ಪದಶಕ್ತಿ ೪೧
🏹*ಪದಶಕ್ತಿ* ---೪೧🌄
*ರಾಕ್ಷಸ*
_ರಕ್ಷ ಪಾಲನೇ ಎಂಬ ಧಾತುವಿನಿಂದ ಹುಟ್ಟಿದ ಪದ. ರಕ್ಷತಿ ಅಸ್ಮಾತ್ ಇವನಿಂದ ಅಥವಾ ಇವರಿಂದ ರಕ್ಷಿಸಲ್ಪಟ್ಟಿದೆ ಎಂಬ ಅರ್ಥದಲ್ಲಿ ರಾಕ್ಷಸ ಶಬ್ದ ಹುಟ್ಟಿರುವಂತಹದು._
_ಬ್ರಹ್ಮನು ಸೃಷ್ಟಿ ಕಾಲದಲ್ಲಿ ಅತ್ಯಂತ ಕೋಪ ಮತ್ತು ಹಸಿವಿನಿಂದ ತತ್ತರಿಸಲು ಹುಟ್ಟಿಕೊಂಡವರು ಹೇತಿ ಮತ್ತು ಪ್ರಹೇತಿ ಎಂಬ ಈರ್ವರು ರಾಕ್ಷಸರು. ರಕ್ಷಣೆಯ ಭಾರವನ್ನು ಹೊತ್ತವರು ರಾಕ್ಷಸರಾದರು. ಪ್ರಹೇತಿ ತಪಸ್ಸಿಗೆ ಹೊರಟನು. ಹೇತಿಯು ಕಾಲನ ಮಗಳಾದ ಭಯೆಯನ್ನು ಕೈಹಿಡಿದು ಅದೇ ಕಾಯಕ ಕೈಗೊಂಡನು._
_ಅತಿಮಾನುಷ ಪ್ರವೃತ್ತಿಯುಳ್ಳವರನ್ನು ರಾಕ್ಷಸರೆಂದು ಕರೆಯುವ ರೂಢಿ ಇದೆ. ಯಾರಾದರೂ ಅತಿಯಾಗಿ ತಿನ್ನುತ್ತಿದ್ದರೆ, ನಿದ್ರಿಸುತ್ತಿದ್ದರೆ ಹಾಗೂ ಇಡೀ ದಿನ ಕೆಲಸ ಮಾಡುತ್ತಿದ್ದರೆ ಅವರನ್ನು ರಾಕ್ಷಸರೆಂದು ಕರೆಯುವುದು ರಾಕ್ಷಸರ ಅತಿಶಯ ಸಾಮರ್ಥ್ಯ ಸೂಚಿಸಲು. ಸಾಮಾನ್ಯರಿಗಿಂತ ಹೆಚ್ಚಿನ ಸಾಮರ್ಥ್ಯ ರಾಕ್ಷಸರ ವೈಶಿಷ್ಟ್ಯ._
_ಇದೇ ಶಬ್ದಕ್ಕೆ ಙೀಷ್ ಪ್ರತ್ಯಯ ಬಂದರೆ ಹೆಣ್ಣು ರಾಕ್ಷಸಿ ಎಂದು ಅಗುತ್ತದೆ._
_ವಿವಾಹದಲ್ಲಿ ಒಂದು ಬಗೆ ರಾಕ್ಷಸ ವಿವಾಹ. ಕನ್ಯೆಯ ಬಂಧುಗಳನ್ನು ಹೊಡೆದು ಬಡಿದು ಅಳುತ್ತಿರುವ ಕನ್ಯೆಯನ್ನು ಹೊತ್ತೊಯ್ದು ವಿವಾಹವಾದರೆ ಅದು ರಾಕ್ಷಸ ವಿವಾಹ._
_ನವನಂದರ ಮಂತ್ರಿಯು ತನ್ನ ಕೆಲಸದಿಂದಾಗಿ ರಾಕ್ಷಸ ಎಂದು ಹೆಸರು ಸಂಪಾದಿಸಿದ್ದನು. ಅಮಾತ್ಯ ಎಂದರೆ ಮಂತ್ರಿ. ಅಮಾತ್ಯರಾಕ್ಷಸ ಎಂದು ಅವನಿಗೆ ಜನರಿತ್ತ ಬಿರುದು._
_ರಾಕ್ಷಸರಿಗೆ ಸಂಬಂಧಿಸಿದ ಎಂಬ ಅರ್ಥದಲ್ಲೂ, ಕ್ರೂರವಾದ ಎಂಬ ಅರ್ಥದಲ್ಲೂ ಈ ಶಬ್ದ ಬಳಕೆಯಲ್ಲಿ ಇದೆ._
_ಕೋರೆಹಲ್ಲಿಗೂ ರಾಕ್ಷಸ ಎಂಬ ಪರ್ಯಾಯವಿದೆ.ಸಂಧ್ಯಾಕಾಲವನ್ನೂ ರಾಕ್ಷಸೀ ಎಂದು ಕರೆಯುತ್ತಾರೆ. ರಾಕ್ಷಸರ ಶಕ್ತಿ ಹೆಚ್ಚಿರುವ ಆ ಸಮಯದಲ್ಲಿ ಧ್ಯಾನ ಪೂಜೆಗಳಲ್ಲಿ ತೊಡಗಿ ಮನವು ಕೆಡದಂತೆ ನೋಡಿಕೊಳ್ಳುವುದು ಸಂಧ್ಯಾವಂದನೆ-ಭಜನೆ-ಸಂಕೀರ್ತನೆಯ ಮುಖ್ಯ ಉದ್ದೇಶ. ಸಂಜೆಯ ಮೂರು ಮುಹೂರ್ತಕ್ಕೆ ರಾಕ್ಷಸೀ ಎಂಬ ಹೆಸರು._
ಸಾಹಿತ್ಯದ ಎಲ್ಲೆಡೆ ರಾಕ್ಷಸ ಪದದ ಬಳಕೆ ಕಾಣಸಿಗುತ್ತದೆ.
*ರಾಮ ದೂತನೆನೆಸಿಕೊಂಡೆ ನೀರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀಜಾನಕಿಗೆ ಮುದ್ರೆ *ಇತ್ತುಜಗತಿಗೆಲ್ಲ ಹರುಷವಿತ್ತು*
*ಚೂಡಾಮಣಿಯ *ರಾಮಗಿತ್ತುಲೋಕಕೆ* *ಮುತ್ತೆನಿಸಿಬರುವ*
_ಪುರಂದರದಾಸರ ವೀರ ಹನುಮ ಬಹು ಪರಾಕ್ರಮಾ ಎಂಬ ಕೀರ್ತನೆಯಲ್ಲಿ ಹನುಮನು ಅಶೋಕವನವನ್ನು ಹಾಳುಮಾಡಿದ ಸಂದರ್ಭದ ವರ್ಣನೆ ಇಲ್ಲಿ ಕಾಣಬಹುದು._
ಸಂಸ್ಕೃತ ಸಾಹಿತ್ಯ ನೋಡುವುದಾದರೆ
*अवध्यां स्त्रियमित्याहुर्धर्मज्ञा धर्म निश्चये । धर्मज्ञान् राक्षसान् आहु: हन्यात् स च मामपि।३१।।*
_ಮಹಾಭಾರತದ ಈ ಶ್ಲೋಕದಲ್ಲಿ ರಾಕ್ಷಸರನ್ನು ಧರ್ಮಜ್ಞರೆಂದಿದ್ದಾರೆ. ತಿಳಿದೂ ಅಧರ್ಮ ಮಾಡುವವರನ್ನು ರಾಕ್ಷಸರೆಂದು ಕರೆಯಬಹುದು._
_ನಮ್ಮಲ್ಲಿ ರಾಕ್ಷಸೀ ಪ್ರವೃತ್ತಿಯಾದ ಕ್ರೂರತೆ, ನಿರ್ದಯತೆ,ಹಿಂಸಾಮನೋಭಾವ ಮೂಡದೇ ರಕ್ಷಿಸುವ ಪ್ರವೃತ್ತಿ ಬೆಳೆಯಲೆಂದು ಆಶಿಸೋಣ._
ತಪ್ಪುಗಳಿದ್ದರೆ ತಿದ್ದಿ.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ