್ಮೆ ಉದ್ಧಟತನದ ಕೆಲಸ ಮಾಡುವುದುಂಟು.‌ಅಂತಹ ಸಂದರ್ಭದಲ್ಲಿ ರಾಕ್ಷಸರಂತೆ ಅವರಿಗೂ ವಿರುದ್ಧಾರ್ಥಕವಾಗಿ ಬಳಸಬಹುದು._

_ಇನ್ನು ಸಹಜವಾದ ಅರ್ಥ ಒಳ್ಳೆಯ ವ್ಯಕ್ತಿ ಎಂದು. ಅವರು ಪುಣ್ಯವಂತರಪ್ಪಾ ಎಂದು ನಾವು ಆಡುನುಡಿಯಲ್ಲಿ ಹೇಳುವೆವು. ಅಂತಹ ಪ್ರಯೋಗವೂ ಇದೆ._

_ಸಂಸ್ಕೃತದ ಸೊಗಸೇ ಅದು. ಪದಗಳು ಯಾವ ಸಂದರ್ಭದಲ್ಲಿ ಬಳಕೆಯಾಗಿವೆ ಎಂಬುದನ್ನು ಗಮನಿಸಿ ಅರ್ಥವನ್ನು ನಿರ್ಣಯಿಸಬೇಕು. ಹಾಗಿಲ್ಲದೆ ಸುಮ್ಮನೆ ಬಳಕೆಯ ಅರ್ಥವೆಂದರೆ ಅನರ್ಥವಾದೀತು. *ಸರ್ಪೈಃ ಪುಣ್ಯಜನೈಶ್ಚೈವ ವೀರುದ್ಭಿಃ* ಎಂದು ಹರಿವಂಶದಲ್ಲಿ ಸೃಷ್ಟಿ ವರ್ಣಿಸುವ ಸಂದರ್ಭದಲ್ಲಿ ಈ ಪದ ರಾಕ್ಷಸರ ಹುಟ್ಟನ್ನು ಹೇಳಿದೆ._

*ದಿವಿಜರುಮಂತೆ ಪುಣ್ಯಜನರೂರ್ಜಿತಗುಹ್ಯಕರುಂ ನಿಶಾಟರುಂ* ಎಂದು ನಾಗವರ್ಮನು ನಾನಾರ್ಥಕಾಂಡದ ಕನ್ನಡ ಪದಕೋಶದಲ್ಲಿ ಇದೇ ಅರ್ಥವನ್ನು ಧ್ವನಿಸಿದ್ದಾನೆ.

*ಜಲಜಮಿತ್ರ ವಂಶ ಭೂಷಾ ಕ್ಷಾರಜಲಧಿಬಂಧನ ಪುಣ್ಯಜನ ಪ್ರಾಣ ಶೋಷಾತುಲಸೀ ರಾಮದಾಸ ಪೋಷಾ ಶ್ರೀತುಲಸೀ ಕಾನನಹಿತ ತುಂಬುರ ತೋಷಾ*
 
_ಕೀರ್ತನೆಯೊಂದರಲ್ಲಿ 
ಪುಣ್ಯಜನರ ಪ್ರಾಣ ತೆಗೆದ ರಾಮ ಎಂದು ಸ್ತುತಿಸಿದ್ದಾರೆ. ಹಾಗಾಗಿ ಕನ್ನಡದಲ್ಲೂ ಕೆಲವೆಡೆ ಈ ಅರ್ಥದಲ್ಲಿ ಪುಣ್ಯಜನದ ಬಳಕೆ ಇದೆ._

_ನಾವು ಪುಣ್ಯಕಾರ್ಯ ಮಾಡಿ ಪುಣ್ಯವಂತರಾಗೋಣ. ಪಾಪ ಮಾಡಿ ರಾಕ್ಷಸರಂತೆ ವೈರುಧ್ಯಪದಾರ್ಥವಾಗದಿರೋಣ ಎಂದು ಆಶಿಸುತ್ತಾ ಎಲ್ಲಾ ಪುಣ್ಯಜನರಿಗೆ ವಂದನೆಗಳು._
 

ತಪ್ಪುಗಳಿದ್ದರೆ ತಿದ್ದಿ.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩