ರಾಮಾಯಣ ೧೬೭
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖
*ಸರ್ವಥಾ ಪ್ರಾಪ್ಸ್ಯಸೇ ಪುತ್ರಾಂಶ್ಚತುರೋಮಿತವಿಕ್ರಮಾನ್ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ ||*
_ವಸಂತಕಾಲದಲ್ಲಿ ಯಜ್ಞ ಸಿದ್ಧತೆ ಆರಂಭಿಸಿದ ರಾಜನು ವಸಿಷ್ಠಪ್ರಮುಖರನ್ನು ಕರೆಯಿಸಿ ಅವರ ಅನುಮತಿ ಬೇಡಿದನು. ಅವರೆಲ್ಲರೂ ಋಷ್ಯಶೃಂಗನ ನೇತೃತ್ವದಲ್ಲಿ ಯಜ್ಞ ಮಾಡಲು ಉತ್ಸುಕರಾಗಿ ರಾಜನಿಗೆ ಹೀಗೆಂದರು. ರಾಜನೇ, ನಿಸ್ಸಂಶಯವಾಗಿ ಮಕ್ಕಳಿಗಾಗಿ ಧರ್ಮಕಾರ್ಯದಲ್ಲಿ ತೊಡಗಿರುವ ನೀನು ನಾಲ್ಕು ಪರಾಕ್ರಮಿಗಳನ್ನು ಪುತ್ರರನ್ನಾಗಿ ಪಡೆಯುವೆ. ಇನ್ನೂ ಯಜ್ಞ ಆರಂಭವಾಗಿಲ್ಲ. ಆಗಲೇ ಋಷಿಗಳು ನುಡಿದದ್ದು ಹೇಗೆಂದರೆ ಭೂತ-ಭವಿತವ್ಯಗಳ ಸ್ಪಷ್ಟ ಮಾಹಿತಿ ತಪಶ್ಶಕ್ತಿಯ ಪ್ರಭಾವದಿಂದಾಗಿ ಅವರಿಗೆ ಬಂದಿರುತ್ತದೆ. ಅದಕ್ಕಾಗಿಯೇ ಭವಭೂತಿಯ ಈ ಮಾತು_ *ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ*
_ಸಾಮಾನ್ಯರಾದ ನಮ್ಮ ಮಾತು ಅರ್ಥವನ್ನು ಅಂದರೆ ವಿಷಯವನ್ನು ಅನುಸರಿಸಿದರೆ ಋಷಿಗಳು ಹಾಗೂ ದೇವತೆಗಳ ಮಾತು ಅರ್ಥವನ್ನು ಅನುಸರಿಸುತ್ತದೆ. ಅವರಾಡುವ ಮಾತಿನಂತೆ ಲೋಕದಲ್ಲಿ ಘಟನೆಗಳು ಜರುಗುತ್ತವೆ. ಇಲ್ಲೂ ಎರಡು ವರ್ಷದ ನಂತರ ಕ್ರಮವಾಗಿ ಹುಟ್ಟುವ ರಾಮಾದಿಗಳ ಜನ್ಮವನ್ನು ಈಗಲೇ ಅರಿತಿದ್ದರು ಈ ಮಹಿಮರು._
*ಸಮರ್ಥಾಧಿಷ್ಠಿತಶ್ಚಾಶ್ವಃ ಸೋಪಾಧ್ಯಾಯೋ ವಿಮುಚ್ಯತಾಮ್*
_ರಾಜನು ಆ ಕೂಡಲೇ ಯಜ್ಞಾಶ್ವವನ್ನು ಜೊತೆಗೆ ಯೋಧರನ್ನೂ ಉಪಾಧ್ಯಾಯರನ್ನೂ ಕಳಿಸಲು ಆದೇಶಿಸಿದನು. ಇಲ್ಲಿ ಅಶ್ವಮೇಧದ ಅಶ್ವದ ಜೊತೆಗೆ ಹೋಗಬೇಕಾದವರ ಪಟ್ಟಿ ಹೀಗಿದೆ._ *ಸನ್ನಾಹವಂತಃ ಕ್ಷಿತಿಪಾಲಪುತ್ರಾಃ ಸನ್ನದ್ಧಸೂತ್ರಾಃ ಶತಮಸ್ಯ ತುಲ್ಯಾಃ | ಗೋಪಾಯಿತಾರಃ ಶತಮೇವಮುಗ್ರಾಃ ಸನ್ನಾಹಿನಸ್ತಾದೃಶಸೂನುಯುಕ್ತಾಃ | ವೈಶ್ಯಾಃ ಶತಂ ಪ್ರಾಂತಚರಾಃ ಪಥಿಸ್ಯುರ್ವರೂಥಿನಸ್ಥೈಃ ಶತಮೇವ ಶೂದ್ರಾಃ ||*
_ಈ ಶ್ಲೋಕಗಳನ್ನು ಗಮನಿಸಿದಾಗ ತಿಳಿಯುವುದಿಷ್ಟು- ಅಶ್ವದ ಜೊತೆಗೆ ನೂರು ಉಪಾಧ್ಯಾಯರು ಅಂದರೆ ಶಿಕ್ಷಣ ನೀಡುವಷ್ಟು ಕಲಿತವರು, ನೂರು ಯೋಧರು ಅಂದರೆ ಎದುರಾಳಿಯನ್ನು ಹಣಿಯಬಲ್ಲ ವಿದ್ಯೆ ಅರಿತವರು, ನೂರು ಜನ ಗೋಪಾಲಕರು, ನೂರು ಜನ ಯಾವ ಕೆಲಸಕ್ಕೂ ಸಿದ್ಧರಿರುವ ಸಮರ್ಥರು. ವರ್ಣವ್ಯವಸ್ಥೆಯಲ್ಲಿ ಇಲ್ಲಿ ಎಲ್ಲರಿಗೂ ಸಮಾನ ಪಾಲು. ಯಜ್ಞವಾದ್ದರಿಂದ ಬ್ರಾಹ್ಮಣರು ಹೆಚ್ಚು ಅಥವಾ ರಾಜನಿಗೆ ಸಂಬಂಧಿಸಿದ ಕಾರಣ ಕ್ಷತ್ರಿಯರು ಹೆಚ್ಚು ಮೊದಲಾದ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲ. ಇದೇ ಸಾಮರಸ್ಯ, ಸಮಾನತೆ. ಇದಲ್ಲದೆ ನಮ್ಮ ಆಹಾರ ನೀವು ತಿನ್ನಿ, ನಿಮ್ಮ ಮನೆಯಲ್ಲಿ ನಾವು ವಾಸಮಾಡುವೆವು, ನಮಗೆ ಮೀಸಲಾತಿ ಕೊಡಿ ಮೊದಲಾದ ಬುಡವಿಲ್ಲದ ವಾದಗಳಲ್ಲ. ನಾಲ್ಕು ವರ್ಣದವರೂ ರಾಜನ ಕುದುರೆಯ ರಕ್ಷಣೆಯ ಏಕೈಕ ಉದ್ದೇಶದಿಂದ ಹೊರಟುನಿಂತಿದ್ದಾರೆ. ಅಲ್ಲಿ ಜಾತಿ-ಅಂತಸ್ತು- ಆರಾಧನಾ ಪದ್ಧತಿ- ವ್ಯಕ್ತಿತ್ವ ಭಿನ್ನವಾಗಿದ್ದರೂ ರಾಜನ ಕಾರ್ಯಕ್ಕೆ ಒಮ್ಮತ. ಇದು ನಿಜವಾದ ಸಮಾಜವಾದ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ